ಮಿತ್ತಬಾಗಿಲು: ಕಲಿಕಾ ಚೇತರಿಕೆಯ ಬಗ್ಗೆ ವಿಶೇಷ ಸಮಾಲೋಚನಾ ಕಾರ್ಯಾಗಾರ: ಗುಣಾತ್ಮಕ ಕಲಿಕೆಯೇ ಶಿಕ್ಷಣ ಸಂಸ್ಥೆಗಳ ಆದ್ಯತೆ – ಎಚ್ ಎಸ್ ವಿರೂಪಾಕ್ಷಪ್ಪ

0

ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಮಿತ್ತಬಾಗಿಲು ಸರಕಾರಿ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗಾಗಿ, ಒಂದು ದಿನದ ಕಲಿಕಾ ಚೇತರಿಕೆಯ ಬಗ್ಗೆ ವಿಶೇಷ ಸಮಾಲೋಚನಾ ಕಾರ್ಯಾಗಾರ ಜರುಗಿತು.

ಈ ಕಾರ್ಯಾಗಾರವನ್ನು ಉದ್ಘಾಟಿಸಿದ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎಸ್ ವಿರೂಪಾಕ್ಷಪ್ಪರವರು ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಕೋವಿಡ್ ಕಾಲದಲ್ಲಿ ಉಂಟಾದ ಕಲಿಕಾ ಕೊರತೆಯನ್ನು ತುಂಬಲು ಸರಕಾರವು ಜಾರಿಗೆ ತಂದಿರುವ ಶೈಕ್ಷಣಿಕ ಯೋಜನೆಯೇ ಕಲಿಕಾ ಚೇತರಿಕೆ. ಈ ಮೂಲಕ ಮಕ್ಕಳಲ್ಲಿ ಸಾಮರ್ಥ್ಯ ತುಂಬುವಂತಹ, ಪಠ್ಯವನ್ನು ಆಧರಿಸಿ, ಚಟುವಟಿಕೆಗಳಾಧಾರಿತವಾಗಿ ವಿಶೇಷ ರೀತಿಯಲ್ಲಿ ಸಂಯೋಜಿಸಿರುವಂತಹ ಕಲಿಕಾ ಪ್ರಯೋಗ ಇದಾಗಿದೆ. ಇಂತಹ ಪ್ರಯೋಗವನ್ನು ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಗುಣಾತ್ಮಕವಾದ ಕಲಿಕೆಯೇ ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಎಲ್ಲ ಶಿಕ್ಷಕರೂ ಸಂಪನ್ಮೂಲ ವ್ಯಕ್ತಿಗಳೇ ಆಗಿರುತ್ತಾರೆ. ತರಬೇತಿಯು ಪರಸ್ಪರ ಹಂಚಿಕೊಳ್ಳುವುದರ ಮೂಲಕ ನಡೆಯಬೇಕು ಮತ್ತು ಗುಣಾತ್ಮಕವಾದ ಕಲಿಕಾ ವ್ಯವಸ್ಥೆಯನ್ನು ಸಾಧಿಸಲು ತರಬೇತಿಯು ಪ್ರೇರಣೆಯನ್ನೂ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಲೋಚನಾ ಸಭೆಯ ಧ್ಯೇಯೋದ್ಧೇಶಗಳ ಕುರಿತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶಂಭು ಶಂಕರ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ  ಪುಷ್ಪಕಲಾರವರು ವಹಿಸಿದ್ದರು. ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕೋಡಿ ನಾರಾಯಣ ಗೌಡರು ಆಗಮಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಪರಿವೀಕ್ಷಣಾಧಿಕಾರಿಗಳಾದ ಸಿದ್ಧಲಿಂಗ ಸ್ವಾಮಿ, ವಲಯ ಸಂಪನ್ಮೂಲ ಅಧಿಕಾರಿಗಳಾದ ಮೋಹನ್, ವಿಷಯ ವೇದಿಕೆಯ ಸಂಪನ್ಮೂಲ ವ್ಯಕ್ತಿಗಳಾದ ರಾಧಾಕೃಷ್ಣ ಕೊಯ್ಯೂರು, ಜಿಲ್ಲಾ ಸಂಪನ್ಮೂಲ ಶಿಕ್ಷಕರಾದ ಪೂರ್ಣಿಮಾ ಬೆಳ್ತಂಗಡಿ, ದ ಕ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಮ್ಮದ್ ರಿಯಾಜ್, ಬೆಳ್ತಂಗಡಿ ತಾಲೂಕಿನ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಮಯ್ಯ ಉಜಿರೆ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ರಾಧಾಕೃಷ್ಣ ಕೊಯ್ಯೂರು ಮತ್ತು ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಿಯಾಜ್ ರವರನ್ನು ಗೌರವಿಸಲಾಯಿತು. ಇವರನ್ನು ನಡ ಪ್ರೌಢಶಾಲೆಯ ಶಿಕ್ಷಕರಾದ ಶಿವಪುತ್ರ ಮತ್ತು ಪುಂಜಾಲಕಟ್ಟೆ ಪ್ರೌಢಶಾಲೆಯ ಶಿಕ್ಷಕರಾದ ಧರಣೇಂದ್ರ ಕೆ ಜೈನ್ ರವರು ಸಭೆಗೆ ಪರಿಚಯಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಬೆಳ್ತಂಗಡಿ ತಾಲೂಕು ಸಮಾಜ ವಿಜ್ಞಾನ ವಿಷಯ ವೇದಿಕೆಯ ಮುಖ್ಯಸ್ಥರೂ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿಗಳೂ ಆಗಿರುವ ರಾಮಕೃಷ್ಣ ಭಟ್ ಬೆಳಾಲುರವರು ಸ್ವಾಗತಿಸಿ, ಉಜಿರೆ ಹಳೆಪೇಟೆ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ವೀಣಾ ಶ್ಯಾನಭೋಗ್ ರವರು ವಂದಿಸಿದರು. ಮಿತ್ತಬಾಗಿಲು ಶಾಲೆಯ ಶಿಕ್ಷಕರಾದ ವಿರೂಪಾಕ್ಷಪ್ಪರವರು ಕಾರ್ಯಕ್ರಮ ನಿರೂಪಿಸಿದರು. ಸಮಾಲೋಚನಾ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳ ನೂರ ಇಪ್ಪತ್ತಕ್ಕಿಂತ ಅಧಿಕ ಶಿಕ್ಷಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here