ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ

0

ಬೆಟ್ಟಂಪಾಡಿ: ಮಾನವ ಹಕ್ಕು ಮಾನವರ ಜೊತೆಗೆ ಅಂತರ್ಗತವಾಗಿರುವ ಹಕ್ಕಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮಾರಣ್ಣ ಹೇಳಿದರು.
 
ಮಾನವನ ಇತಿಹಾಸದಲ್ಲಿ ಸದಾ ನೆನಪಿಡಬೇಕಾದ ದುರಂತಗಳಲ್ಲಿ ಎರಡನೇ ಮಹಾಯುದ್ಧವು ಒಂದು. ಪ್ರಸ್ತುತ ಸಮಾಜದಲ್ಲಿಯೂ ಅನೇಕ ಅಹಿತಕರ ಘಟನೆಗಳು ನಡೆಯುತ್ತಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮಾನವನು ಜನಿಸಿದಾಗ ಸ್ವತಂತ್ರವಾಗಿ ಜನಿಸುತ್ತಾನೆ, ತದನಂತರ ಅನೇಕ ಬಂಧನಗಳಿಗೆ ಒಳಗಾಗುತ್ತಾನೆ. ಮಾನವನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ರೂಪಗೊಂಡ ನಿಯಮಗಳೇ ಮಾನವ ಹಕ್ಕುಗಳು. ಈ ವರ್ಷ ವಿಶ್ವ ಸಂಸ್ಥೆಯು ” ಘನತೆ,ಸ್ವಾತಂತ್ರ್ಯ ಹಾಗೂ ನ್ಯಾಯ” ಈ ಮೂರು ತತ್ವಗಳನ್ನು ಸಾಧಿಸುವ ಗುರಿಯನ್ನು ಇಟ್ಟುಕೊಂಡಿದೆ. ಜೀವಿಸುವ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ. ವಿಶ್ವದ ಎಲ್ಲಾ ಮಾನವರಿಗೂ ಈ ಹಕ್ಕುಗಳನ್ನು ಖಾತರಿಪಡಿಸುವ ಉದ್ದೇಶದಿಂದಲೇ ಪ್ರತಿವರ್ಷದ ಡಿ. 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇವುಗಳ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಪ್ರಸ್ತುತ ವಿದ್ಯಾವಂತ ಸಮಾಜದಲ್ಲಿಯೂ ಮಾನವೀಯತೆ ಅಪಾಯಯಲ್ಲಿದೆ. ನಮ್ಮ ಸಂಪರ್ಕಕ್ಕೆ ಬಂದವರಲ್ಲಿ ಪ್ರೀತಿ, ಗೌರವ, ಸೌಹಾರ್ದದಿಂದ ವ್ಯವಹರಿಸಬೇಕು. ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆ ,ರಾಷ್ಟ್ರ ಹಾಗೂ ರಾಜಕೀಯ ನಂಬಿಕೆಗಳ ಆಧಾರದ ಮೇಲೆ ಮನುಷ್ಯನನ್ನು ವಿಂಗಡಿಸದೇ ಭೂಮಿಯ ಮೇಲಿನ ಎಲ್ಲಾ ಮಾನವರು ಸಮಾನರು ಮತ್ತು ಎಲ್ಲರಿಗೂ ಮೂಲಭೂತ ಹಕ್ಕುಗಳಿವೆ ಎಂಬುದನ್ನು ಸಾರಿ ಹೇಳುವುದೇ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಸಮಾಜದಲ್ಲಿ ಜನರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಿಸಬಹುದು ಎಂದು ಹೇಳಿದರು.

ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಹರಿಪ್ರಸಾದ್ ಎಸ್. ಹಾಗೂ ಘಟಕ ನಾಯಕರುಗಳಾದ ಅನನ್ಯ ಎಸ್. , ನಿತ್ಯಾನಂದ ಬಿ, ಕಿರಣ್ ಕೆ ಮತ್ತು ನೂರಕ್ಕೂ ಹೆಚ್ಚು ಸ್ವಯಂಸೇವಕರು ಉಪಸ್ಥಿತರಿದ್ದರು. ಘಟಕ ನಾಯಕರಾದ ಕಿರಣ್ ಕೆ ಇವರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here