2023 ರಲ್ಲಿ ಕಬಡ್ಡಿ ಟೂರ್ನಮೆಂಟ್ ನಡೆಸಲು ನಿರ್ಧಾರ
ಪುತ್ತೂರು: ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಸರ್ವ ಸದಸ್ಯರ ಸಭೆಯು ನ.24 ರಂದು ದರ್ಬೆಯಲ್ಲಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ರೈ ನೇಸರರವರ ಅಧ್ಯಕ್ಷತೆಯಲ್ಲಿ ಜರಗಿತು.
2023ರಲ್ಲಿ ಟೂರ್ನಮೆಂಟ್ ನಡೆಸಲು ನಿರ್ಧಾರ:
ಪುತ್ತೂರಿನ ಕಿಲ್ಲೆ ಮೈದಾನದಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ಭವ್ಯ ವೇದಿಕೆಯಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಸಂಯುಕ್ತ ಆಶ್ರಯದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ 5 ನೇ ವರ್ಷದ ಮ್ಯಾಟ್ ಅಂಕಣದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಪ್ರೊ ಕಬಡ್ಡಿ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟವನ್ನು ನಡೆಸಲಾಗುತ್ತಿತ್ತು.
2018ರಲ್ಲಿ ಈ ಟೂರ್ನಿಯು ನಡೆಸಲಾಗಿದ್ದು ಬಳಿಕ ಕೊರೋನಾ ಮಹಾಮಾರಿ ಹಿನ್ನೆಲೆ ಹಾಗೂ ಇತರ ಕಾರಣಗಳಿಂದಾಗಿ ಈ ಟೂರ್ನಿ ಸ್ಥಗಿತಗೊಂಡಿತ್ತು. ಇದೀಗ ಅಸೋಸಿಯೇಶನ್‌ನ ಸದಸ್ಯರ ಪ್ರೋತ್ಸಾಹದ ಮೇರೆಗೆ 2023ರ ಆರಂಭದಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿ ಅದ್ದೂರಿ ಕಬಡ್ಡಿ ಟೂರ್ನಮೆಂಟ್ ನಡೆಸುವುದಾಗಿ ಸಭೆಯಲ್ಲಿ ಸರ್ವ ಸಮ್ಮತಿ ವ್ಯಕ್ತವಾಗಿದ್ದು, ಅಸೋಸಿಯೇಶನ್ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಯವರ ಮುಂದಾಳತ್ವದಲ್ಲಿ ಕಬಡ್ಡಿ ಟೂರ್ನಮೆಂಟನ್ನು ಆಯೋಜಿಸಲಾಗುವುದು ಎಂದು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡರವರು ಹೇಳಿದರು.
ಸಭೆಯಲ್ಲಿ ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಹಬೀಬ್ ಮಾಣಿ, ರಫೀಕ್ ಎಂ.ಕೆ, ಸತ್ಯನಾರಾಯಣ ರೈ, ಸುಧಾಕರ್ ರೈ, ಪುರುಷೋತ್ತಮ ಕೋಲ್ಫೆ, ಸಿದ್ಧೀಕ್ ಕೆ.ಎಂ, ಮೊಹಮದ್ ಝಿಯಾದ್, ನವನೀತ್ ಬಜಾಜ್, ಅಶ್ವತ್ಥ್ ಕೆ.ಎಸ್, ಮನೋಹರ್ ಎನ್, ದಾಮೋದರ್ ಡಿ., ರಾಧಾಕೃಷ್ಣ ರೈ ಪಟ್ಟೆರವರು ಉಪಸ್ಥಿತರಿದ್ದರು. ಅಸೋಸಿಯೇಶನ್ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ಕೋಶಾಧಿಕಾರಿ ರಝಾಕ್ ಎಚ್ ವಂದಿಸಿದರು.