ಫಿಲೋಮಿನಾ ಪ್ರೌಢಶಾಲಾ ವಾರ್ಷಿಕೋತ್ಸವ ಸಮಾರಂಭ

0

ಕಷ್ಟಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಿ-ಸಹಜ್ ರೈ

ಪುತ್ತೂರು: ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ಸಂಪಾದಿಸುವೆನು ಎನ್ನುವ ಕನಸನ್ನು ಹೊಂದುವವರಾಗಿ. ಜೀವನದಲ್ಲಿ ಕಷ್ಟಗಳು ಎದುರಾದಾಗ ಅವುಗಳಿಗೆ ಎದೆಗುಂದದೆ ಆ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಜೀವನದಲ್ಲಿ ಬೆಳೆಸಿಕೊಂಡಾಗ ಯಶಸ್ಸು ನಿಶ್ಚಿತವಾಗಿ ತಮ್ಮದಾಗಲಿದೆ ಎಂದು ಉದ್ಯಮಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಹಜ್ ಜೆ.ರೈ ಬಳಜ್ಜರವರು ಹೇಳಿದರು.

ನ.28ರಂದು ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಬೆಳಿಗ್ಗೆ ಜರಗಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿಯ ಭವಿಷ್ಯದ ಕಾಲಘಟ್ಟವಾಗಿದೆ. ಹೇಗೆ ತನ್ನ ಭವಿಷ್ಯ ರೂಪಿಸಿಕೊಳ್ಳುವುದು, ಯಾವ ನಿರ್ಧಾರ ಹೊಂದಿದರೆ ಉತ್ತಮ ಎಂಬುದರ ಬಗ್ಗೆ ದೃಢ ನಿರ್ಧಾರ ಹಾಗೂ ಭವಿಷ್ಯದ ಬಗೆಗಿನ ಯೋಚನೆಗಳನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುವ ಕಾಲಘಟ್ಟವಾಗಿದೆ. ಜೀವನದಲ್ಲಿ ಸೋಲು ಬರುವುದು ಸಹಜ ಆದರೆ ಸೋಲಿಗೆ ಸಾಯುವ ನಿರ್ಧಾರ ಮಾತ್ರ ಎಂದಿಗೂ ಸಲ್ಲದು. ಸೋಲೇ ಜೀವನಕ್ಕೆ ಸೋಪಾನ ಎಂಬಂತೆ ಉತ್ತಮ ಜೀವನವನ್ನು ಕಂಡುಕೊಳ್ಳುವಲ್ಲಿ ದೃಢ ಹೆಜ್ಜೆಯನ್ನಿಡಬೇಕು ಜೊತೆಗೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಉನ್ನತ ಸ್ಥಾನ ಸಂಪಾದಿಸಿದರೂ ತಮಗೆ ಕಲಿಸಿದ ಶಿಕ್ಷಕರನ್ನು ಗೌರವಿಸಿ ಎಂದರು.


ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಫಿಲೋಮಿನಾ ಪ್ರೌಢಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ, ವ್ಯಕ್ತಿತ್ವದ, ಮೌಲ್ಯಾಧಾರಿತ ಗುಣಗಳ ಬೆಳಕನ್ನು ನೀಡಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎನ್ನುವ ದೂರದೃಷ್ಟಿತ್ವವುಳ್ಳ ಚಿಂತನೆಯೊಂದಿಗೆ ಈ ಭಾಗದಲ್ಲಿ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದಾಗಿದೆ. ಮೊ|ಪತ್ರಾವೋ ಸೇರಿದಂತೆ ಅನೇಕ ಶಿಕ್ಷಕರು, ಗುರುಗಳು, ದಾನಿಗಳು ಈ ಸಂಸ್ಥೆಯನ್ನು ಇಂದು ಹೆಮ್ಮರಕ್ಕೆ ಬೆಳೆಸಿದ್ದು ಅವರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕಾಗಿದೆ. ಸಂಸ್ಥೆಯು ನಿಂತ ನೀರಾಗದೆ ಅದು ನಿರಂತರ ಹರಿಯುತ್ತಲೇ ಇರಬೇಕು ಎನ್ನುವಂತೆ ಕಾಲ ಕಾಲಕ್ಕೆ ತಕ್ಕಂತೆ ಬೆಳವಣಿಗೆಯಲ್ಲಿ ಬದಲಾವಣೆ, ಸವಲತ್ತುಗಳು, ವ್ಯವಸ್ಥೆಗಳು ಆಗಬೇಕಾಗಿದೆ ಎಂದರು.

ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ಅತಿಥಿಯಾಗಿ ಕರೆಯಿಸಿ, ಅವರನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು ವಾಡಿಕೆ ಮಾತ್ರವಲ್ಲ ಪ್ರಸಕ್ತ ವಿದ್ಯಾರ್ಥಿಗಳಿಗೆ ಅವರಂತೆ ಸಾಧನೆ ಮಾಡುವ ಆದಮ್ಯ ಉತ್ಸಾಹ ಬರಲಿ ಎಂಬುದು ಶಾಲೆಯ ಕನಸಾಗಿದೆ. ಸಹಜ್‌ರವರು ಓರ್ವ ಯಶಸ್ವಿ ಉದ್ಯಮಿ, ಉತ್ತಮ ಸಂಘಟಕ, ಚಾಣಾಕ್ಷ ನಾಯಕರೂ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಸಿಕ್ಕಂತಹ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವಂತಾಗಬೇಕು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹಾಗೂ ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಮಾತನಾಡಿ, ನಾನು ಇಂದು ಸಮಾಜದಲ್ಲಿ ಏನಾಗಿದ್ದೇನೆ ಎಂಬುದಕ್ಕೆ ಈ ಸಂಸ್ಥೆಯೇ ಕಾರಣ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಹೊಂದಿರುವುದರ ಜೊತೆಗೆ ನಡೆ-ನುಡಿಯೂ ಉತ್ತಮವಾಗಿದ್ದಾಗ ಭವಿಷ್ಯದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹಾ ಮಾತನಾಡಿ, ಫಿಲೋಮಿನಾ ಎಂಬುದೇ ಒಂದು ಬ್ರ್ಯಾಂಡ್ ನೇಮ್ ಆಗಿದೆ. ಹಿರಿಯ ವಿದ್ಯಾರ್ಥಿಗಳು ಈ ಸಂಸ್ಥೆಯ ಮೌಲ್ಯವನ್ನು ಉಳಿಸಿ ಬೆಳೆಸಿರುತ್ತಾರೆ. ಅದರಂತೆ ಪ್ರಸಕ್ತ ವಿದ್ಯಾರ್ಥಿಗಳು ಕೂಡ ಫಿಲೋಮಿನಾದ ಬ್ರ್ಯಾಂಡ್ ಹೆಸರನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ ಜೊತೆಗೆ ಇನ್ನೂ ಎತ್ತರಕ್ಕೆ ಕೊಂಡೊಯ್ದು ಅತ್ತ್ಯುನ್ನತ ಸಂಸ್ಥೆ ಎಂದು ಕರೆಯಿಸಿಕೊಳ್ಳಬೇಕಿದೆ ಎಂದರು.

ಶಾಲಾ ನಾಯಕ ನಿಕ್ಷೇಪ್ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್‌ರವರು ವರದಿ ವಾಚಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ಕ್ಲೆಮೆಂಟ್ ಪಿಂಟೋ ಸ್ವಾಗತಿಸಿ, ಬೆನೆಟ್ ಮೊಂತೇರೊ ವಂದಿಸಿದರು. ಶಿಕ್ಷಕರಾದ ಮೋಲಿ ಫೆರ್ನಾಂಡೀಸ್‌ರವರು ದಾನಿಗಳ ಹೆಸರನ್ನು, ರೇಶ್ಮಾ ರೆಬೆಲ್ಲೋರವರು ಪ್ರತಿಭಾ ಕಾರಂಜಿ ಸಾಧಕರನ್ನು, ಸವಿತ ಮೊಂತೇರೋರವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಹೆಸರನ್ನು, ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೋರವರು ಕ್ರೀಡಾ ಹಾಗೂ ಎನ್‌ಸಿಸಿ ಸಾಧಕರ ಹೆಸರನ್ನು, ನಮಿತರವರು ಧತ್ತಿನಿಧಿ ಬಹುಮಾನ ವಿಜೇತರ ಹೆಸರನ್ನು ಓದಿದರು. ಶಿಕ್ಷಕ ರೋಶನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಹಾರಾರ್ಪಣೆ..ಧ್ವಜಾರೋಹಣ..ಬಲಿಪೂಜೆ..
ನ.25 ರಂದು ಬೆಳಿಗ್ಗೆ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಫಿಲೋಮಿನಾ ಪ್ರೌಢಶಾಲೆಯು ಹಮ್ಮಿಕೊಂಡ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಪ್ರೌಢಶಾಲಾ ಬಳಿಯಿರುವ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಮೊ|ಪತ್ರಾವೋರವರ ಪ್ರತಿಮೆಗೆ ಹೂಹಾರ ಹಾಕಿ ಗೌರವಿಸಿದರು. ಬಳಿಕ ಕಾಲೇಜು ಕ್ಯಾಂಪಸ್‌ನ ದಿವ್ಯ ಚೇತನಾ ಚಾಪೆಲಿನಲ್ಲಿ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಕಾಲೇಜು ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊ, ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ದಿವ್ಯ ಬಲಿಪೂಜೆ ನೆರವೇರಿಸಿದರು. ದಿವ್ಯ ಬಲಿಪೂಜೆ ಬಳಿಕ ಶಾಲಾ ಆವರಣದಲ್ಲಿ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಧ್ವಜಾರೋಹಣವನ್ನು ನೆರವೇರಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಫಿಲೋಮಿನಾ ಆ.ಮಾ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಿಸ್, ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್, ಶಾಲಾ ಆಡಳಿತ ಮಂಡಳಿ ಸದಸ್ಯರು, ನಿವೃತ್ತ ಶಿಕ್ಷಕರು, ಶಾಲಾ ಶಿಕ್ಷಕ-ಆಡಳಿತ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು.

ಸನ್ಮಾನ..
ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಯಾಗಿರುವ ಸಹಜ್ ರೈ ಬಳಜ್ಜರವರ ಸಾಧನೆಯನ್ನು ಸಂಸ್ಥೆಯು ಗುರುತಿಸಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಿಕ್ಷಕಿ ಆಶಾ ರೆಬೆಲ್ಲೋರವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.

LEAVE A REPLY

Please enter your comment!
Please enter your name here