ಪುತ್ತೂರು: ಕುಂಬ್ರ ಜಂಕ್ಷನ್‌ನಲ್ಲಿರುವ ಪ್ರಯಾಣಿಕರ ಬಸ್ಸು ತಂಗುದಾಣಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತಂಗುದಾಣದ ಮೇಲ್ಛಾವಣಿಗೆ ಹಾನಿಯುಂಟಾದ ಘಟನೆ ನ.24 ರ ರಾತ್ರಿ ನಡೆದಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಜಂಕ್ಷನ್‌ನಲ್ಲಿರುವ ತಂಗುದಾಣಕ್ಕೆ ರಾತ್ರಿ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಂಗುದಾಣದ ಮೇಲ್ಛಾವಣಿ ಅರ್ಧ ಕುಸಿದಿದೆ. ಬಸ್ಸು ತಂಗುದಾಣಕ್ಕೆ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿಯದ ಕಾರಣ ಕುಂಬ್ರ ವರ್ತಕರ ಸಂಘದಿಂದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಪ್ರ.ಕಾರ್ಯದರ್ಶಿ ಭವ್ಯ ರೈ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ರೈ ಪರ್ಪುಂಜರವರುಗಳು ಠಾಣಾ ಸಿಬ್ಬಂದಿ ಹರ್ಷಿತ್‌ರವರಿಗೆ ಮನವಿ ನೀಡಿದ್ದು ತಂಗುದಾಣಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂಗುದಾಣದ ಮೇಲ್ಛಾವಣಿಗೆ ಹಾನಿಯಾಗಿದ್ದು ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಂಗುದಾಣದಲ್ಲಿ ನಿಲ್ಲಲು ಕಷ್ಟಸಾಧ್ಯವಾಗಿದೆ. ವಾಹನ ಚಾಲಕನ ಅಜಾರೂಕತೆಯಿಂದ ಈ ಅವಘಡ ಸಂಭವಿಸಿದ್ದು ವಾಹನ ಚಾಲಕನ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಿಸಿ ಕ್ಯಾಮರ ಪರಿಶೀಲನೆ:ಮನವಿಗೆ ಶೀಘ್ರವಾಗಿ ಸ್ಪಂದಿಸಿದ ಗ್ರಾಮಾಂತರ ಠಾಣಾ ಎಸ್.ಐ ಉದಯರವಿಯವರು ಸಿಸಿ ಕ್ಯಾಮರಾ ಪರಿಶೀಲನೆಗೆ ಸಿಬ್ಬಂದಿಗಳಿಗೆ ಆದೇಶ ನೀಡಿದ್ದು ಪಿಕ್‌ಅಪ್ ವಾಹನವೊಂದು ತಂಗುದಾಣಕ್ಕೆ ಡಿಕ್ಕಿ ಹೊಡೆದು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ.