ರಾಷ್ಟ್ರೀಯ ಹೆದ್ದಾರಿ ಬದಿ ಕಟ್ಟಡ ಪರವಾನಿಗೆಗೆ ಎನ್‌ಒಸಿ ಕಡ್ಡಾಯ
ಪುತ್ತೂರು:ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ 40 ಮೀಟರ್ ಒಳಗಡೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್‌ನಿಂದ ಅನುಮತಿ ನೀಡಲಾಗುವುದಿಲ್ಲ. ಕಟ್ಟಡ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಿರಾಕ್ಷೇಪನಾ ಪತ್ರ ನೀಡಬೇಕು ಎಂದು ಕಬಕ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯು ನ.17 ರಂದು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪರವಾನಿಗೆ ಪಡೆದು ನಿರ್ಮಿಸಲಾದ ಹಳೆ ಕಟ್ಟಡಗಳಿಗೆ ಡೋರ್ ನಂಬರ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಂದರ್ಭದಲ್ಲಿ ಪಿಡಿಓ ಆಶಾ ರವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಿಂದ 40 ಮೀಟರ್ ಒಳಗಡೆ ಹೊಸ ಕಟ್ಟಡ ನಿರ್ಮಾಣ, ವಿಸ್ತರಣೆ ಹಾಗೂ ನವೀಕರಣಕ್ಕೆ ಪಂಚಾಯತ್‌ನಿಂದ ಪರವಾನಿಗೆ ನೀಡಲಾಗುವುದಿಲ್ಲ. 40 ಮೀಟರ್‌ನಿಂದ ಹೊರತಾಗಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಿರಾಕ್ಷೇಪನಾ ಪತ್ರ ಇದ್ದರೆ ಮಾತ್ರ ಅನುಮತಿ ನೀಡಲಾಗುವುದು. 2018-19, 2019,20 ರಲ್ಲಿ ಲೈಸನ್ಸ್ ಪಡೆದು ನಿರ್ಮಿಸಲಾದ ಕಟ್ಟಡಗಳಿಗೆ ಮಾತ್ರ ಡೋರ್ ನಂಬರ್ ನೀಡಲಾಗುವುದು ಎಂದು ತಿಳಿಸಿದರು.
ಹಳೇ ಕಟ್ಟಡಗಳಿಗೆ ಡೋರ್ ನಂಬರ್:
ಪಂಚಾಯತ್‌ನಿಂದ ಪರವಾನಿಗೆ ಪಡೆದು ನಿರ್ಮಿಸಲಾದ ಕಟ್ಟಡಗಳಿಗೆ ಡೋರ್ ನಂಬರ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಂಚಾಯತ್‌ಗೆ ಆದಾಯದ ದೃಷ್ಠಿಯಿಂದ ವಾಣಿಜ್ಯ ಕಟ್ಟಡಗಳಿಗೆ ಡೋರ್ ನಂಬರ್ ನೀಡಬಹುದು ಎಂದು ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ಅಭಿವೃದ್ಧಿಗೆ ಆದತೆ ನೀಡಲಿ:
ಸ್ವಚ್ಚತಾ ಓಟ ನಡೆಸುವಂತೆ ಸರಕಾರದ ಸುತ್ತೋಲೆಯನ್ನು ಪಿಡಿಓ ಆಶಾರವರ ಸಭೆಯಲ್ಲಿ ಮಂಡಿಸಿದಾಗ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಎಲ್ಲಾ ಕಾರ್ಯಕ್ರಮಗಳು ಸದಸ್ಯರಿಗಾಗಿ ಸೀಮಿತವಾಗಿದೆ. ಜನರಿಗೆ ಬೇಕಾದ ಕೆಲಸಗಳು ನಡೆಯಬೇಕು. ಗ್ರಾಮದ ಅಭಿವೃದ್ಧಿಯಾಗಬೇಕು. ಇದಕ್ಕೆ ಸರಕಾರ ಆದ್ಯತೆ ನೀಡಲಿ ಎಂದು ಹೇಳಿದರು.
ನ.21 ಮಹಿಳಾ ಗ್ರಾಮ ಸಭೆ:
ಪಂಚಾಯತ್‌ನ ದೂರದೃಷ್ಠಿ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಗ್ರಾಮ ಸಭೆಯನ್ನು ನ.೨೧ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಸುವುದಾಗಿ ತೀರ್ಮಾಣಿಸಲಾಯಿತು.
ನ.30ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ:
ಗ್ರಾ.ಪಂ ಪಂಚಾಯತ್‌ನಿಂದ ಈ ಸಾಲಿನಲ್ಲಿ ನಡೆಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಹಿಂದುರುದ್ರ ಭೂಮಿ, ಘನತ್ಯಾಜ್ಯ ವಿಲೇವಾರಿ ಘಟಕ, ಮುರದ ಉದ್ಯಾನವನ, ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ, ಎಸ್ಸಿ, ಎಸ್ಟಿ 80 ಫಲಾನುಭವಿಗಳಿಗೆ ವಿವಿಧ ಪೀಠೋಪಕರಣಗಳು, ಅಂಗವಿಕಲರಿಗೆ ವಿವಿಧ ಸೌಲಭ್ಯಗಳ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಾಸಕರ ರೂ.೮೦ಲಕ್ಷ ಅನುದಾನದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರೂ.80ಲಕ್ಷ ಅನುದಾನ ಕಾಮಗಾರಿಗಳ ಶಿಲಾನ್ಯಾಸ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರು, ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸಲಾಗುವುದು ಎಂದು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಹೇಳಿದರು.
ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯರಾದ ಶಾಬಾ ಕೆ., ರಾಜೇಶ್ ಪೋಳ್ಯ, ನಝೀರ್, ಸುಶೀಲ, ಗೀತಾ, ಪುಷ್ಪಾ, ವಾರಿಜ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಆಶಾ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ವಂದಿಸಿದರು. ಸಿಬಂದಿಗಳು ಸಹಕರಿಸಿದರು.