ಕಾರ್ಖಾನೆ ಮಾಲೀಕರಿಂದ ಲಂಚ ಪಡೆದ ಆರೋಪ ಸಾಬೀತು; ಕಾರ್ಖಾನೆ ಇಲಾಖೆ ಅಧಿಕಾರಿ ಸುರೇಶ್‌ಗೆ 4 ವರ್ಷ ಜೈಲು, ₹.4 ಲಕ್ಷ ದಂಡ

0

ಮಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು, ಕಾರ್ಖಾನೆಗಳ ಮಾಲೀಕರಿಂದ ಪಡೆದ ಲಂಚದ ಹಣದ ಸಮೇತ 2016ರಲ್ಲಿ ಸಿಕ್ಕಿಬಿದ್ದಿದ್ದ ಕಾರ್ಖಾನೆಗಳ ಇಲಾಖೆಯ ಸಹಾಯಕ ನಿರ್ದೇಶಕ, ಪ್ರಸ್ತುತ ಕಾರ್ಖಾನೆ ಇಲಾಖೆಯ ಮೈಸೂರಿನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಸುರೇಶ್‌ಗೆ ನಾಲ್ಕು ವರ್ಷ ಸಜೆ ಹಾಗೂ ರೂ.4 ಲಕ್ಷ ದಂಡ ವಿಧಿಸಿ ಜಿಲ್ಲಾ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ದಂಡ ಕಟ್ಟಲು ವಿಫಲನಾದರೆ ಮತ್ತೆ ಆರು ತಿಂಗಳು ಸಾದಾ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಆದೇಶ ಮಾಡಿದ್ದಾರೆ.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪವಿಭಾಗ-2ರಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಎಚ್.ಸುರೇಶ್‌ರವರು ನಗರದ ಕೊಟ್ಟಾರದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕಾರ್ಖಾನೆಗಳಿಗೆ ಪರವಾನಗಿ ನೀಡಲು, ಪರವಾನಗಿ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಕಾರ್ಖಾನೆ ಮಾಲೀಕರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ದೂರು ದಾಖಲಾಗಿತ್ತು.ಎಸಿಬಿ ಅಧಿಕಾರಿಗಳು 2016ರ ನ.30ರಂದು ಅವರ ಕಚೇರಿಗೆ ದಾಳಿ ನಡೆಸಿದಾಗ ರೂ.3,49,515 ನಗದು ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಸಂಸ್ಥೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಲಕ್ಷ್ಮೀಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸಿಬಿಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಯೋಗೀಶ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.ಎಸಿಬಿ ಹಾಗೂ ಲೋಕಾಯುಕ್ತ ಸಂಸ್ಥೆಯ ಪರವಾಗಿ ರವೀಂದ್ರ ಮುನ್ನಿಪಾಡಿ ಅವರು ವಾದ ಮಂಡಿಸಿದ್ದರು.

ಎಸಿಬಿ ಅಧಿಕಾರಿಗಳು 2016ರ ನ.30ರಂದು ಸುರೇಶ್‌ರವರ ಕಚೇರಿಗೆ ದಾಳಿ ನಡೆಸಿದಾಗ ರೂ.3,49,515 ನಗದು ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಸಂಸ್ಥೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಲಕ್ಷ್ಮೀಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here