ಅನಧಿಕೃತ ಓಟರ್ ಐಡಿ ವಿತರಣೆ ಆರೋಪ: ಎಸಿ, ತಹಶೀಲ್ದಾರ್‌ರವರಿಂದ ಜನಸೇವಾ ಕೇಂದ್ರದ ಮೇಲೆ ದಾಳಿ, ಕೇಂದ್ರಕ್ಕೆ ಬೀಗ

0

ಪುತ್ತೂರು: ಅನಧಿಕೃತವಾಗಿ ಮತದಾರನ ಗುರುತಿನ ಚೀಟಿಯನ್ನು ವಿತರಣೆ ಮಾಡಿದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ರಸ್ತೆಯ ಜನಸೇವಾ ಕೇಂದ್ರವೊಂದರ ಮೇಲೆ ಎಸಿ, ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಂಗಡಿಗೆ ಬೀಗ ಹಾಕಿದ ಘಟನೆ ಮುಟ್ಟುಗೋಲು ಹಾಕಿರುವ ಘಟನೆ ಡಿ.5ರಂದು ಸಂಜೆ ನಡೆದಿದೆ.


ಮಂಜಲ್ಪಡ್ಪುವಿನ ನಿವಾಸಿಯೊಬ್ಬರ ಮಗನ ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ ಕೇಂದ್ರಕ್ಕೆ ಬಂದು ವಿಷಯ ತಿಳಿಸಿ ಓಟರ್ ಐಡಿ ಮತ್ತೆ ಪಡೆಯುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಕೇಂದ್ರದಲ್ಲೇ ಗುರುತಿನ ಚೀಟಿ ಮುದ್ರಿಸಿ ಕೊಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಜನ ಸೇವಾ ಕೇಂದ್ರದಿಂದ ಪಡೆದ ಗುರುತಿನ ಚೀಟಿಯ ಮೇಲೆ ಅನುಮಾನ ಬಂದ ಕಾರಣ ಅವರು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ಅಧಿಕಾರಿಗಳಿಗೆ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊರಗಿನ ಕೇಂದ್ರದಲ್ಲಿ ಓಟರ್ ಐಡಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಆಯುಕ್ತರು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಅಪರಾಧ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು
ಬಾಹ್ಯ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ ಮಾಡುವ ಅಧಿಕಾರವನ್ನು ನಾವು ಯಾರಿಗೂ ಕೊಟ್ಟಿಲ್ಲ. ಆದರೂ ಈ ಕೇಂದ್ರದಲ್ಲಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಕಾರ್ಡ್ ವಶಪಡಿಸಿಕೊಂಡು ಕೇಂದ್ರಕ್ಕೆ ಬೀಗ ಹಾಕಿದ್ದೇವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದ್ದಾರೆ.


ನಮ್ಮ ಜನಸೇವಾ ಕೇಂದ್ರದಲ್ಲಿ ನಿರ್ದಿಷ್ಟ ವೆಬ್‌ಸೈಟ್ ತೆರೆದುಕೊಂಡ ಕಾರಣ ನಮ್ಮ ಸಿಬ್ಬಂದಿ ಅದರಲ್ಲಿ ಲಾಗಿನ್ ಆಗಿ ಅದರಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಸಿ ಕಾರ್ಡ್ ಮುದ್ರಿಸಿ ಕೊಟ್ಟಿದ್ದಾರೆ. ಇದರ ಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಸರಕಾರಿ ಅಧಿಕಾರಿಗಳ, ಚುನಾವಣಾ ಆಯೋಗದ ಅಧಿಕಾರಿಗಳ ಸಹಿ ಫೋರ್ಜರಿ ಮಾಡಲು ನಮಗೆ ಸಾಧ್ಯವೇ? ನಾವು ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿಲ್ಲ ಎಂದು ಕೇಂದ್ರದ ಮಾಲಕಿ ಈ ಸಂದರ್ಭ ತಿಳಿಸಿದರು
ತಹಶೀಲ್ದಾರ್ ನಿಸರ್ಗಪ್ರಿಯ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು, ಗ್ರಾಮ ಸಹಾಯಕರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು. ನಗರ ಠಾಣಾ ಎಸ್‌ಐ ಶ್ರೀಕಾಂತ್ ರಾಥೋಡ್ ಹಾಗೂ ಸಿಬಂದಿಗಳು ಬಂದೋ ಬಸ್ತ್ ಒದಗಿಸಿದ್ದರು.

LEAVE A REPLY

Please enter your comment!
Please enter your name here