ವಿಟ್ಲ: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿರುದ್ಧ ಅನುಮತಿ ರಹಿತ ಪ್ರತಿಭಟನೆ- ಆರೋಪಿಗಳು ಖುಲಾಸೆ

0

ವಿಟ್ಲ: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿರುವುದನ್ನು ಖಂಡಿಸಿ ವಿಟ್ಲದಲ್ಲಿ ಅನುಮತಿ ರಹಿತ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿದ್ದ ಪ್ರಕರಣ ಸಂಬಂಧಿಸಿದಂತೆ ಅಯ್ಯಪ್ಪ ಭಕ್ತರ ವಿರುದ್ಧ ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣವು ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ.

2018ರಲ್ಲಿ ಕೇರಳ ಸರಕಾರ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿರುವುದನ್ನು ಖಂಡಿಸಿ ದೇಶಾದ್ಯಂತ ಹೋರಾಟ ಸಮಿತಿ ರಚನೆಯಾಗಿ ಹೋರಾಟ ನಡೆದಿತ್ತು. ಅದೇ ರೀತಿ ವಿಟ್ಲದಲ್ಲಿಯೂ ಹೋರಾಟ ಸಮಿತಿ ರಚನೆಯಾಗಿತ್ತು. ಅದರಡಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಿದ ವಿಟ್ಲದ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಲು ಅನುಮತಿಗಾಗಿ ವಿಟ್ಲ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಆದರೂ ಭಕ್ತರು ವಿಟ್ಲ ಮೇಗಿನಪೇಟೆಯಿಂದ ಮೆರವಣಿಗೆ ಹೊರಟು ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದವರ ಪೈಕಿ ಹಿಂದೂ ಸಂಘಟನೆ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಕಲ್ಲಡ್ಕ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ವಿಟ್ಲ, ಅರುಣ್ ಎಂ. ವಿಟ್ಲ, ಜಯಂತ ವಿಟ್ಲ ಪ್ರವೀಣ್, ರವಿಶಂಕರ್, ರವಿ ಬಿ.ಕೆ., ರಾಜು ಪೂಜಾರಿ, ಕೃಷ್ಣಪ್ಪ, ಉದಯ ಕುಮಾರ್, ಅಕ್ಷಯ್ ರಜಪೂತ್, ದಯಾನಂದ ಉಜಿರೆಮಾರು, ಸಂಚಾಲಕರಾದ ರಮಾನಾಥ್ ವಿಟ್ಲ, ಜಯ ಕೊಟ್ಟಾರಿ, ಯತೀಶ್ ಪೆರುವಾಯಿ, ವರುಣ್ ರೈ, ಜಗದೀಶ್ ಪೂಜಾರಿ ಪಾನೆಮಜಲು ಸಹಿತ ಹಲವರ ವಿರುದ್ಧ ವಿಟ್ಲ ಠಾಣಾ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ರವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬಂಟ್ವಾಳದ ನ್ಯಾಯಾಲಯವು ಆರೋಪಿಗಳೆಲ್ಲರೂ ನಿರ್ದೋಷಿಗಳೆಂದು ಪ್ರಕರಣವನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಆರೋಪಿಗಳ ಪರವಾಗಿ ವಕೀಲರಾದ ಜಯರಾಮ ರೈ ವಾದಿಸಿದರು. ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ನ.24ರಂದು ನಡೆದಿದ್ದು, ಅದೇ ದಿನ ನ್ಯಾಯಾಲಯದಲ್ಲಿ ಜಯ ಸಿಕ್ಕಿರುವುದು ಬಹಳ ವಿಶೇಷವಾಗಿದೆ ಎಂದು ಅಯ್ಯಪ್ಪ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here