ಬೆಟ್ಟಂಪಾಡಿ: ಸಂಜೀವಿನಿ ಒಕ್ಕೂಟ ಕಟ್ಟಡ, ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

0

ನಗರದ ವ್ಯವಸ್ಥೆ ಗ್ರಾಮೀಣ ಭಾಗದಲ್ಲೂ ಆಗುತ್ತಿದೆ – ಮಠಂದೂರು
ಬೆಟ್ಟಂಪಾಡಿ: ನಗರದಲ್ಲಿನ ವ್ಯವಸ್ಥೆ ಸೌಲಭ್ಯಗಳಂತೆ ಗ್ರಾಮೀಣ ಭಾಗದಲ್ಲಿಯೂ ಸೌಲಭ್ಯಗಳಿರಬೇಕೆಂಬ ಸರಕಾರದ ಆಶಯ ಈಡೇರುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪಂಚಾಯತ್ ಸಂಜೀವಿನಿ ಒಕ್ಕೂಟ‌‌ ಕಟ್ಟಡ‌ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಅವರು ದ. 16 ರಂದು ಬೆಟ್ಟಂಪಾಡಿ ಗ್ರಾ.ಪಂ. ಸಂಜೀವಿನಿ ಒಕ್ಕೂಟ ಕೇಂದ್ರ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸಗೈದು, ವಿವಿಧ ಫಲಾನುಭವಿಗಳಿಗೆ ಸಹಾಯಧನ ಚೆಕ್ ವಿತರಣೆ ಮಾಡಿ  ಮಾತನಾಡಿದರು‌. 
ವ್ಯಕ್ತಿ ಮತ್ತು ಸಮಷ್ಟಿಯ ಅಭಿವೃದ್ಧಿಗಾಗಿ ಸರಕಾರ ಶ್ರಮಿಸುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಎಲ್ಲಾ ಮೂಲಭೂತ ಸವಲತ್ತುಗಳು ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ಸಿಗಬೇಕೆಂಬ ನೆಲೆಯಲ್ಲಿ ಸರಕಾರ ಯೋಜನೆಗಳನ್ನು ಹಾಕಿಕೊಂಡಿದೆ. ಹಿಂದೆ ಸಾಲದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು. ಆದರೆ ಈಗ ಸರಕಾರ ತನ್ನ ಸ್ವಂತ ನಿಧಿಯಿಂದಲೇ ಅನೇಕ ಯೋಜನೆಗಳಿಗೆ ಅನುದಾನ ಇಡುತ್ತಿದೆ. ನಗರದ ಜನರಿಗಿರುವ ವ್ಯವಸ್ಥೆ ಸವಲತ್ತುಗಳು ಗ್ರಾಮೀಣ ಭಾಗದ ಜನರಿಗೂ ಕಲ್ಪಿಸಬೇಕು. ರಸ್ತೆ, ನೀರು, ಶಿಕ್ಷಣ ಮೂಲಭೂತ ವ್ಯವಸ್ಥೆಗಳಿಗೆ ಕೊರತೆಯಾಗದಂತೆ ಸರಕಾರ ಕ್ರಮವಹಿಸುತ್ತಿದೆ ಎಂದ ಶಾಸಕರು ಅಶಕ್ತ ಜನರಿಗೆ ಸಹಾಯಧನ ವಿತರಿಸುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ. ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್ ರವರು ಮಾತನಾಡಿ ವಿವಿಧ ಯೋಜನೆಯಡಿ ಜನರಿಗೆ ಇರುವ ಸವಲತ್ತುಗಳ ಮಾಹಿತಿ ನೀಡಿ ಅದರ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು. ಬೆಟ್ಟಂಪಾಡಿ ಪಂಚಾಯತ್ ತಾಲೂಕಿನಲ್ಲಿ ಮಾದರಿಯಾಗಿ ಮುನ್ನಡೆಯುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಮಾತನಾಡಿ ‘ಜನರು ತಮ್ಮ ಹಕ್ಕುಗಳನ್ನು ಸರಕಾರದಿಂದ ಸಮರ್ಪಕ ರೀತಿಯಲ್ಲಿ ಪಡೆದುಕೊಳ್ಳಬೇಕು. ಅದರ ಜೊತೆಗೆ ಕರ್ತವ್ಯವನ್ನೂ ನಿಭಾಯಿಸಿದಾಗ ಪಂಚಾಯತ್ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು‌.
ಸನ್ಮಾನ
ಇದೇ ವೇಳೆ ಪಂಚಾಯತ್ ವತಿಯಿಂದ 5 ವರ್ಷಗಳ ಅವಧಿಯಲ್ಲಿ ಬೆಟ್ಟಂಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸುಮಾರು ರೂ. 25 ಕೋಟಿಗೂ ಅಧಿಕ ಅನುದಾನ ಮಂಜೂರುಗೊಳಿಸಿದ ಶಾಸಕ ಸಂಜೀವ ಮಠಂದೂರುರವರನ್ನು ಸನ್ಮಾನಿಸಲಾಯಿತು.
ಗೌರವಾರ್ಪಣೆ
ಉದ್ಯೊಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಈ ಹಿಂದೆ ಪಂಚಾಯತ್ ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಂದೇಶ್ ಹಾಗೂ ಬಸ್ಸು ತಂಗುದಾಣ ಸ್ವಚ್ಛತೆ ನಿರ್ವಹಣೆ ಮಾಡುತ್ತಿರುವ ಬೆಟ್ಟಂಪಾಡಿ ಎನ್.ಎಸ್.ಎಸ್. ಘಟಕ ಯೋಜನಾಧಿಕಾರಿ ಹರಿಪ್ರಸಾದ್ ಹಾಗೂ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಚೆಕ್ ವಿತರಣೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿವಿಧ ರೀತಿಯ ಫಲಾನುಭವಿಗಳಿಗೆ ಸರಕಾರದ ಸಹಾಯಧನದ ಚೆಕ್ ನ್ನು ಹಾಗೂ ವಿಕಲಚೇತನರಿಗೆ ಸವಲತ್ತುಗಳನ್ನು ಶಾಸಕರು ಸಾಂಕೇತಿಕವಾಗಿ ವಿತರಿಸಿದರು. ಕಾರ್ಯದರ್ಶಿ ಬಾಬು ನಾಯ್ಕ್ ಫಲಾನುಭವಿಗಳ ಪಟ್ಟಿ ವಾಚಿಸಿದರು.
ಪಿಡಿಒ ಸೌಮ್ಯ ಸ್ವಾಗತಿಸಿ, ಸದಸ್ಯ ಚಂದ್ರಶೇಖರ ರೈ ಬಾಲ್ಯೊಟ್ಟು ವಂದಿಸಿದರು. ಸಂಜೀವಿನಿ ಸಂಘದ ಸದಸ್ಯೆ ಗೀತಾ ಪ್ರಾರ್ಥಿಸಿದರು.
ತಾ.ಪಂ.‌ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ.‌ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ  ಆರ್.ಸಿ. ನಾರಾಯಣ, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಪ್ರವೀಣ್ ರೈ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಸಹಕಾರಿ ಸಂಘದ ನಿರ್ದೇಶಕರಾದ ಕರುಣಾಕರ ಶೆಟ್ಟಿ ಕೊಮ್ಮಂಡ, ಶೇಷಪ್ಪ ರೈ ಮೂರ್ಕಾಜೆ, ನಾಗರಾಜ್ ಕಜೆ, ಹರೀಶ್ ಜಿ. ಗೌಡ,  ಶಿವಕುಮಾರ್ ಬಲ್ಲಾಳ್, ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಮಹೇಶ್ ಕೆ., ಪಾರ್ವತಿ ಲಿಂಗಪ್ಪ ಗೌಡ, ಉಮಾವತಿ ಸುಬ್ಬಪ್ಪ ಮಣಿಯಾಣಿ,  ಬೇಬಿ ಜಯರಾಮ ಪೂಜಾರಿ,‌ ಗಂಗಾಧರ ಎಂ.ಎಸ್. ಮಿತ್ತಡ್ಕ, ವಿದ್ಯಾಶ್ರೀ ಸರಳಿಕಾನ, ಗೋಪಾಲ ಬೈಲಾಡಿ, ಲಲಿತಾ ಶೇಖರ್ ಗೋಳಿಪದವು, ರಮ್ಯಾ ಕೆ., ಗ್ರಾಮಕರಣಿಕ ಮಂಜುನಾಥ್, ಪಂಚಾಯತ್ ಗುತ್ತಿಗೆದಾರ ಗೋಕುಲ ಕನ್‌ಸ್ಟ್ರಕ್ಷನ್ ನವೀನ್ ಕುಮಾರ್, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡರು.
ಸಿಬಂದಿಗಳಾದ ಸಂದೀಪ್ ತಲೆಪ್ಪಾಡಿ, ಕವಿತಾ, ಸವಿತಾ,‌ ಗ್ರಂಥಪಾಲಕಿ ಪ್ರೇಮಾ ವಿವಿಧ ರೀತಿಯಲ್ಲಿ ಸಹಕರಿಸಿದರು.
ಪುಳಿತ್ತಡಿ‌ ರಸ್ತೆ, ಬೆಂದ್ರ್ ತೀರ್ಥ ರಸ್ತೆ‌, ಕದಿಕೆ ಚಾವಡಿ ಅನ್ನಛತ್ರ, ಗೋಳಿಪದವು ಅಂಬೇಡ್ಕರ್ ಭವನ, ತಲಪ್ಪಾಡಿ ಗುತ್ತು ರಸ್ತೆ, ಬೀಡು ಗೋಳಿಪದವು ರಸ್ತೆ, ಬಿಲ್ವಗಿರಿ – ದೇವಮಣಿ – ಕೋನಡ್ಕ‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಯಿತು. ಮಧ್ಯಾಹ್ನ‌ ಪಂಚಾಯತ್ ಬಳಿ ನಿರ್ಮಿಸಲಾಗುವ ಪಂಚಾಯತ್ ಸಂಜೀವಿನಿ‌ ಒಕ್ಕೂಟದ‌ ನೂತನ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದರು. 15 ನೇ ಹಣಕಾಸಿನ ಯೋಜನೆಯಲ್ಲಿ ಒಟ್ಟು 37.5 ಲಕ್ಷ ರೂ.,  ಸಂಜೀವಿನಿ ಒಕ್ಕೂಟ ಕಟ್ಟಡಕ್ಕೆ ಪಂಚಾಯತ್ ಅನುದಾನ 17.5 ಲಕ್ಷ‌ ಹಾಗೂ ನರೇಗಾ ಕಾಮಗಾರಿಗಳ ರೂ. 26.14 ಲಕ್ಷ ದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪರಿಶಿಷ್ಟ ಪಂಗಡ/ಜಾತಿಯವರಿಗೆ 1.60 ಲಕ್ಷ ರೂ. ಹಾಗು ವಿಕಲಚೇತನರಿಗೆ 1.3 ಲಕ್ಷ ರೂ. ಸಹಾಯಧನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here