ವಿಟ್ಲ: ಗ್ರಾಮ ಪಂಚಾಯತ್‌ಗೆ ಮಲತ್ಯಾಜ್ಯ ಘಟಕ ಮಂಜೂರಾಗಿದ್ದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಮೀನು ಕೂಡ ಪರೀಶೀಲನೆ ನಡೆಸಲಾಗಿದೆ. ಈ ಕುರಿತು ಕೆಲವೊಂದು ಮಾಹಿತಿಗಳು ಬೇಕಾಗಿದ್ದು ಈಗಾಗಲೆ ಘಟಕ ರಚನೆಯಾಗಿ ಕಾರ್ಯನಿರ್ವಹಿಸುತ್ತಿರುವ ಉಜಿರೆ, ಗೋಳ್ತಮಜಲು ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಸಂಶಯಗಳನ್ನು ನಿವಾರಿಸಿಕೊಂಡು ಗ್ರಾಮ ಪಂಚಾಯತ್‌ನಲ್ಲೂ ಕೂಡಾ ಉತ್ತಮ ಮಾದರಿಯ ಘಟಕ ನಿರ್ಮಾಣಕ್ಕೆ ಸಹಕರಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿಯವರು ಹೇಳಿದರು.
ಅವರು ಇಡ್ಕಿದು ಗ್ರಾ.ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಕ್ಕೊಂದು ರುದ್ರಭೂಮಿ ರಚನೆ ಮಾಡುವ ನಿಟ್ಟಿನಲ್ಲಿ ಕೆದಿಮಾರಿನಲ್ಲಿ ನಿರ್ಮಾಣವಾಗುತ್ತಿರುವ ರುದ್ರಭೂಮಿಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕಾರ್ಯ ನಿರ್ವಹಿಸಲು ಮತ್ತು ಈ ಬಗ್ಗೆ ದಾನಿಗಳ ನೆರವನ್ನು ಪಡೆಯುವ ಸಲಹೆಯನ್ನು ಅನುಮೋದಿಸಲಾಯಿತು.
ಪ್ರಸ್ತುತ ಕುಳ ಗ್ರಾಮದ ಕಾರ್ಯಾಡಿಯಲ್ಲಿ ಈಗಾಗಲೇ ಮಾದರಿ ರುದ್ರಭೂಮಿ ನಿರ್ಮಾಣವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಿಗೆ ಇತರೆ ವೆಚ್ಚಗಳು ಜಾಸ್ತಿಯಾಗಿರುವುದರಿಂದ ಮತ್ತು ನಿರ್ವಹಣೆಗೆ ಕಷ್ಟವಾಗುತ್ತಿರುವುದರಿಂದ ಶವದಹನಕ್ಕೆ ಗ್ರಾಮದೊಳಗಿನವರಿಗೆ 4500ರೂಪಾಯಿ ಮತ್ತು ಗ್ರಾಮದ ಹೊರಗಿನವರಿಗೆ 5000 ರೂಪಾಯಿಗೆ ಏರಿಸುವಂತೆ ನಿರ್ಣಯಿಸಲಾಯ್ತು. ಮತ್ತು ಡಿಸೆಂಬರ್ ತಿಂಗಳಿನಿಂದಲೇ ಅದನ್ನು ಜಾರಿಗೆ ತರುವುದಾಗಿ ತೀರ್ಮಾನಿಸಲಾಯಿತು. ಈ ಬಗ್ಗೆ ಪ್ರಕಟಣೆಯನ್ನು ರುದ್ರಭೂಮಿಯಲ್ಲಿ ಅಳವಡಿಸುವಂತೆ ಅಧ್ಯಕ್ಷರು ಸೂಚಿಸಿದರು. ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಏಕ ರೂಪದ ತೆರಿಗೆ ನಿರ್ಧರಣೆಯನ್ನು ಅಳವಡಿಸಿ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಬೇಕಾಗಿರುವ ಸರಕಾರದ ಅಧಿಸೂಚನೆಯ ಈಗಾಗಲೇ ಹೊರಡಿಸಲಾಗಿದ್ದು, ಈ ಬಗ್ಗೆ ಮಾಹಿತಿ ನೀಡಿ ಅದರಂತೆ ತೆರಿಗೆ ನಿರ್ಧರಣಾ ಪಟ್ಟಿಯನ್ನು ತಯಾರಿಸಲಾಗಿದೆ. ಈ ವರೆಗೆ 20% ರಷ್ಟು ತೆರಿಗೆ ವಸೂಲಾಗಿದ್ದು ಇನ್ನುಳಿದ ೪ ತಿಂಗಳ ಒಳಗಾಗಿ ಉಳಿದ ತೆರಿಗೆ ವಸೂಲಾತಿಗೆ ಸಹಕರಿಸುವಂತೆ ಸಭೆಗೆ ಕೋರಲಾಯ್ತು. ಪ್ರಸ್ತುತ ಇರುವ ಸಿಬ್ಬಂದಿ ಭಡ್ತಿ ಹೊಂದಿ ತೆರಳಿದ್ದು ಇನ್ನೋರ್ವ ಮಹಿಳಾ ಸಿಬ್ಬಂದಿ ಹೆರಿಗೆ ರಜೆಯಲ್ಲಿ ತೆರಳಿರುವುದರಿಂದ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿ ನಿರೀಕ್ಷಿತ ಪ್ರಮಾಣದಲ್ಲಿ ಮಾಡಲು ಆಗದಿರುವುದರಿಂದ ತಾತ್ಕಲಿಕವಾಗಿ ಎಪ್ರಿಲ್ ತಿಂಗಳವರೆಗೆ ಹೊರಗುತ್ತಿಗೆ ಅಥವಾ ಸಂಜೀವಿನಿ ಒಕ್ಕೂಟದವರನ್ನು ಬಳಸಿಕೊಳ್ಳುವ ಬಗ್ಗೆ ಸಲಹೆಯನ್ನು ದಾಖಲಿಸಲಾಯ್ತು. ಈ ಬಗ್ಗೆ ಚರ್ಚಿಸಿ ತಾಲೂಕು ಪಂಚಾಯತ್‌ನಿಂದ ಅನುಮೋದನೆ ಪಡೆದುಕೊಳ್ಳುವ ಬಗ್ಗೆ ಅಧ್ಯಕ್ಷರು ಸೂಚಿಸಿದರು.
ಡಿ.15ರಂದು ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯನ್ನು ಸೂರ್ಯ ಪ್ರೌಢಶಾಲೆಯಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಯ್ತು. ಕೋಟತಟ್ಟು ಗ್ರಾಮಪಂಚಾಯತ್‌ನಲ್ಲಿ ಹೊಳಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಪಥಸಂಚಲನ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಮುಂದಿನ ವರ್ಷವು ಎಲ್ಲಾ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹಾಗೂ ಗ್ರಾಮ ಪಂಚಾಯತ್‌ನಿಂದ ಸ್ಥಬ್ದ ಚಿತ್ರ ಸಾಂಸ್ಕೃತಿಕ ಚಿತ್ರಗಳನ್ನೊಳಗೊಂಡಂತೆ ತಯಾರಿ ನಡೆಸಿ ಭಾಗವಹಿಸುವಂತೆ ಅಧ್ಯಕ್ಷರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂ.ಉಪಾಧ್ಯಕ್ಷರಾದ ಯಶೋಧ, ಸದಸ್ಯರಾದ ಚಿದಾನಂದ ಪಿ., ರಮೇಶ ಪೂಜಾರಿ, ಸಂಜೀವ, ತಿಲಕ್‌ರಾಜ್ ಶೆಟ್ಟಿ, ಪದ್ಮನಾಭ, ಸಿದ್ದಿಕ್ ಆಲಿ, ಪುರುಷೋತ್ತಮ ಕೋಲ್ಪೆ, ಶೋಭಾ, ಭಾಗೀರಥಿ, ಪುಷ್ಪಾ, ಜಯಂತಿ, ಪ್ರಶಾಂತ್, ಹರಿಣಾಕ್ಷಿ, ಗುಲ್ಸಾನ್, ಲಲಿತಾ, ಮೋಹಿನಿ ಮೊದಲಾದವರು ಉಪಸ್ಥಿತರಿದ್ದರು. ಪಂ.ಸಿಬ್ಬಂದಿ ಪೂರ್ಣಿಮಾ, ಭವ್ಯ, ಸಾವಿತ್ರಿ, ಲೆಕ್ಕಸಹಾಯಕಿ ರಾಜೇಶ್ವರಿ ಸಹಕರಿಸಿದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ ಸ್ವಾಗತಿಸಿ, ವಂದಿಸಿದರು.