ಪುತ್ತೂರು: ಕುಗ್ರಾಮವೆನಿಸಿದ ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವೆನಿಸಿಕೊಂಡಿರುವುದು ಮಾತ್ರವಲ್ಲದೆ ಪುತ್ತೂರು ಶಿಕ್ಷಣದ ಕಾಶಿ ಎಂದು ಕರೆಯಲ್ಪಡಲು ಕಾರಣೀಕರ್ತರಾದ ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋರವರಿಗೆ ಡಿ.10ರಂದು 112ನೇ ಹುಟ್ಟುಹಬ್ಬ.
ಈ ನಿಟ್ಟಿನಲ್ಲಿ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳಲ್ಲೊಂದಾದ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ವತಿಯಿಂದ ಫಿಲೋಮಿನಾ ಕ್ಯಾಂಪಸ್ಸಿನಲ್ಲಿ ಪ್ರತಿಷ್ಟಾಪಿಸಿರುವ ಮೊ|ಪತ್ರಾವೋರವರ ಪ್ರತಿಮೆಗೆ ಶಾಲಾ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್ ರವರು ಶಿಕ್ಷಕ-ಆಡಳಿತ ಸಿಬ್ಬಂದಿಗಳ ಪರವಾಗಿ ಹಾರಾರ್ಪಣೆ ಹಾಕುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್ ರವರು, ಮೊ|ಪತ್ರಾವೋರವರು ಪುತ್ತೂರಿನಲ್ಲಿ ಶಿಕ್ಷಣದ ಕ್ರಾಂತಿಯನ್ನು ಉಂಟು ಮಾಡಿದವರು. ಅಂದು ಶಿಕ್ಷಣ ಪಡೆಯಲು ದೂರದ ಊರಿಗೆ ಹೋಗಬೇಕಿತ್ತು. ಇದನ್ನ ಮನಗಂಡ ಮೊ|ಪತ್ರಾವೋರವರು ಪುತ್ತೂರಿನಲ್ಲಿಯೇ ಯಾಕೆ ಶೆಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬಾರದು. ಬಡ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಫಿಲೋ ಕ್ಯಾಂಪಸ್ಸಿನಲ್ಲಿ ಫಿಲೋಮಿನಾ ಕಾಲೇಜು, ಫಿಲೋಮಿನಾ ಬಾಲಕರ ಪ್ರೌಢಶಾಲೆ, ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಮಾಯಿದೆ ದೇವುಸ್ ಶಾಲೆ, ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ವಿಕ್ಟರ್ ಹೆಣ್ಮಕ್ಕಳ ಪ್ರೌಢಶಾಲೆಯನ್ನು ನಿರ್ಮಿಸಿ ಶಿಕ್ಷಣದಾತರಾಗಿದ್ದಾರೆ. ಅದೂ ಅಲ್ಲದೆ ಆರೋಗ್ಯ ಕ್ಷೇತ್ರದಲ್ಲೂ ಮಿಂಚು ಹರಿಸಿ ಪಾಂಗ್ಲಾಯಿ ಎಂಬಲ್ಲಿ ಫಾ|ಪತ್ರಾವೋ ಆಸ್ಪತ್ರೆಯನ್ನು ಆರಂಭಿಸಿರುತ್ತಾರೆ. ಅವರು ಮಾಡಿದ ಸಾಧನೆಯು ನಮಗೆಲ್ಲಾ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿ
ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.