ಪುತ್ತೂರು:2020-21ನೇ ಸಾಲಿನ ರಾಜ್ಯ ಮಟ್ಟದ `ಗಾಂಧಿ ಗ್ರಾಮ ಪುರಸ್ಕಾರ’ ಪಡೆದುಕೊಂಡಿರುವ ಆರ್ಯಾಪು ಗ್ರಾಮ ಪಂಚಾಯತ್ ಡಾ|ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿದೆ.
ನ.26ರಂದು ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿರುವ `ಹೊಳಪು-2022′ ಜನಾಧಿಕಾರದ ಸಂಚಲನ ಜನಪ್ರತಿನಿಧಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ|ಶಿವರಾಮ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಿದೆ.
ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ಎಲ್ಲಾ ಮನೆಗಳಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಹಾಗೂ ಸೋಲಾರ್ ಬೀದಿ ದೀಪಗಳ ಅಳವಡಿಕೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಗ್ರಾಮ ಸಭೆ, ವಾರ್ಡ್‌ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿರುತ್ತದೆ. ಯುವಜನ ಮತ್ತು ಕ್ರೀಡೆಗೆ ಅನುದಾನ ಬಳಕೆ, ವಿಶೇಷ ಚೇತನರಿಗೆ ಮೀಸಲು ಅನುದಾನದ ಸಂಪೂರ್ಣ ಬಳಕೆ, ಪ.ಜಾತಿ. ಪ. ಪಂಗಡದ ಅನುದಾನ ಸಂಪೂರ್ಣ ಬಳಕೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಎಲ್ಲಾ ಮನೆಗಳಿಗೆ ಶೌಚಾಲಯ ಹಾಗೂ ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿ ಅಳವಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ.
ಅಲ್ಲದೆ ವಿನೂತನ ಚಟುವಟಿಕೆಗಳಾದ ಗ್ರಾ.ಪಂನ ಕುಡಿಯುವ ನೀರಿನ ಘಟಕಗಳಿಗೆ ಸೋಲಾರ್ ಅಳವಡಿಕೆ, ಬೀದಿ ದೀಪಗಳ ವಿದ್ಯುತ್ ಉಳಿತಾಯಕ್ಕೆ ಟೈಮರ್ ಅಳವಡಿಕೆ, ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ನಿಯಂತ್ರಣಕ್ಕೆ ಮೊಬೈಲ್ ತತ್ರಾಂಶ ಬಳಕೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ತಂತ್ರಾಂಶ ಬಳಕೆ ಹಾಗೂ ತೆರಿಗೆ ವಸೂಲಿಗೆ ಕ್ಯೂಆರ್ ಸ್ಕ್ಯಾನ್ ಅಳವಡಿಕೆ ಅಳವಡಿಸಿಕೊಂಡಿದೆ. 2009 ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರ, 2022-23ನೇ ಸಾಲಿನಲ್ಲಿ ಅಮೃತಗ್ರಾಮ ಪುರಸ್ಕಾರವನ್ನು ಆರ್ಯಾಪು ಗ್ರಾಮ ಪಂಚಾಯತ್ ಪಡೆದುಕೊಂಡಿತ್ತು.