ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯರಿಗೆ ದೇಶಭಕ್ತ ಎನ್. ಎಸ್. ಕಿಲ್ಲೆ ಪ್ರಶಸ್ತಿ ಪ್ರದಾನ

0

ಪುತ್ತೂರು: ಕರ್ನಾಟಕ ಯಕ್ಷಭಾರತಿ ಪುತ್ತೂರು ಮತ್ತು ಯಕ್ಷಾಂಗಣ ಮಂಗಳೂರು ಇದರ ಆಶ್ರಯದಲ್ಲಿ ನ.27ರಂದು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್. ಎಸ್. ಕಿಲ್ಲೆ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಿತು.


ಖ್ಯಾತ ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯರಿಗೆ ‘ಕಿಲ್ಲೆ ಪ್ರಶಸ್ತಿಯನ್ನು’ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿಯವರು ಪ್ರಧಾನ ಮಾಡಿ ‘ದೇಶಭಕ್ತ ಎನ್.ಎಸ್. ಕಿಲ್ಲೆಯವರು ಸ್ವಾತಂತ್ರ್ಯ ಹೋರಾಟಗಾರನಾಗಿ ಅಪ್ರತಿಮ ಯಕ್ಷಗಾನ ಅರ್ಥಧಾರಿಯಾಗಿ, ವಾಗ್ಮಿಯಾಗಿ, ತುಳು ಕನ್ನಡ ಉಭಯ ಭಾಷಾ ಸಾಹಿತಿಯಾಗಿ, ಪತ್ರಿಕೋದ್ಯಮಿಯಾಗಿ, ದೀನದಲಿತ ಉದ್ಧಾರಕನಾಗಿ ಸೇವೆ ಸಲ್ಲಿಸಿ ದೇಶಭಕ್ತನಾಗಿ ಜನಮಾನಸದಲ್ಲಿ ತನ್ನ ವ್ಯಕ್ತಿತ್ವವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ಕಾರ್ಯವನ್ನು ಮಾಡಿ ತನ್ನ 52ನೇ ವರ್ಷ ಪ್ರಾಯದಲ್ಲಿ ನಿಧನರಾದರು. ಕಿಲ್ಲೆಯವರ ಹೆಸರು ಅಜರಾಮರವಾಗಿದೆ. ಅವರ ಹೆಸರಿನಲ್ಲಿ ಕಿಲ್ಲೆ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯರಿಗೆ ನೀಡಿರುವುದು ಸ್ತ್ಯುತ್ಯವಾಗಿದೆ ಎಂದು ಹೇಳಿ ಯಕ್ಷಗಾನ ಕ್ಷೇತ್ರದ ಮಹತ್ವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಮಾತನಾಡಿ ‘ಪುತ್ತೂರಿನ ನಗರಸಭೆ ‘ಕಿಲ್ಲೆ ಮೈದಾನ’ ನಾಮಕರಣ ಮಾಡುವ ಮೂಲಕ ಕಿಲ್ಲೆಯವರು ಮಾಡಿದ ದೇಶಸೇವೆಗೆ ಬಹುದೊಡ್ಡ ಗೌರವವನ್ನು ನೀಡಿದಂತಾಗಿದೆ. ಪುತ್ತೂರಿನ ಮಹಾಜನತೆ ಕಿಲ್ಲೆಯವರ ಸಾಧನೆಯನ್ನು ಗೌರವಿಸಿದೆ. ಕೋಟ ಶಿವರಾಮ ಕಾರಂತರನ್ನು, ಮೊಳಹಳ್ಳಿ ಶಿವರಾಯರನ್ನು, ಅಂತೆಯೇ ಮಂಗಳೂರಿನ ನಿವಾಸಿ ದೇಶಭಕ್ತ ಕಿಲ್ಲೆಯವರನ್ನು ಪುತ್ತೂರಿನ ನಾಗರಿಕರು ತಮ್ಮವರನ್ನಾಗಿಸಿಕೊಂಡು ಮಹಾತ್ಮರ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ’ ಎಂದು ಹೇಳಿ ಕಿಲ್ಲೆಯವರ ಸ್ಮರಣೆಗಾಗಿ ಮಂಗಳೂರಿನ ಜನತೆಗೆ ಕೃತಜ್ಞತೆ ಅರ್ಪಿಸಿದರು.

ಯಕ್ಷಾಂಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕಿಲ್ಲೆ ಸಂಸ್ಮರಣೆ ಮಾಡಿ ನಮನ ಸಲ್ಲಿಸಿದರು.
ವೇದಿಕೆಯಲ್ಲಿ ಸೌಂದರ್ಯ ರಮೇಶ್, ಸಿ.ಎ.ಎಸ್.ಎಸ್ ನಾಯಕ್, ವಿವಿ ಕಾಲೇಜಿನ ಪ್ರಾಂಶುಪಾಲರಾದ ಸುಧಾಮಣಿ ಶ್ರೀವತ್ಸ ಮತ್ತು ಯಕ್ಷಾಂಗಣದ ಸಮಿತಿ ಸದಸ್ಯರು ಉಪಸ್ದಿತರಿದ್ದರು. ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಕಿಲ್ಲೆಯವರ ಸೊದರಳಿಯ ಸುಧಾಕರ ಹೆಗ್ಡೆ ಮತ್ತು ಕಿಲ್ಲೆ ಕುಟುಂಬಿಕರು ಸಮಾರಂಭದಲ್ಲಿ ಉಪಸ್ಧಿತರಿದ್ದರು. ಹಿರಿಯ ಗಾಯಕ ಪುಷ್ಕಲ್ ಕುಮಾರ್ ಸ್ವಾಗತಿಸಿ ಯಕ್ಷಾಂಗಣ ಸದಸ್ಯರು ವಂದಿಸಿದರು. ಸದ್ರಿ ವೇದಿಕೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರಾಹ್ನ ‘ಸಿರಿಕಿಟ್ಣ ವಿಜಯೊ’ ತುಳು ತಾಳಮದ್ದಳೆ ಮತ್ತು ಸಂಜೆ ‘ಯಕ್ಷಲೋಕ ವಿಜಯ’ ತಾಳಮದ್ದಳೆ ಜರುಗಿತು.

LEAVE A REPLY

Please enter your comment!
Please enter your name here