ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಡಿ.7ರಂದು ರಾತ್ರಿ ನಿರ್ವಾಹಕರೊಬ್ಬರಿಗೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕ ಮತ್ತು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನ ಮೂಲದ ಹೆಚ್.ಟಿ.ದ್ರುವ(43ವ)ರವರು ಹಲ್ಲೆಗೊಳಗಾದವರು. ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಾನು ಕಳೆದ 18 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಬಸ್‌ನಲ್ಲಿ ಚಾಲಕ/ ನಿರ್ವಾಹಕವಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಡಿ.7ರಂದು ಸುಳ್ಯ ಕೆ.ಎಸ್.ಆರ್.ಟಿ.ಸಿ ಘಟಕದಿಂದ ಸಾಯಂಕಾಲ ಹೊರಟು, ರಾತ್ರಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪಿ ಬಸ್‌ನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು, ರಾತ್ರಿ ಪುನಃ ಬಸ್ ಹೊರಡುವ ಸಮಯ ಓರ್ವ ಪ್ರಯಾಣಿಕನು ಬಂದು ಒಂದು ಟಿಕೆಟ್ ಕೇಳಿದಾಗ ನೀವು ಬಸ್‌ನ ಒಳಗೆ ಕುಳಿತುಕೊಳ್ಳಿ ಅಲ್ಲಿ ನಾನು ಟಿಕೆಟ್ ಕೊಡುತ್ತೇನೆ ಎಂದು ಹೇಳಿದ್ದೆ. ಆದರೆ ಆತ ನೀವು ಇಲ್ಲಿಯೇ ಟಿಕೆಟ್ ಕೊಡಿ ನಮ್ಮವರು ಒಳಗೆ ಇದ್ದಾರೆ ನಾನು ಹೋಗುತ್ತೇನೆ ಎಂದರು. ಇದಕ್ಕೆ ನಾನು ಒಳಗಡೆ ಇರುವ ವ್ಯಕ್ತಿಯಲ್ಲಿ ಟಿಕೆಟ್ ಕೊಡುತ್ತೇನೆ. ಒಂದು ವೇಳೆ ನಿಮ್ಮಲ್ಲಿ ಟಿಕೆಟ್ ಕೊಟ್ಟರೆ ನೀವು ಅದನ್ನು ಹಿಡಿದು ಹೋದರೆ ಮುಂದೆ ತನಿಖಾಧಿಕಾರಿ ಬಂದಾಗ ಸಮಸ್ಯೆ ಆಗುತ್ತದೆ. ಹಾಗಾಗಿ ನೀವು ಅವರ ಕೈಯಲ್ಲಿ ಹಣ ಕೊಡಿ ಎಂದು ಹೇಳಿದ್ದೆ ತಡ ಆ ವ್ಯಕ್ತಿ ನನ್ನನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.