ನಮ್ಮ ಹೋರಾಟಕ್ಕೆ ಸಿಕ್ಕ ಜಯ-ಲೋಕೇಶ್ ಹೆಗ್ಡೆ
ಪುತ್ತೂರು:‘ಕಾರ್ಮಿಕರಿಗೆ ನಿವೃತ್ತಿ ವೇತನವನ್ನು ರೂ.2 ಸಾವಿರದಿಂದ ರೂ.3 ಸಾವಿರಕ್ಕೆ ಏರಿಸಲಾಗಿದೆ.ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ’ ಎಂದು ಭಾರತ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಯು.ಲೋಕೇಶ್ ಹೆಗ್ಡೆಯವರು ಹೇಳಿದರು.
ಬೊಳುವಾರಿನಲ್ಲಿರುವ ಭಾರತ ಕಟ್ಟಡ ಕಾರ್ಮಿಕ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.ಸಂಘದ ಅಧ್ಯಕ್ಷ ಇನಾಸ್ ವೇಗಸ್ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು. ಗೌರವಾಧ್ಯಕ್ಷ ಲೋಕೇಶ ಹೆಗ್ಡೆಯವರು ಮಾತನಾಡಿ, ‘ನಿವೃತ್ತಿ ವೇತನ ಮುಂದೆ ಕುಟುಂಬ ಪಿಂಚಣಿಯಾಗಿಯೂ ಮುಂದುವರಿಯಲಿದೆ.ಸರಕಾರ ಆಗಸ್ಟ್ ತಿಂಗಳಿಂದ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ಮಂಜೂರಾತಿಗೆ ಇರುವ ಕೆಲವು ಅಡೆತಡೆಗಳನ್ನು ನಿವಾರಿಸಿ ಸರಳೀಕರಣಗೊಳಿಸಿದೆ’ ಎಂದರು.‘ಕಾರ್ಮಿಕರಿಗೆ 45 ಕಿ.ಮೀ. ಉಚಿತವಾಗಿ ಸಂಚರಿಸಲು ನೀಡಿದ ಬಸ್ ಪಾಸ್ ವಿತರಣೆಯು ಸ್ಥಗಿತಗೊಂಡ ಬಗ್ಗೆ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಲ್ಲಿ ಮಾತನಾಡಿ ಆದಷ್ಟು ಶೀಘ್ರ ಆ ಸೌಲಭ್ಯ ಸಿಗುವಂತೆ ಮಾಡುವುದಾಗಿ ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದ್ದಾರೆ’ ಎಂದು ಲೋಕೇಶ್ ಹೆಗ್ಡೆ ತಿಳಿಸಿದರು.ಕಾರ್ಯಾಧ್ಯಕ್ಷ ಪೌಲ್ ಡಿಸೋಜ, ಖಜಾಂಚಿ ಬಶೀರ್ ಅಹ್ಮದ್, ಉಪಾಧ್ಯಕ್ಷ ರುಕ್ಮಯ ಗೌಡ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಉಪಸ್ಥಿತರಿದ್ದರು.