ಫಿಲೋಮಿನಾ ಕಾಲೇಜು ಗ್ರಂಥಾಲಯದಲ್ಲಿ ಪುಸ್ತಕ ಸಪ್ತಾಹ ಪ್ರದರ್ಶನ

0

ವಿದ್ಯಾರ್ಥಿಗಳು ಓದುವ, ಬರೆಯುವ ಹವ್ಯಾಸ ಬೆಳೆಸಿದಾಗ ಜ್ಞಾನ ವೃದ್ಧಿ-ವಂ| ಆಂಟನಿ ಪ್ರಕಾಶ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿಯಂತೆ ಗ್ರಂಥಾಲಯದಲ್ಲಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪುಸ್ತಕಗಳ ಆಸ್ತಿಯೇ ಇದೆ ಎಂದು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮತ್ತು ಬರೆಯುವ ಅಭ್ಯಾಸವನ್ನು ಬೆಳೆಸಿಕೊಂಡಾಗ ನಮ್ಮ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬಹುದು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೇರೊರವರು ಹೇಳಿದರು.

ನವೆಂಬರ್ 14 ರಿಂದ 20 ರವರೆಗೆ ಭಾರತದಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಗ್ರಂಥಾಲಯ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ಸಹಯೋಗದೊಂದಿಗೆ ಗ್ರಂಥಾಲಯದಲ್ಲಿ ನ.14 ರಿಂದ 19 ರವರೆಗೆ ಆಯೋಜಿಸಿದ ಪುಸ್ತಕ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತಾಡಿದರು. ಗ್ರಂಥಾಲಯವು ಶಿಕ್ಷಣದ ಅವಿಭಾಜ್ಯ ಅಂಗ, ಪ್ರಸ್ತುತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿ ಭವಿಷ್ಯವನ್ನು ಹಾಳುಗೆಡಹುತ್ತಿದ್ದಾರೆ. ಈ ಮೊಬೈಲ್ ಹಾವಳಿಯಿಂದ ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಬರೆಯುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಜೀವನವನ್ನು ಕಂಡುಕೊಳ್ಳುವವರಾಗಬೇಕು ಎಂದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ(ಐಕ್ಯೂಎಸಿ) ನಿರ್ದೇಶಕರು ಮತ್ತು ಉಪ ಪ್ರಾಂಶುಪಾಲರದ ಡಾ| ಎ.ಪಿ. ರಾಧಾಕೃಷ್ಣ ಸ್ವಾಗತಿಸಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗ್ರಂಥಪಾಲಕ ಮನೋಹರ್ ಎಸ್.ಜಿ. ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ವಿಜಯಕುಮಾರ್ ಮೊಳೆಯಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು, ಪ್ರಾಧ್ಯಾಪಕರು ಪಿ.ಯು ಕಾಲೇಜಿನ ಗ್ರಂಥಪಾಲಕ ಸಂತೋಷ್ ಮೊರಾಸ್, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಆಶಿಕ್, ಕಾರ್ಯದರ್ಶಿ ಅನುಶ್ರೀ, ಜೊತೆ ಕಾರ್ಯದರ್ಶಿ ಶಿವಾನಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪುಸ್ತಕಗಳ ಸಂಗ್ರಹವಿದೆ. ಪ್ರಸ್ತುತ ಗ್ರಂಥಾಲಯ ಸಪ್ತಾಹದಲ್ಲಿ ಸುಮಾರು 550ಕ್ಕೂ ಮಿಕ್ಕಿದ ಮೌಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ವಿದ್ಯಾರ್ಥಿಗಳು ಇದರ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಜ್ಞಾನವಂತರಾಗಿ.

-ಅಬ್ದುಲ್ ರಹ್ಮಾನ್ ಜಿ, ಕಾಲೇಜು ಆಯ್ಕೆ ಶ್ರೇಣಿ ಗ್ರಂಥಪಾಲಕರು

LEAVE A REPLY

Please enter your comment!
Please enter your name here