ಕಡಬ: ಬಿಳಿನೆಲೆ ಬೈಲು ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಮತಿಯವರಿಗೆ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದದಿಂದ ಬೀಳ್ಕೋಡುಗೆ ಸಮಾರಂಭ ನ.1ರಂದು ಬಿಳಿನಲೆ ಬೈಲು ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಶಿಕ್ಷಕಿ ಸುಮತಿಯವರನ್ನು ಅಭಿನಂದಿಸಿ, ಗೌರವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು, ವೃತ್ತಿಯಿಂದ ನಿವೃತ್ತರಾಗುವುದು ಸಹಜ, ಆದರೆ ವೃತ್ತಿಯಲ್ಲಿರುವಾಗ ವೃತ್ತಿಧರ್ಮವನ್ನು ಪಾಲನೆ ಮಾಡಿಕೊಂಡು ಕರ್ತವ್ಯ ನಿರ್ವಹಿಸಿದರೆ ಅದುವೆ ನಿವೃತ್ತಿ ಬಳಿಕ ದೊರೆಯುವ ದೊಡ್ಡ ಸಂಪತ್ತು. ನಾವು ಎಷ್ಟು ಎತ್ತರಕ್ಕೆ ಏರಿದರೂ ನಮಗೆ ವಿದ್ಯೆ ನೀಡಿದ ಗುರುವನ್ನು ಮರೆಯಬಾರದು ಎಂದು ಹೇಳಿದ ಅವರು ಸುಮತಿಯವರು ಅಪಾರ ಹಿತೈಷಿಗಳನ್ನು ಪಡೆದಿದ್ದಾರೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು.
ನಿವೃತ್ತ ಶಿಕ್ಷಕಿ ಶಾರದಾ ಅವರು ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಜಿಲ್ಲಾ ಪ್ರಾ.ಶಾಲಾ ಶಿಕ್ಷಕರ ಸಂಘದ ಪ್ರ.ಕಾರ್ಯದರ್ಶಿ ವಿಮಲ್ ಕುಮಾರ್, ಬಿಳಿನೆಲೆ ಗ್ರಾ.ಪಂ. ಉಪಾಧ್ಯಕ್ಷೆ ಶಾರದಾದಿನೇಶ್ ಪ್ರಮುಖರಾದ ಭಜನಾ ಪರಿಷತ್ ಅಧ್ಯಕ್ಷ ಜನಾರ್ದನ, ಶಿಕ್ಷಕ ಅಜಿತ್ ಕುಮಾರ್ ಜೈನ್, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಧರ್ಮಪಾಲ ಗೌಡ ಸೂಡ್ಲು ಮೊದಲಾದವರು ಮಾತನಾಡಿ ನಿವೃತ್ತ ಶಿಕ್ಷಕಿ ಸುಮತಿಯವರನ್ನು ಅಭಿನಂದಿಸಿದರು. ಶಾಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಹಿರಿಯಣ್ಣ ಗೌಡ, ತುಕರಾಮ ಗೌಡ, ನವಜೀವನ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜಯಪ್ರಕಾಶ್, ಗ್ರಾ.ಪಂ. ಸದಸ್ಯ ಸತೀಶ್ ಕಳಿಗೆ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿನಯ ಕಳಿಗೆ, ಬಿಳಿನೆಲೆ ಯುವಕ ಮಂಡಲ ಸದಸ್ಯ ಪ್ರದೀಪ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಅದ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿನಿಶ್ ಮಾತನಾಡಿ ನಿವೃತ್ತಿಗೊಂಡ ಶಿಕ್ಷಕಿ ಸುಮತಿಯವರನ್ನು ಅಭಿನಂದಿಸಿದರು. ಶಿಕ್ಷಕಿ ಸುಜಾತ ಅವರು ಸ್ವಾಗತಿಸಿ, ದೈಹಿಕ ಶಿಕ್ಷಕ ಚಂದ್ರಶೇಖರ್ ವಂದಿಸಿದರು. ಶಿಕ್ಷಕಿ ದಮಯಂತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸಭೆಗೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕಿ ಸುಮತಿಯವರು ಶಾಲೆಗೆ ಇನ್ವರ್ಟರ್ ಕೊಡುಗೆಯಾಗಿ ನೀಡಿದರು.