ಸಂತ ಫಿಲೋಮಿನಾ ಕಾಲೇಜಿನಲ್ಲಿ “ಯಕ್ಷಾಮೃತ” ಸರ್ಟಿಫಿಕೇಟ್‌ ಕೋರ್ಸ್‌ ಉದ್ಘಾಟನೆ

0

ಕಲೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯನಡೆಯಲಿ- ಶ್ರೀ ಕಡಮಜಲು ಸುಭಾಶ್‌ ರೈ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರವಾದ ಯಕ್ಷಕಲಾ ಕೇಂದ್ರ,ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ದೇಶಭಕ್ತ ಎನ್‌ ಎಸ್‌ ಕಿಲ್ಲೆ ಪ್ರತಿಷ್ಠಾನದ ಒಡಂಬಡಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಕಲೆಯ ಸರ್ಟಿಫಿಕೇಟ್‌ ಕೋರ್ಸ್‌“ಯಕ್ಷಾಮೃತ” ಉದ್ಘಾಟನೆಗೊಂಡಿತು.

ದೇಶಭಕ್ತ ಎನ್‌ ಎಸ್‌ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಶ್‌ರೈಯವರು“ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ವ್ಯಕ್ತಿತ್ವದ ಮುಂದೆ ನಾವು ಮಾಡಿದ ಬೇರೆಲ್ಲಾ ಸಂಪಾದನೆಗಳೂ ನಗಣ್ಯ. ಈ ಕಾಲೇಜಿನಿಂದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಲಿ. ಇಂತಹ ಸತ್ಕಾರ್ಯದಲ್ಲಿ ದೇಶಭಕ್ತ ಎನ್‌ ಎಸ್‌ ಕಿಲ್ಲೆ ಪ್ರತಿಷ್ಠಾನದ ಬೆಂಬಲವಿದೆ. ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಯಕ್ಷಾಮೃತವು ವೇದಿಕೆಯಾಗಲಿ ಹಾಗೂ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವರೂಪಿಸಿಕೊಳ್ಳಲಿ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ| ಗಣೇಶ್‌ ಭಟ್‌ರವರು ಯಕ್ಷಗಾನ ಕಲೆಯ ವಿಸ್ತಾರವನ್ನು ವಿವರಿಸಿದರು. “ಯಕ್ಷಗಾನಕ್ಕೆ ಅದರದ್ದೇ ಆದ ಗಾಂಭೀರ್ಯವಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಎಂದೂ ಅಚ್ಚಳಿಯದ ಹೆಜ್ಜೆಗುರುತನ್ನು ಮೂಡಿಸಿರುತ್ತಾರೆ. ಕಾಲೇಜಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಪೂರ್ಣವಾಗಿ ಬಳಸಿಕೊಂಡು ಕಲಾಸೇವೆಯಲ್ಲಿ ತೊಡಗಿಸಿಕೊಳ್ಳಿ” ಎಂದು ಹೇಳಿದರು.

ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯಕ್ಷ ಕಲಾಕೇಂದ್ರದ ನಿರ್ದೇಶಕ ಪ್ರಶಾಂತ್‌ರೈ ಸ್ವಾಗತಿಸಿ ಪ್ರಾಸ್ತಾವನೆಗೈದರು. ಯಕ್ಷಾಮೃತ ಕೋರ್ಸ್‌ನ ಸಂಯೋಜಕಿ  ರಾಜೇಶ್ವರಿ ವಂದಿಸಿದರು. ಸಹ ನಿರ್ದೇಶಕ ದಿನಕರ ಅಂಚನ್‌ ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಗುರುಗಳಾದ  ಬಾಲಕೃಷ್ಣ ಪೂಜಾರಿ ಆರ್ಲಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 50 ಮಂದಿ ವಿದ್ಯಾರ್ಥಿಗಳು ಯಕ್ಷಾಮೃತ ಸರ್ಟಿಫಿಕೇಟ್‌ ಕೋರ್ಸ್‌ಗೆ ನೋಂದಾಯಿಸಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here