ಪುತ್ತೂರು: ಅಭಿವೃದ್ಧಿ ಸಂದರ್ಭದಲ್ಲಿ ಟೀಕೆಗಳು ಸಹಜ. ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಹೇಳಿದರು.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನ.23ರಂದು ನಡೆದ ಬಿಜೆಪಿ ನಗರ ಮಂಡಲದ ಕಾರ್ಯ ನಿರ್ವಹಣಾ ತಂಡದ ಸಭೆಯಲ್ಲಿ ಅವರು ಮಾತನಾಡಿದರು.
ಪುತ್ತೂರು ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದು 2 ವರ್ಷವನ್ನು ಪೂರೈಸಿದ ಸಂದರ್ಭದಲ್ಲಿ ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆಯಂತೆ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಿದೆವು. ನಗರಸಭೆಯಲ್ಲಿ ಈಗಾಗಲೇ ಕಳೆದ ಅಮೃತ ನಗತ್ಥೋನದಲ್ಲಿ ಸುಮಾರು ರೂ. 30 ಕೋಟಿಯಷ್ಟು ಅನುದಾನ ಬಂದಿದ್ದು, ಅದರಲ್ಲಿ ಈಗಾಗಲೇ ಪ್ರತಿ ವಾರ್ಡ್‌ಗಳಿಗೆ ರೂ. 25 ಲಕ್ಷದಂತೆ ಹಂಚಿಕೆ ಮಾಡಿದ್ದು, ಒಂದಷ್ಟು ಮುಖ್ಯರಸ್ತೆಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ರೂ. 3 ಕೋಟಿ ವೆಚ್ಚದಲ್ಲಿ ಎಪಿಎಂಸಿ ರಸ್ತೆ ಮತ್ತು ಬಲ್ನಾಡು ಉಳ್ಳಾಲ್ತಿ ಭಂಡಾರ ಬರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಇಂತಹ ಅಭಿವೃದ್ಧಿಯ ಸಂದರ್ಭದಲ್ಲಿ ಒಂದಷ್ಟು ಟೀಕೆಗಳು ನಗರಸಭೆ ಮೇಲೆ ಬರುವುದು ಸಹಜ. 2 ವರ್ಷಗಳಲ್ಲಿ ವಾರ್ಡ್‌ಮಟ್ಟದಲ್ಲಿ ಸುಮಾರು 50ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ರಸ್ತೆ ಅಗಲೀಕರಣ ಮಾಡಿದ್ದೇವೆ. ಸ್ಮಾರ್ಟ್ ಸಿಟಿ ಬಸ್‌ನಿಲ್ದಾಣ, ಪಾರ್ಕ್‌ಗಳ ನಿರ್ಮಾಣ ಮಾಡಿದ್ದೇವೆ. ಇವೆಲ್ಲ ಸರಕಾರದ ಸುತ್ತೋಲೆಯಂತೆ ಮಾಡಲಾಗುತ್ತದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಬಂದಾಗ ತಲೆಕೆಡಿಸಿಕೊಳ್ಳದೆ ಜನರಿಗೆ ಏನು ಅಶ್ವಾಸನೆ ಕೊಟ್ಟಿದ್ದೇವೆಯೋ ಅದನ್ನು ಖಂಡಿತಾ ಈಡೇರಿಸಲಿದ್ದೇವೆ.
ಇದರ ಜೊತೆ ದೇಶದಲ್ಲೇ ಪುತ್ತೂರು ನಗರಸಭೆ ಮಾದರಿ ನಗರಸಭೆ ಆಗಲಿದೆ. ಅನುದಾನದ ಹಂಚಿಕೆಯಲ್ಲೂ ರಾಜಕೀಯ ಮಾಡದೆ 31 ವಾರ್ಡ್‌ಗಳಲ್ಲೂ ಒಂದೇ ರೀತಿಯ ಕೆಲಸ ಆಗಿದೆ. ನಗರಸಭೆ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಲ್ಲಿ ನನ್ನಲ್ಲಿ ಅಥವಾ ಪೌರಾಯುಕ್ತರಲ್ಲಿ ವಿಚಾರಿಸಿ, ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ ಎಂದರು.
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ವಿಶೇಷ ಕಾರ್ಯ ನಿರ್ವಹಣಾ ತಂಡದ ಸಭೆಯ ಅವಧಿ ಪಡೆದು ಕೊಂಡು ಮುಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ನಡೆಯಬೇಕಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್ ಪ್ರಾರ್ಥಿಸಿದರು. ನಗರ ಮಂಡಲ ಉಪಾಧ್ಯಕ್ಷ ಇಂದು ಶೇಖರ್ ಸ್ವಾಗತಿಸಿದರು. ಅರ್ಪಣಾ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಯುವರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್.ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.