





ಪೂರ್ವಭಾವಿ ಸಭೆಯಲ್ಲಿ ನಿರ್ಧಾರ


ಪುತ್ತೂರು:ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ದೀಪೋತ್ಸವವನ್ನು ಡಿ.27 ರಂದು ನಡೆಸುವುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯು ನ.13 ರಂದು ದೇವಸ್ಥಾನದ ಸಭಾ ಭವನದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಹಿಂದೆ ಅಯ್ಯಪ್ಪ ಭಕ್ತ ಸಮಿತಿ ಮುಖಾಂತರ ದೇವಸ್ಥಾನದಲ್ಲಿ ಅಯ್ಯಪ್ಪ ದೀಪೋತ್ಸವವನ್ನು ನಡೆಸಲಾಗುತ್ತಿತ್ತು.ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿದೆ.ಆ ಗತ ವೈಭವ ಮತ್ತೆ ಮರುಕಳಿಸಬೇಕು ಎಂದು ಭಕ್ತಾದಿಗಳು ತಿಳಿಸಿದರು.ದೀಪೋತ್ಸವದಲ್ಲಿ ಭಕ್ತರು ಸೇರುತ್ತಾರೆ.ಆದರೆ ಅಯ್ಯಪ್ಪ ಮಾಲಾಧಾರಿಗಳ ಭಾಗವಹಿಸುವಿಕೆ ತೀರಾ ಕಡಿಮೆಯಾಗಿರುತ್ತದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.ಭಕ್ತರು ಸಹಕರಿಸಿದರೆ ಅಯ್ಯಪ್ಪ ದೀಪೋತ್ಸವವನ್ನು ನಡೆಸುವುದಾಗಿ ತಿಳಿಸಲಾಯಿತು.ಸಹಕಾರ ನೀಡುವುದಾಗಿ ಭಕ್ತಾದಿಗಳು ತಿಳಿಸಿದ್ದು ಡಿ.27 ರಂದು ಅಯ್ಯಪ್ಪ ದೀಪೋತ್ಸವವನ್ನು ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ದೇವಸ್ಥಾನದಿಂದ ವಸತಿ, ಊಟ, ಉಪಾಹಾರ:
ಇರುಮುಡಿ ಕಟ್ಟುವ ಸಂದರ್ಭದಲ್ಲಿ ಮತ್ತು ಅಯ್ಯಪ್ಪ ಮಾಲಾಧಾರಿಗಳಿಗೆ ಉಳಿದುಕೊಳ್ಳಲು ದೇವಸ್ಥಾನದಲ್ಲಿ ಸೌಲಭ್ಯ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಮಾಲಾಧಾರಿಗಳಿಗೆ ಊಟ, ಉಪಾಹಾರ ಹಾಗೂ ಉಳಿದುಕೊಳ್ಳುವ ಸೌಲಭ್ಯಗಳನ್ನು ದೇವಸ್ಥಾನದ ವತಿಯಿಂದ ಒದಗಿಸಲಾಗುವುದು.ಇದಕ್ಕೆ ಪೂರಕವಾಗಿ ಜನಸಂಖ್ಯೆ, ಮಾಲಾಧಾರಿಗಳ ಮಾಹಿತಿಯನ್ನು ನೀಡಬೇಕು.ನ.17ರಿಂದ ಜ.14ರ ತನಕ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದರು.





ಹೊರ ತಾಲೂಕು, ಜಿಲ್ಲೆಗಳಿಂದ ಶಬರಿಮಲೆ ಯಾತ್ರೆಗೆ ತೆರಳುವವರು ದೇವಳಕ್ಕೆ ಬಂದ ಸಂದರ್ಭದಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಲು ದೇವಸ್ಥಾನದಲ್ಲಿ ಸೌಲಭ್ಯ ಕಲ್ಪಿಸಿಕೊಡುವಂತೆ ಭಕ್ತಾದಿಗಳು ವಿನಂತಿಸಿದರು.ಪ್ರತಿಕ್ರಿಯಿಸಿದ ಅಧ್ಯಕ್ಷರು ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದರು.ಸುರಕ್ಷತೆ ಪ್ರಾಮುಖ್ಯವಾಗಿದ್ದು ಇಲ್ಲಿ ತಂಗುವವರ ಮಾಹಿತಿ ನೀಡುವಂತೆ ಅಧ್ಯಕ್ಷ ಕೇಶವ ಪ್ರಸಾದ್ ತಿಳಿಸಿದರು.
ಅನ್ನದಾನಕ್ಕೆ ದೇಣಿಗೆ:
ಅಯ್ಯಪ್ಪ ದೀಪೋತ್ಸವದ ಅನ್ನದಾನ ಸೇವೆಗೆ ಸ್ವಾಮಿ ಕಲಾ ಮಂದಿರದ ಮ್ಹಾಲಕ ಮಾಧವರವರು ರೂ.25,000 ದೇಣಿಗೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರಿಗೆ ಹಸ್ತಾಂತರಿಸಿದರು.
ಶಬರಿಮಲೆ ಅಯ್ಯಪ್ಪ ಭಕ್ತ ಸಮಿತಿಯ ಜಿಲ್ಲಾಧ್ಯಕ್ಷ ಗಣೇಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಲೋಕೇಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕೃಷ್ಣಪ್ರಸಾದ್ ಬೆಟ್ಟ, ಪುರಂದರ ಶೆಟ್ಟಿ, ಸುರೇಂದ್ರ ಆಚಾರ್ಯ ದೇವಾನಂದ, ಮನೋಜ್, ಅವಿನಾಶ್, ಪ್ರತಾಪ್, ಗೋಪಾಲ್ ಆಚಾರ್ಯ, ಗಣೇಶ್, ಸಂತೋಷ, ಅಶೋಕ್ ಸೇರಿದಂತೆ ಹಲವು ಮಂದಿ ಭಕ್ತರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ ಸ್ವಾಗತಿಸಿದರು.


            





