ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಸವ ವಸತಿ ಕಲ್ಯಾಣ ಯೋಜನೆಯಡಿ ಅನುದಾನ ಪಡೆದು ವಂಚಿಸಿದ ಆರೋಪದ ಪ್ರಕರಣ: ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಸುಜಾತ ಆರ್. ರೈ, ಪಿಡಿಒ, ತಾ.ಪಂ. ಇಒ, ಜಿ.ಪಂ. ಸಿಇಒ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

0

ಪುತ್ತೂರು: ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಸವ ವಸತಿ ಕಲ್ಯಾಣ ಯೋಜನೆಯಲ್ಲಿ ಅನುದಾನ ಪಡೆದು ವಂಚಿಸಿರುವ ಆರೋಪದ ಪ್ರಕರಣವೊಂದಕ್ಕೆ ಸಂಬಂಧಿಸಿ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆಗಿರುವ ಸುಜಾತ ಆರ್. ರೈ ಅಲಿಮಾರ ಸಹಿತ ನಾಲ್ವರ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. 34ನೇ ನೆಕ್ಕಿಲಾಡಿ ಗ್ರಾಮದ ಅಲಿಮಾರ ನಿವಾಸಿ ಪಿ.ಚಂದ್ರಹಾಸ ಶೆಟ್ಟಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು ಸುಜಾತ ಆರ್. ರೈ ಅಲಿಮಾರ, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಮತ್ತು ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ಸರಕಾರದ ಅನುದಾನದಲ್ಲಿ ಅವ್ಯವಹಾರ ಎಸಗಿ ಭ್ರಷ್ಟಾಚಾರ ನಡೆಸಿ ಸರಕಾರಕ್ಕೆ ವಂಚನೆ ಮಾಡಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಕರ್ನಾಟಕ ಲೋಕಾಯುಕ್ತರಿಗೆ ದೂರುದಾರ ಚಂದ್ರಹಾಸ ಶೆಟ್ಟಿ ಮನವಿ ಮಾಡಿದ್ದಾರೆ.

ದೂರಿನ ವಿವರ: 2013-14ನೇ ಸಾಲಿನಲ್ಲಿ ಕರ್ನಾಟಕ ಸರಕಾರದ ಬಸವ ವಸತಿ ಯೋಜನೆಯಡಿ ಪುತ್ತೂರು ತಾಲೂಕು ಉಪ್ಪಿನಂಗಡಿ ಹೋಬಳಿಯ 34 ನೆಕ್ಕಿಲಾಡಿ ಗ್ರಾಮದಲ್ಲಿ ಸುಜಾತ ರೈಯವರು ರೂ. 1,20,000 ಸಹಾಯಧನ ಪಡೆದುಕೊಂಡಿದ್ದಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವತಃ ಈ ಮನೆ ನಿರ್ಮಾಣದ ಕಾಮಗಾರಿಯನ್ನು ಹಂತವಾರು ವೀಕ್ಷಿಸಿ ಪ್ರತಿಯೊಂದು ಪರಿಶೀಲನೆ ಮಾಡಿ ನಿಯಮಾನುಸಾರ ಜಿಪಿಎಸ್ ಮಾಡಿ ಒಂಬತ್ತು ಚಿತ್ರ ಸಹಿತವಾಗಿ ಸರಕಾರದ ಜಾಲತಾಣದಲ್ಲಿ ದಾಖಲೀಕರಣ ಮಾಡಿದ್ದಾರೆ. ಆ ಮೂಲಕ ಸರಕಾರದ ಬಸವ ವಸತಿ ಯೋಜನೆಯ ಫಲಾನುಭವಿಯಾಗಿ ಆಗಿನ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈಯವರು ಪ್ರಯೋಜನ ಪಡೆದಿರುವುದರ ಕುರಿತಾಗಿ ಪಿಡಿಓ ಸ್ವತಃ ಮಾಹಿತಿ ಹೊಂದಿದ್ದಾರೆ. ಬಸವ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಯಾಗಿ ಪ್ರಯೋಜನ ಪಡೆದುಕೊಂಡು ಸದ್ರಿ ನಿರ್ದಿಷ್ಟ ಜಮೀನನ್ನು ಸರಕಾರಕ್ಕೆ ಅಡವು ಜವಾಬ್ದಾರಿ ಮಾಡಿ ಅಡಮಾನ ಪತ್ರವನ್ನು ಸಹಿ ಮಾಡಿ ನೀಡಿದ್ದಾರೆ. ಸದ್ರಿ ದಾಖಲೆಯು ಪಿಡಿಒರವರ ಸ್ವಾಮ್ಯತೆಯಲ್ಲಿದ್ದು ಈ ವಿಚಾರ ಹೆಚ್ಚು ಪಿಡಿಒಗೆ ತಿಳಿದಿದೆ. ಜತೆಗೆ, ಸುಜಾತ ರೈಯವರ ಪತಿ, ಅಲಿಮಾರ ನಿವಾಸಿ ರಾಧಾಕೃಷ್ಣ ರೈಯವರು ಕರ್ನಾಟಕ ಸರಕಾರದ ಬಡಜನರ ಕಲ್ಯಾಣ ಯೋಜನೆಯಡಿ 94 ಸಿ ಪ್ರಕಾರ ಅನಽಕೃತವಾಗಿ ರಚಿಸಿರುವ ಕಟ್ಟಡದ ಸಕ್ರಮ ಮಂಜೂರಾತಿಗಾಗಿ ಕರ್ನಾಟಕ ಭೂ ಕಂದಾಯ ನಿಯಮದಂತೆ 0.09 ಎಕ್ರೆ ಸರಕಾರಿ ಸ್ಥಳದಲ್ಲಿ 12 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ್ತವ್ಯ ಹೊಂದಿರುವುದಾಗಿ ಹೇಳಿಕೊಂಡು ದಿನಾಂಕ: 18.07.2016ರಂದು ಸಕ್ರಮ ಮಂಜೂರಾತಿಗೆ ಪುತ್ತೂರು ತಾಲೂಕು ತಹಶೀಲ್ದಾರ್‌ರಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಹಾಗೂ ಸದ್ರಿ ಪ್ರಸ್ತಾವನೆಯಲ್ಲಿ ತನ್ನ ಮನೆ ಕಟ್ಟಡ ಇದೆ ಎಂದು ತಿಳಿಸಿದ್ದಾರೆ. ಹಾಗೂ ಸರಕಾರದ ನಿಯಮಾನುಸಾರ ಈ ಮನೆ ಮತ್ತು ಅಡಿ ಸ್ಥಳವನ್ನು ಸಕ್ರಮೀಕರಣ ಹಕ್ಕುಪತ್ರ ಪ್ರಾಪ್ತಿಸಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುವ ಚಂದ್ರಹಾಸ ಶೆಟ್ಟಿಯವರು, ಅರ್ಜಿದಾರರು ಸಲ್ಲಿಸಿರುವ ಅರ್ಜಿಯ ಪ್ರತಿ, ಅನಧಿಕೃತ ನಿರ್ಮಾಣದ ಕ್ರಮಬದ್ಧಗೊಳಿಸುವಿಕೆಯ ಅರ್ಜಿ ನಮೂನೆ, ಅರ್ಜಿದಾರರು ಗ್ರಾಮಕರಣಿಕರ ಸಮಕ್ಷಮ ಸಲ್ಲಿಸಿದ ಹೇಳಿಕೆ, ಸಾರ್ವಜನಿಕರ ಸಮಕ್ಷಮ ತಯಾರಿಸಿದ ಮಹಜರು, ಮನೆ ಕಟ್ಟಡ ಮತ್ತು ಅದರ ಎದುರು ಮಾಲೀಕರು, ಅರ್ಜಿದಾರರು ಇರುವ ಚಿತ್ರ, ಅರ್ಜಿದಾರ ಸರಕಾರಕ್ಕೆ ನೋಟರಿ ಸಮಕ್ಷಮ ದೃಢೀಕರಿಸಿದ ಪ್ರಮಾಣ ಪತ್ರ, 34, ನೆಕ್ಕಿಲಾಡಿ ಗ್ರಾಮ ಪಂಚಾಯತ್ ದಾಖಲೆಗಳಲ್ಲಿ ಸದ್ರಿ ಮನೆ ಕಟ್ಟಡದ ಬಾಬ್ತು ಮನೆ ತೆರಿಗೆ ಸಂದಾಯ ರಶೀದಿಗಳ ಪ್ರತಿಗಳನ್ನು ಲಗತ್ತಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ದುರ್ಬಲ ಮತ್ತು ಬಡ ಜನತೆಯ ಕಲ್ಯಾಣದ ಸಲುವಾಗಿ ಲಭ್ಯ ಯೋಜನೆಯನ್ನು ಸುಜಾತ ರೈ ದುರುಪಯೋಗಪಡಿಸಿದ್ದಾರೆ. ಹಣದ ಕಬಳಿಕೆಗೆ ಪಿಡಿಒ ಕುಮ್ಮಕ್ಕು ನೀಡಿದ್ದಾರೆ. ತಾ.ಪಂ.ಇ.ಒ ಕಣ್ಮಚ್ಚಿ ಕುಳಿತು ಮೌನ ಸಮ್ಮತಿಯ ಮೂಲಕ ಅಕ್ರಮವನ್ನು ಪೋಷಿಸಿದ್ದಾರೆ. ಇದರಲ್ಲಿ ಸ್ವಕೀಯ ಹಿತಾಸಕ್ತಿ ಏನೂ ಇಲ್ಲದೇ ಇದ್ದರೂ ಸರಕಾರದ ಯೋಜನೆಯ ದುರುಪಯೋಗ, ಹಣ ಕಬಳಿಕೆ ಮಾಡಿದ ಸುಜಾತ ರೈರವರನ್ನು ರಕ್ಷಿಸುವಲ್ಲಿ ಗ್ರಾ.ಪಂ. ಪಿಡಿಒ, ತಾ.ಪಂ. ಇಓ ಮತ್ತು ಜಿ.ಪಂ. ಸಿಇಓರವರು ಬೆಂಗಾವಲಾಗಿ ನಿಂತು ಸರಕಾರದ ಯೋಜನೆ ದುರುಪಯೋಗಕ್ಕೆ ಹಸಿರು ನಿಶಾನೆ ತೋರಿದ್ದಾರೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ, ಯಾರೊಬ್ಬರೂ, ಅಕ್ರಮದಾರರ ವಿರುದ್ಧ ಕ್ರಮ ಜರುಗಿಸದೇ ಇರುವುದರಿಂದ ಸಾರ್ವಜನಿಕರಿಗೆ ಅನ್ಯಾಯ ಎಸಗಿದಂತಾಗಿದೆ. ಸುಜಾತ ರೈಯವರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರು ಹಾಗೂ ಪ್ರಕೃತ ಸದಸ್ಯರಾಗಿದ್ದು ಪಿಡಿಒ ಸ್ಥಳೀಯಾಡಳಿತದಲ್ಲಿ ಸರಕಾರದ ಪ್ರತಿನಿಽಯಾಗಿದ್ದುಕೊಂಡು ಸರಕಾರದ ಯೋಜನೆ ದುರುಪಯೋಗಪಡಿಸಲು ಶಾಮೀಲಾಗಿರುತ್ತಾರೆ. ಜಿ.ಪಂ. ಸಿಇಓ ಮತ್ತು ತಾ.ಪಂ. ಇ.ಓರವರು ತನಿಖೆಯನ್ನು ಪಿಡಿಓರವರಿಗೆ ವಹಿಸಿಕೊಟ್ಟು ಪ್ರಕರಣ ಮುಚ್ಚಿ ಹಾಕಲು ಕಾರಣಕರ್ತರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು ಪ್ರಕರಣದ ಗಂಭೀರತೆಯನ್ನು ಮನಗಂಡು ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಭ್ರಷ್ಟಾಚಾರದ ಮೂಲಕ ಸಂಭಾಳಿಸಿರುವುದು ವಾಸ್ತವ ಸತ್ಯ-ದೂರಿನಲ್ಲಿ ಉಲ್ಲೇಖ

ಗ್ರಾಮ ಪಂಚಾಯತದಲ್ಲಿ ಜನಪ್ರತಿನಿಧಿಯಾಗಿರುವ ಸುಜಾತ ಆರ್. ರೈ ಬಸವ ವಸತಿ ಯೋಜನೆಯಡಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ ಪ್ರಕಾರ ಮತ್ತು ಸರಕಾರಕ್ಕೆ ಅಡಮಾನ ಮಾಡಿಕೊಟ್ಟ ಜಮೀನಿನಲ್ಲಿ ನಿಯಮಾನುಸಾರ ಯಾವುದೇ ಕಟ್ಟಡವನ್ನೂ ನಿರ್ಮಿಸಿರುವುದಿಲ್ಲ. ಮತ್ತು ಸರಕಾರದ ಕಡೆಯಿಂದ ಬಡ ಜನರಿಗೆ ಮನೆ ರಹಿತರಿಗೆ, ಮನೆ ನಿರ್ಮಿಸಿಕೊಳ್ಳುವ ಸಲುವಾಗಿ ಕೊಡ ಮಾಡಿದ ಸವಲತ್ತೊಂದನ್ನು ನೇರಾನೇರ ದುರುಪಯೋಗಪಡಿಸಿಕೊಂಡಿರುತ್ತಾರೆ. ಹಾಗೂ ಸರಕಾರದ ತತ್ಸಂಬಂಧಿತ ನಿಯಮಾವಳಿಯ ಪಾಲನೆಯ ಸಲುವಾಗಿ ಪರಿಸರದಲ್ಲಿ ಯಾವುದೋ ಕಡೆಯಲ್ಲಿ ನಿರ್ಮಿಸುತ್ತಿರುವ ಮನೆಯೊಂದನ್ನು ತನ್ನದೆಂದು ಸ್ಥಾಪಿಸುವ ರೀತಿಯಲ್ಲಿ ಅಡಿಪಾಯ, ನಿರ್ಮಾಣದ ಹಂತಗಳಲ್ಲಿ ತೆಗೆದ ಫೋಟೋಗಳನ್ನು ಪಿಡಿಓಗೆ ಸಲ್ಲಿಸಿ ಅದನ್ನೇ ಸರಕಾರದ ಜಾಲತಾಣಕ್ಕೆ ಏರಿಸಿ ಸರಕಾರದ ವೇತನ ಪಡೆಯುವ, ಸರಕಾರದ ನೌಕರನಾಗಿರುವ ಗ್ರಾಮ ಪಂಚಾಯತದಲ್ಲಿ ಜನಪ್ರತಿನಿಧಿಯಾಗಿರುವ ಸುಜಾತ ರೈ ಸರಕಾರದ ಬೊಕ್ಕಸದ ಹಣವನ್ನು ಪಿಡಿಒರವರ ಸಂಪೂರ್ಣ ಸಹಾಯ, ಸಹಕಾರಗಳ ಮೂಲಕ, ಸಮ್ಮತಿಪೂರ್ವಕವಾಗಿ, ಬಡಜನರಿಗೆ ಲಭಿಸಬೇಕಾದ 1.20 ಲಕ್ಷ ರೂಪಾಯಿಗಳ ನಿಧಿಯನ್ನು ಸ್ವಂತಕ್ಕೆ ಅಕ್ರಮವಾಗಿ ಪಡೆಯುವ ಮೂಲಕ ಕಬಳಿಸಿರುತ್ತಾರೆ. ಸುಜಾತ ರೈರವರ ಅಽಕಾರದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಪಿಡಿಒ ಭಯದಿಂದ ಅಥವಾ ಪ್ರಲೋಭನೆಯಿಂದ ಭ್ರಷ್ಟಾಚಾರದ ಮೂಲಕ ಇದನ್ನು ಸಂಭಾಳಿಸಿರುತ್ತಾರೆಂಬುದು ವಾಸ್ತವ ಸತ್ಯವಾಗಿದೆ ಎಂದು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here