ವಿಟ್ಲ: ‘ಮಕ್ಕಳ ಕಲಾ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ 16ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಡಿ. 13ರಂದು ಓಜಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಜರಗಿಲಿದೆ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ತಿಳಿಸಿದರು.
ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನ ಶಿಕ್ಷಣ ಇಲಾಖೆ ಮತ್ತು ಇಡ್ಕಿದು ಗ್ರಾಮ ಪಂಚಾಯತ್ ಕೈಜೋಡಿಸಲಿದೆ. ಓಜಾಲ ಶಾಲಾ 6ನೇ ತರಗತಿ ವಿದ್ಯಾರ್ಥಿನಿ ಶ್ರುತಿಕಾ ಸಮ್ಮೇಳನಾಧ್ಯಕ್ಷೆಯಾಗಿರುವರು. 15ನೇ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಬಿ. ಉದ್ಘಾಟಿಸುವರು. ಪುತ್ತೂರು ತಾಲೂಕಿನ ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ಧನ್ವೀ ರೈ ಕೋಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಚಿದಾನಂದ ಪೆಲತ್ತಿಂಜ ರವರು ಮಾತನಾಡಿ ಹದಿನೆಂಟು ವಯೋಮಾನದೊಳಗಿನ ಸುಮಾರು ನಾಲ್ಕು ನೂರು ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಶಿಕ್ಷಕರು ಮತ್ತು ಹೆತ್ತವರೂ ಆಗಮಿಸಲಿದ್ದಾರೆ. ಗ್ರಾಮಸ್ಥರನ್ನು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳಲಾಗಿದೆ. ದಿನವಿಡೀ ಜರಗುವ ಮಕ್ಕಳ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸ್ವಾಗತ, ನಿರ್ವಹಣೆ, ಧನ್ಯವಾದ, ಗೋಷ್ಠಿಗಳ ಅಧ್ಯಕ್ಷತೆಯನ್ನು ನಿರ್ವಹಿಸಲಿರುವರು. ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಸುಧೀರ್ ಕುಮಾರ್ ಶೆಟ್ಟಿಯವರ ಗೌರವಾಧ್ಯಕ್ಷತೆ ಮತ್ತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ ಬಿ. ಇವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ವಿವಿಧ ಉಪಸಮಿತಿಗಳನ್ನೂ ರಚಿಸಲಾಗಿದೆ. ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸಾರ್ವಜನಿಕರು ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.
ಸಾಹಿತ್ಯ ರಚನೆ, ಆಶು ಮಾತುಕತೆ, ಚಿತ್ತ ಚಿತ್ತಾರ ಮತ್ತು ಕಿರುನಾಟಕಗಳನ್ನು ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ರಚನೆಗೆ ವಿಷಯಗಳನ್ನು ಉದ್ಘಾಟನಾ ಪೂರ್ವದಲ್ಲೇ ತಿಳಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದಾರೆ.
ಮುಡಿಪು ಸರಕಾರಿ ಪ.ಪೂ ಕಾಲೇಜು ವಿದ್ಯಾರ್ಥಿನಿ ಲಾವಣ್ಯ ಸಮಾರೋಪ ಭಾಷಣ ನೀಡುವರು. ಸಾಹಿತ್ಯ ತಾರೆ ಮತ್ತು ಬಾಲಬಂಧು ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು. ಪೂರ್ವಾಹ್ನ ತಾಲೂಕು ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪರಿಷತ್ ಧ್ವಜಾರೋಹಣವನ್ನು ಮತ್ತು ಚಿದಾನಂದ ಪೆಲತ್ತಿಂಜ ಕನ್ನಡ ಧ್ವಜಾರೋಹಣವನ್ನು ನಿರ್ವಹಿಸುವರು. ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಕುಂಬಳೆ ಮಕ್ಕಳ ಸ್ವರಚಿತ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡುವರು. ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಶಾಲೆಯ ಹೆಸರು ಸಮೇತ ಮೊಬೈಲ್ ಸಂಖ್ಯೆ 9449817428 ಗೆ ಸಮ್ಮೇಳನಕ್ಕೆ ನಾಲ್ಕು ದಿನ ಮೊದಲು ತಿಳಿಸಿ ವ್ಯವಸ್ಥೆಗೆ ಸಹಕರಿಸಬೇಕು ಎಂದು ಓಜಾಲಾ ಶಾಲಾ ಮುಖ್ಯೋಪಾಧ್ಯಾಯ ಸಂಜೀವ ಮಿತ್ತಳಿಕೆ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಕ್ಕಳ ಕಲಾ ಲೋಕದ ಕಾರ್ಯದರ್ಶಿ ಶಿವರಾಮ ಭಟ್ ನೆಡ್ಲೆ, ಉಪಾಧ್ಯಕ್ಷೆ ವಿಲ್ಮಾ ಸೀಕ್ಷೇರಾ, ಸ್ವಾಗತ ಸಮಿತಿಯ ಕೋಶಾಧಿಕಾರಿ ಸುಮಯ್ಯ ಉಪಸ್ಥಿತರಿದ್ದರು.