ವಕೀಲರ ಮೇಲೆ ಗೂಂಡಾಗಿರಿ ಮಾಡಿದರೆ ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಹುದು -ಮನೋಹರ್ ಕೆ.ವಿ.
ಪೊಲೀಸರ ಮೇಲೆಯೂ ಕೇಸು ದಾಖಲಾಗಬೇಕು -ದೇವಾನಂದ
ಇದೇನು ಗೂಂಡಾ ರಾಜ್ಯವೇ? -ದುರ್ಗಾಪ್ರಸಾದ್ ರೈ
ಪುತ್ತೂರು:ಮಂಗಳೂರಿನ ಯುವ ವಕೀಲ ಕುಲ್‌ದೀಪ್ ಶೆಟ್ಟಿಯವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ವಕೀಲರ ಸಂಘದಿಂದ ಡಿ.೭ರಂದು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ದೌರ್ಜನ್ಯ ಎಸಗಿದ `ಗೂಂಡಾ ಪೊಲೀಸರಿಗೆ’ ಧಿಕ್ಕಾರ ಕೂಗಲಾಯಿತು.
ದೌರ್ಜನ್ಯ ಎಸಗಿದ ಪೊಲೀಸರ ವರ್ತನೆಗೆ ಖಂಡನೆ:
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಅವರು ಮಾತನಾಡಿ ಏಕಾಏಕಿ ಮನೆಗೆ ಆಗಮಿಸಿದ ಪೊಲೀಸರು ವಕೀಲ ಕುಲದೀಪ್ ಅವರಿಗೆ ಹಲ್ಲೆ ನಡೆಸಿ ಶಿಷ್ಟಾಚಾರ ತೋರದೆ ಅವರ ತಂದೆ ತಾಯಿಗೂ ಹಲ್ಲೆ ನಡೆಸಿ ಉಟ್ಟ ಬಟ್ಟೆಯಲ್ಲೇ ಕುಲದೀಪ್ ಶೆಟ್ಟಿಯವರನ್ನು ಠಾಣೆಗೆ ಕರೆತಂದು ಅಲ್ಲಿಯೂ ಹಲ್ಲೆ ನಡೆಸಿದ್ದಾರೆ.ದೌರ್ಜನ್ಯ ಎಸಗಿದ ಪೊಲೀಸರ ಈ ವರ್ತನೆಯನ್ನು ಪುತ್ತೂರು ವಕೀಲರ ಸಂಘ ಖಂಡಿಸುತ್ತದೆ.ಇಂತಹ ವರ್ತನೆ ಮುಂದೆ ಮರುಕಳಿಸಬಾರದು.ವಕೀಲರಿಗೂ ರಕ್ಷಣೆ ಬೇಕು.ವಕೀಲರ ಮೇಲೆಯೇ ಪೊಲೀಸರು ಗೂಂಡಾಗಿರಿ ಮಾಡಿದರೆ ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರಲ್ಲದೆ,ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಿವಿಲ್ ವ್ಯಾಜ್ಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಪೊಲೀಸರು:
ಸಾಕಷ್ಟು ಸಂದರ್ಭದಲ್ಲಿ ಸಿವಿಲ್ ವ್ಯಾಜ್ಯಗಳಲ್ಲಿ ಅನಗತ್ಯವಾಗಿ ಪೊಲೀಸರು ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ.ವಕೀಲ ಕುಲ್‌ದೀಪ್ ವಿಚಾರದಲ್ಲೂ ಮೊದಲೇ ನೀಡಿದ ದೂರನ್ನು ಪರಿಗಣಿಸದೆ ಬಳಿಕ ಒಂದು ಸಿವಿಲ್ ಪ್ರಕರಣದ ಎದ್ರಿದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಕಳ್ಳತನ ಆರೋಪ ಹೊರಿಸಿ ದೂರು ದಾಖಲಸಿ ರಾತ್ರೋರಾತ್ರಿ ವಕೀಲರ ಮನೆ ಪ್ರವೇಶಿಸಿ ದೌರ್ಜನ್ಯ ಎಸಗಿದ್ದಾರೆ.ರಕ್ಷಣೆಗಾಗಿ ಬಂದ ಸಹೋದ್ಯೋಗಿ ವಕೀಲರಿಗೂ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಇವೆಲ್ಲವನ್ನು ನೋಡಿದಾಗ ಪೊಲೀಸರು ಇನ್ನಾವುದೋ ಪಕ್ಷಕ್ಕೆ ಉಪಕಾರ ಮಾಡಲು ಏನೋ ಮಾಡುವುದನ್ನು ನಾವು ಕಾಣುತ್ತಿದ್ದೆವೆ.ಹಲ್ಲೆಗೊಳಗಾದ ಯುವ ನ್ಯಾಯವಾದಿ ಇನ್ನೂ ಕೂಡಾ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿಲ್ಲ.ಈ ವಿಚಾರವನ್ನು ಡಿವೈಎಸ್ಪಿಯವರಿಗೆ ನಾವು ತಿಳಿಸಿದ್ದೆ ವೆ.ಮಂಗಳೂರು ವಕೀಲರು ಕೂಡಾ ಎಸ್ಪಿಯವರಿಗೆ ದೂರು ನೀಡಿದ್ದಾರೆ.ಆದರೆ ಅಲ್ಲಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.ಆದ್ದರಿಂದ ಈ ಕುರಿತು ತನಿಖೆ ನಡೆಸಬೇಕೆಂದು ಮನೋಹರ್ ಕೆ.ವಿ.ಅವರು ಆಗ್ರಹಿಸಿದರು.
ಪೊಲೀಸರ ಮೇಲೆಯೂ ಕೇಸು ದಾಖಲಾಗಬೇಕು:
ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಅವರು ಮಾತನಾಡಿ ಹಲ್ಲೆ ನಡೆಸಿದ ಪೊಲೀಸರ ಮೇಲೂ ಕೇಸು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇನು ಗೂಂಡಾ ರಾಜ್ಯವೇ?:
ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಮಾತನಾಡಿ ರಾತ್ರೋರಾತ್ರಿ ಮನೆಗೆ ಹೋಗಿ ಅವರು ಉಟ್ಟ ಬಟ್ಟೆಯಲ್ಲೇ ಅವರನ್ನು ಬಂಧಿಸುವ ಕಾನೂನು ಈ ದೇಶದಲ್ಲಿ ಇಲ್ಲ.ನಮಗೆ ಕೊಟ್ಟ ಸಂವಿಧಾನದ ಕಾನೂನನ್ನು ಉಲ್ಲಂಸಿ ಪೊಲೀಸರಿಂದ ಮಾನವ ಹಕ್ಕಿನ ಉಲ್ಲಂಘನೆ ಆಗಿದೆ ಎಂಬುದು ಸಮಾಜಕ್ಕೆ ಗೊತ್ತಾಗಬೇಕಾಗಿದೆ.ಯಾರೋ ರಾಜಕಾರಣಿಗಳು ಒತ್ತಡ ತಂದಿದ್ದಾರೆಂದು ವಕೀಲರ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಲಾಗಿದ್ದು ಮುಂದೆ ಜನಸಾಮಾನ್ಯರ ಪರಿಸ್ಥಿತಿ ಏನಾದೀತು ಎಂದು ಪ್ರಶ್ನಿಸಿದರು.ಸಂವಿಧಾನವು ಆರೋಪಿ, ಅಪರಾಧಿಗೂ ಹಕ್ಕು ಕೊಟ್ಟಿದೆ.ಇಂತಹ ವಿಚಾರ ಇರುವಾಗ ಪೊಲೀಸರು ಸಂವಿಧಾನಕ್ಕೆ ವಿರೋಧವಾಗಿ ವರ್ತಿಸುತ್ತಾರೆ ಎಂದಾದರೆ ಇದೇನು ಗೂಂಡಾ ರಾಜ್ಯವೇ ಎಂದು ಪ್ರಶ್ನಿಸಿದ ದುರ್ಗಾಪ್ರಸಾದ್ ರೈ, ಪ್ರಜಾಪ್ರಭುತ್ವ ರಾಜ್ಯದಲ್ಲಿ ಗೂಂಡಾ ರಾಜ್ಯ ಇರಬಾರದು.ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು.ಇವತ್ತು ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದೆವೆ ಮುಂದೆ ಮರುಕಳಿಸಿದರೆ ತೀವ್ರವಾದ ಆಂದೋಲನವನ್ನು ವಕೀಲರು ಮಾಡಲಿದ್ದಾರೆ ಎಂದು ಎಚ್ಚರಿಸಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್, ಖಜಾಂಜಿ ಶ್ಯಾಮಪ್ರಸಾದ್ ಕೈಲಾರ್,ವಕೀಲರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಘಟನೆ ಕುರಿತು ಪಾರದರ್ಶಕ ತನಿಖೆ ನಡೆಸಿ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಹಾಯಕ ಕಮಿಷನರ್ ಕಚೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.