ಬನ್ನೂರು ಗ್ರಾ.ಪಂನಲ್ಲಿ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆ, ಮಹಿಳಾ ಗ್ರಾಮಸಭೆ

0

* ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯರ ಆಗ್ರಹ

ಪುತ್ತೂರು: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಗಳಾಗುತ್ತಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಬನ್ನೂರು ಗ್ರಾ.ಪಂ ಮಹಿಳಾ ಗ್ರಾಮ ಹಾಗೂ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆಯಲ್ಲಿ ಮಹಿಳೆಯರು ಆಗ್ರಹಿಸಿದ್ದಾರೆ.

ಬನ್ನೂರು ಗ್ರಾ.ಪಂನ ನರೇಗಾ ಯೋಜನೆಯ ಜಲಸಂಜೀವಿನಿ ವಿಸ್ತೃತ ಯೋಜನಾ ವರದಿ ತಯಾರಿಕೆಯ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನದಡಿ ಮಹಿಳಾ ಗ್ರಾಮ ಸಭೆಯು ನ.15 ರಂದು ಅಧ್ಯಕ್ಷೆ ಜಯ ಏಕ ರವರ ಅಧ್ಯಕ್ಷತೆಯಲ್ಲಿ ಬನ್ನೂರು ಗ್ರಾ.ಪಂ ಸಭಾ ಭವನದಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಹಿಳೆಯರು ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯ ಮಾರಾಟದ ಅಂಗಡಿಗಳಿಲ್ಲದಿದ್ದರೂ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಮಾರಾಟಗಳಾಗುತ್ತಿದೆ. ಇದರಿಂದ ಬಹಳಷ್ಟು ಮಂದಿ ಕಾರ್ಮಿಕರು ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲೇ ಕುಡಿದು ಹೋಗುತ್ತಿರುವುದು ಕಂಡುಬರುತ್ತದೆ. ವಾರ್ಡ್‌ಗಳಲ್ಲಿ ಸರಬರಾಜು ಆಗುತ್ತಿದೆ. ಮದ್ಯದ ಬಾಟಲಿಗಳು ರಸ್ತೆ ಬಿದಿಯಲ್ಲಿ ಬಿದ್ದಿರುತ್ತದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಮದ್ಯ ಮಾರಾಟದ ವಿರುದ್ಧ ಪಂಚಾಯತ್‌ನಿಂದ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.

ಸದಸ್ಯ ಶೀನಪ್ಪ ಕುಲಾಲ್ ಮಾತನಾಡಿ, ಅಬಕಾರಿ ಇಲಾಖೆಯ ನಿಯಮದಂತೆ 2 ಲೀಟರ್ ತನಕ ಮದ್ಯವನ್ನು ಸಂಗ್ರಹಿಸಿಡಲು ಅವಕಾಶವಿದೆ. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡಲು ಸಾಧ್ಯತೆಗಳಿವೆ. ಈ ಬಗ್ಗೆ ಮನೆಯಲ್ಲಿ ಮದ್ಯವನ್ನು ಸಂಗ್ರಹಿಸಿಡುವ ಪ್ರಮಾಣವನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಅಬಕಾರಿ ಇಲಾಖೆಗೆ ಮನವಿ ಮಾಡಬಹುದು ಎಂದು ಸಲಹೆ ನೀಡಿದರು. ಈ ಕುರಿತು ಪಂಚಾಯತ್‌ನ ವ್ಯಾಪ್ತಿಯಲ್ಲಿರುವ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಅಬಕಾರಿ ಇಲಾಖೆಗೆ ಮನವಿ ಮಾಡುವುದಾಗಿ ನಿರ್ಣಯಕೈಗೊಳ್ಳಲಾಯಿತು.

ಮಹಿಳಾ ಗ್ರಾಮ ಸಭೆಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ಸಂಶುದ್ದೀನ್ ಸಂಪ್ಯ ಮಾತನಾಡಿ, ಮಕ್ಕಳನ್ನು ಬೆಳೆಸುವ ಶೈಲಿ ಬದಲಾಗಬೇಕು. ಮಹಿಳಾ ಸಬಲೀಕರಣ ಗರ್ಭದ ಒಳಗಿನಿಂದ ಬರಬೇಕು. ಇದಾದಾಗ ಮಹಿಳಾ ಗ್ರಾಮ ಸಭೆಯ ಆವಶ್ಯಕತೆಯಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಭಯ ಬಿತ್ತುವುದರಿಂದ ಶೋಷಣೆಗಳು ನಡೆಯುತ್ತಿದೆ. ಮಹಿಳೆ ಹುಟ್ಟುನಿಂದ ಸಾವಿನ ತನಕ ಸುಖವಾಗಿ ಬದುಕುವುದೇ ಗ್ರಾಮ ಮಹಿಳಾ ಸಭೆಯ ಉದ್ದೇಶವಾಗಿದೆ. ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಮಾಡುವ ಮೂಲಕ ಮಹಿಳಾ ಸಂರಕ್ಷಣೆಗಾಗಿ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಹೆಣ್ಣು ಹುಟ್ಟಿದಾಗಲೇ ಮದುವೆ ಬಗ್ಗೆ ಯೋಚನೆ ಮಾಡುವುದಲ್ಲ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರಿಗೆ ಧೈರ್ಯ ತುಂಬಿ ಅವರು ಧೈರ್ಯವಾಗಿ ಬದುಕುವುದೇ ನಿಜವಾದ ಸಬಲೀಕರಣ ಎಂದರು.

ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ ಹೆಗಡೆ ಮಾತನಾಡಿ, ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ವಹಿಸಬೇಕು. ಕಾನೂನಿಲ್ಲಿ ರಕ್ಷಣೆಯೂ ಉಲ್ಲಂಘಿಸಿದರೆ ಶಿಕ್ಷೆಯೂ ಇದೆ. ಕಾನೂನಿನ ಬಗ್ಗೆ ಅರಿತು ಮುನ್ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಜಯ ಏಕ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಅನುದಾನಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದ್ದು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಮಹಾಂತೇಶ್ ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ನರೇಗಾ ಯೋಜನೆಯ ಇಂಜಿನಿಯರ್ ಶ್ರೀ ಲಕ್ಷ್ಮೀ ಯೋಜನೆಯ ಸೌಲಭ್ಯಗಳ ಮಾಹಿತಿ ನೀಡಿದರು. ಮಹಿಳಾ ಸಾಂತ್ವನ ಕೇಂದ್ರದ ನಿಶಾಪ್ರೀಯ ಮಹಿಳಾ ಸಂರಕ್ಷಣೆಯ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಹರಿಣಾಕ್ಷಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದರು.

ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಜಯಪ್ರಕಾಶ್, ಸದಸ್ಯರಾದ ಗಿರಿಧರ ಪಂಜಿಗುಡ್ಡೆ, ಗಣೇಶ್ ಹೆಗ್ಡೆ, ಶ್ರೀನಿವಾಸ ಪೆರ್ವೋಡಿ, ಹರಿಣಾಕ್ಷಿ, ಸ್ಮಿತಾ, ರಮಣಿ ಡಿ.ಗಾಣಿಗ, ತಿಮ್ಮಪ್ಪ ಪೂಜಾರಿ, ಶೀನಪ್ಪ ಕುಲಾಲ್, ಸುಪ್ರಿತಾ ಪ್ರಭು, ವಿಮಳ, ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿದರು. ಲೆಕ್ಕ ಸಹಾಯಕಿ ಜಯಂತಿ ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here