- ಎಸ್.ಐ. ವಿರುದ್ಧ ಕ್ರಮ ಕೈಗೊಳ್ಳದ ಎಸ್.ಪಿ.ಗೆ ನೋಟೀಸ್ ಜಾರಿ ಮಾಡಿದ ಜಡ್ಜ್
- ತಕ್ಷಣವೇ ಕೋರ್ಟಿಗೆ ಹಾಜರಾಗಲು ಸೂಚನೆ
ಬೆಂಗಳೂರು: ನ್ಯಾಯವಾದಿ ಕುಲದೀಪ್ ಶೆಟ್ಟಿಯವರ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಪೂಂಜಾಲಕಟ್ಟೆ ಎಸ್.ಐ.ಸುತೇಶ್ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಉತ್ತರ ನೀಡಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹೈಕೋರ್ಟ್ ಆದೇಶಿಸಿದೆ.
ತನ್ನ ಮೇಲೆ ದೌರ್ಜನ್ಯ ಎಸಗಿರುವ ಪೂಂಜಾಲಕಟ್ಟೆ ಎಸ್.ಐ. ಸುತೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು. ದ.13ರಂದು ಅರ್ಜಿಯ ವಿಚಾರಣೆ ನಡೆಯಿತು. ಕುಲದೀಪ್ ಪರ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದರು.
ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಎಸ್.ಐ. ಅನಗತ್ಯ ಮಧ್ಯಪ್ರವೇಶ ಮಾಡಿದ್ದಾರೆ. ರಾತ್ರಿ ವೇಳೆ ಅಕ್ರಮ ಪ್ರವೇಶ ಮಾಡಿ ನ್ಯಾಯವಾದಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಬಗ್ಗೆ ದೂರು ನೀಡಿದರೂ ಕಾನೂನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಪ್ಪಿತಸ್ಥ ಎಸ್.ಐ.ಮೇಲೆ ಕಾನೂನು ಕ್ರಮ ಜರಗಿಸಲು ಆದೇಶಿಸಬೇಕು ಎಂದು ಪಿಪಿ ಹೆಗ್ಡೆ ನ್ಯಾಯಪೀಠದ ಗಮನ ಸೆಳೆದರು. ಎಸ್.ಐ.ಯವರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದೆ ಎಂದು ಸರಕಾರಿ ವಕೀಲರು ಈ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು. ಕೇವಲ ಸಸ್ಪೆಂಡ್ ಮಾಡಿದರೆ ಸಾಲದು. ಸಿವಿಲ್ ಪ್ರಕರಣದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಿದ್ದಲ್ಲದೆ ಹಲ್ಲೆ ನಡೆಸಿರುವ ಎಸ್.ಐ.ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಂಡು ಬಂಽಸಬೇಕು ಎಂದು ಪಿಪಿ ಹೆಗ್ಡೆ ಒತ್ತಾಯಿಸಿದರು. ವಕೀಲರ ವಾದ ಪುರಸ್ಕರಿಸಿದ ನ್ಯಾಯಮೂರ್ತಿ ನಾಗಪ್ರಸನ್ನರವರು ಸಿವಿಲ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ ಎಸ್.ಐ. ನಡೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಈ ಪ್ರಕರಣದ ಕುರಿತು ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ತಕ್ಷಣವೇ ನ್ಯಾಯಾಲಯಕ್ಕೆ ಹಾಜರಾಗಿ ದ.ಕ. ಎಸ್.ಪಿ.ಮಾಹಿತಿ ಒದಗಿಸಬೇಕು ಎಂದು ಸೂಚಿಸಿ ದ.14ಕ್ಕೆ ವಿಚಾರಣೆ ಮುಂದೂಡಿದ್ದಾರೆ.