ಪುತ್ತೂರು: ಕಟ್ಟಡ ಕಾರ್ಮಿಕ ಸುಮಾರು 850 ಫಲಾನುಭವಿಗಳಿಗೆ ರೂ.70 ಲಕ್ಷಕ್ಕೂ ಅಧಿಕ ಮೌಲ್ಯದ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಈ ಸವಲತ್ತಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಮಾರಾಟ ಮಾಡದೆ ಸ್ವ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಪುರಭವನದಲ್ಲಿ ಡಿ.2ರಂದು ನಡೆದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಮಾಹಿತಿ ಹಾಗೂ ಮೇಸನ್ ಕಿಟ್, ಎಲೆಕ್ಟ್ರೀಷಿಯನ್ ಕಿಟ್ ಮತ್ತು ಶಾಲಾ ಕಿಟ್ ವಿತರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯದೆ ಭವಿಷ್ಯದಲ್ಲಿ ಮಾಲಕರಾಗಿಯು ಬೆಳೆಯಬೇಕು ಎನ್ನುವ ಕಾರಣದಿಂದ ಸರಕಾರವು ಗರಿಷ್ಟ ಸವಲತ್ತು ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪುತ್ತೂರು ತಾಲೂಕಿನ 11 ಸಾವಿರ ಮಂದಿಗೆ ಕಿಟ್ ನೀಡಲಾಗಿತ್ತು. 7 ಸಾವಿರ ಜನರಿಗೆ ಸುರಕ್ಷತಾ ಕಿಟ್ ಒದಗಿಸಲಾಗಿದೆ. ಐದು ಸಾವಿರ ರೂ. ಸಹಾಯಧನ ನೀಡಲಾಗಿದೆ. ಈ ಮೂಲಕ ಕಾರ್ಮಿಕರ ಹಿತಾಸಕ್ತಿಗೆ ಸರಕಾರ ಗರಿಷ್ಟ ಸಹಕಾರ ನೀಡಿದೆ ಎಂದು ಅವರು ಹೇಳಿದರು.
650 ಮಂದಿಗೆ ಕಿಟ್ ವಿತರಣೆ:
ಒಟ್ಟು 650 ಮಂದಿ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಿಸಲಾಗಿದೆ. 150 ಮಂದಿ ಎಲೆಕ್ಟ್ರಿಷಿಯನ್ ಕಿಟ್, 500 ಮಂದಿ ಮೇಸನ್ ಕಿಟ್ ಹಾಗೂ 200 ಮಂದಿಗೆ ಸ್ಕೂಲ್ ಕಿಟ್‌ಗಳನ್ನು ವಿತರಸಿಲಾಗುವುದು. ಸ್ಕೂಲ್ ಕಿಟ್ ಪಡೆದುಕೊಳ್ಳುವ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಪ್ರಮಾಣ ಪತ್ರ, ಸ್ಕೂಲ್ ಕಾರ್ಡ್, ಕಾರ್ಮಿಕ ನೋಂದಾವಣೆಯ ಕಾರ್ಡ್, ಮಕ್ಕಳು ಹಾಗೂ ಪೋಷಕರ ಆಧಾರ್ ಕಾರ್ಡ್‌ನೊಂದಿಗೆ ಬೊಳುವಾರಿನ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸುವಂತೆ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ತಿಳಿಸಿದ್ದಾರೆ.
ಬಿಎಂಎಸ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಕುಂಬ್ರ, ಭಾರತ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಲೋಕೇಶ್ ಹೆಗ್ಡೆ, ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಸ್ವಾಗತಿಸಿದರು. ಕಾರ್ಮಿಕ ಇಲಾಖೆಯ ತೇಜಸ್ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು.
ತಾಲೂಕಿನಲ್ಲಿ 10ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಇದ್ದಾರೆ. ಕಟ್ಟಡ ಹೊರತುಪಡಿಸಿಯು ಇತರೆ ಕಾರ್ಮಿಕರು ಇದ್ದಾರೆ. ಕಾರ್ಮಿಕ ಇಲಾಖೆಯ ಮೂಲಕ ಇವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಇನ್ನೂ ಪೂರ್ಣ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಇಲಾಖೆ ಮೂಲಕ ಮಾಹಿತಿ ನೀಡಬೇಕು. ಅರ್ಹ ಫಲಾನುಭವಿಗೆ ಸರಕಾರದ ಸೌಲಭ್ಯ ದೊರೆಯಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.