ಜ.22; ಪುತ್ತೂರಿನಲ್ಲಿ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ವರ್ಷದ ಜಯಂತ್ಯೋತ್ಸವ – ಪುತ್ತೂರು ವಲಯ ಮಟ್ಟದ ಪೂರ್ವಭಾವಿ ಸಭೆ

0
  •  ಮಾನಸಿಕ ಪರಿವರ್ತನೆ ಮುಖ್ಯ – ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ
  •  ಕೊರತೆಗಳನ್ನು ಬದಿಗಿಟ್ಟು ಸಮಷ್ಠಿಯ ದೃಷ್ಟಿಯಿಂದ ಸೇರಬೇಕು-ಸಂಜೀವ ಮಠಂದೂರು

ಪುತ್ತೂರು: ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಜ.22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಾಗಿ ಪುತ್ತೂರು ವಲಯ ಮಟ್ಟದ ಪೂರ್ವಭಾವಿ ಸಭೆ ಡಿ.11ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.

ಮಾನಸಿಕ ಪರಿವರ್ತನೆ ಮುಖ್ಯ: ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ನೀಡಿದರು. ಉದನೆಯಿಂದ ಪ್ರಾರಂಭವಾದ ಪ್ರವಾಸ ಇವತ್ತು 2ನೇ ದಿನ ಮುಗಿಸಿದ್ದೇವೆ. ಹೋದ ಕಡೆಯಲ್ಲೆಲ್ಲ ಉತ್ತಮ ಸ್ಪಂದನೆ ದೊರೆತಿದೆ. ಆದರೂ ಮಾನಸಿಕ ಪರಿವರ್ತನೆ ಮುಖ್ಯವಾಗಿ ಕಾಣಿಸುತ್ತಿದೆ. ಸಮುದಾಯದ ಸಂಘಟನೆ, ಸಮಾಜ ಬಲಿಷ್ಟವಾಗಲು ಗುರುಗಳನ್ನು ಮುಂದಿಟ್ಟುಕೊಳ್ಳಬೇಕು. ಇದರಿಂದ ಗುರಿಯನ್ನು ತಲುಪಬಹುದು ಎಂದ ಅವರು ವಿಚಾರ ಮಾಡುವ, ನೋಡುವ, ಕೇಳುವ ಶಕ್ತಿ ಹಾಗೂ ಸಮಾಜ ಸೇವೆ, ಧರ್ಮಸೇವೆ ಮಾಡಲು ಮಾನವನಿಗೆ ಮಾತ್ರ ಸಾಧ್ಯ. ಪ್ರಾಣಿಗಳಿಗೆ ಅದು ಗೊತ್ತಿಲ್ಲವಾದರೂ ಅವು ತಮ್ಮ ತಮ್ಮ ಧರ್ಮ ನಿಷ್ಠೆಯಿಂದ ತಮ್ಮ ಕಾರ್ಯಗಳನ್ನು ಚಾಚೂ ತಪ್ಪದೆ ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥ್ಯಕ್ಯ ಮಾಡುತ್ತವೆ. ತಿಳುವಳಿಕೆ ಇರುವ ಮಾನವ ಏನು ಮಾಡುತ್ತಾನೆ, ಯಾವ ಸೇವೆ ಮಾಡುತ್ತಾನೆ ಎಂಬುದನ್ನು ಅರಿತು ಮಾಡುವ ಮೂಲಕ ಜೀವನ ಸಾರ್ಥ್ಯಕ್ಯ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಭೈರವೈಕ್ಯ ಶ್ರೀಗಳ ಜಯಂತ್ಯೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ರಾಜ್ಯದ ಎಲ್ಲಾ ಭಾಗದ ಜನರು ಕಾರ್ಯಕ್ರಮ ನೋಡುವಾಗ ಪುತ್ತೂರಿನಲ್ಲಿ ಅದ್ಭುತವಾಗಿ ಕಾರ್ಯಕ್ರಮ ಮಾಡಿದ್ದಾರೆ ಎಂಬ ವಿಚಾರ ಬರಬೇಕೆಂದು ಹೇಳಿದರು.

ಕೊರತೆಗಳನ್ನು ಬದಿಗಿಟ್ಟು ಸಮಷ್ಠಿಯ ದೃಷ್ಟಿಯಿಂದ ಸೇರಬೇಕು : ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಮಠದ ಮೇಲಿನ ಭಕ್ತಿಯಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಇಲ್ಲಿ ವ್ಯಕ್ತಿ ನಿರ್ಮಾಣದ ಜೊತೆಗೆ ಸಮಾಜ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ತಮ್ಮ ತಮ್ಮ ಕೊರತೆಗಳನ್ನು ಬದಿಗಿಟ್ಟು ಸಮಷ್ಠಿಯ ದೃಷ್ಟಿಯಿಂದ ಸಮಾಜ ಬಾಂಧವರು ಸೇರಬೇಕು ಎಂದ ಅವರು ಕಾರ್ಯಕ್ರಮದ ಯಶಸ್ವಿಗಾಗಿ ಗ್ರಾಮಗಳಿಂದ ಬರುವ ಜನರ ಸಂಖ್ಯೆಗಳು ಮತ್ತು ವಾಹನಗಳ ಪಟ್ಟಿಯನ್ನು ನೀಡುವಂತೆ ತಿಳಿಸಿದರು.

ಜಯಂತ್ಯೋತ್ಸವ ಸಂಸ್ಮರಣಾ ವಲಯ ಸಮಿತಿ ರಚನೆ: ಸಭೆಯಲ್ಲಿ ಜಯಂತ್ಯೋತ್ಸವ ಸಂಸ್ಮರಣಾ ವಲಯ ಸಮಿತಿ ರಚನೆ ಮಾಡಲಾಯಿತು. ಪುತ್ತೂರು ವಲಯಕ್ಕೆ ಸಂಬಂಧಿಸಿ ಸಂಚಾಲಕ, ಸಹ ಸಂಚಾಲಕ ಹಾಗೂ ವಲಯಕ್ಕೆ ಬರುವ ಕಸಬ ಸೇರಿದಂತೆ ಗ್ರಾಮಗಳಿಂದಲೂ ತಲಾ ಇಬ್ಬರನ್ನು ಸಮಿತಿಗೆ ಸೇರಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿಯವರು ಸಮಿತಿ ರಚನೆ ಮಾಡಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರವರು ಪಟ್ಟಿ ಘೋಷಣೆ ಮಾಡಿದರು. ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ಸ್ವಾಗತಿಸಿ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ವಂದಿಸಿದರು. ಸಭೆಯಲ್ಲಿ ಪುತ್ತೂರು ವಲಯದ ಪದಾಽಕಾರಿಗಳು ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಡಾ| ನಿರ್ಮಲಾನಂದನಾಥ ಶ್ರೀಗಳ ದಶಮಾನೋತ್ಸವ ಸವಿನೆನಪಿಗೆ ಬೆಳ್ಳಿಯ ತುಲಾಭಾರ

ಆದಿ ಚುಂಚನಗಿರಿ ಕ್ಷೇತ್ರ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರು ಪೀಠಾಧ್ಯಕ್ಷರಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಶಮಾನೋತ್ಸವದ ಸವಿನೆನಪಿನಲ್ಲಿ ಬೆಳ್ಳಿಯ ತುಲಾಭಾರ ಮಾಡಿಸುವ ಕಾರ್ಯಕ್ರಮ ರೂಪಿತವಾಗಿದೆ. ಬೆಳ್ಳಿಯ ತುಲಾಭಾರ ದಕ್ಷಿಣ ಕನ್ನಡ ಜಿಲ್ಲೆಯಿಂದ ನಾವೇ ಪ್ರಪ್ರಥಮವಾಗಿ ಮಾಡುವ ಕೀರ್ತಿ ನಮಗೊದಗಿದೆ. ಭೈರವೈಕ್ಯ ಶ್ರೀಗಳಿಗೆ ಪ್ರಥಮವಾಗಿ ಹಲವು ವರ್ಷಗಳ ಹಿಂದೆಯೇ ಬೆಳ್ಳಿಯ ತುಲಾಭಾರ ಮಾಡಿದ ಕೀರ್ತಿಯೂ ನಮಗಿದೆ. ಹಾಗಾಗಿ ಬೆಳ್ಳಿಯ ತುಲಾಭಾರ ಸೇವೆಗೆ ಭಕ್ತರಿಗೆ ಅವಕಾಶವಿದೆ. ಬೆಳ್ಳಿಯನ್ನು ಸಮರ್ಪಣೆ ಮಾಡುವವರನ್ನು ವಿಶೇಷವಾಗಿ ಗೌರವಿಸಲಾಗುವುದು.

ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠ

LEAVE A REPLY

Please enter your comment!
Please enter your name here