ನೆಲ್ಯಾಡಿ: ಸಂಯುಕ್ತ ಕ್ರಿಸ್ಮಸ್ ಆಚರಣೆ

0

ಜೀವನದಲ್ಲಿ ಸ್ನೇಹ, ಐಕ್ಯತೆ ಇರಲಿ: ಬಿಷಪ್ ಗೀವರ್ಗೀಸ್ ಮಾರ್ ಅಫ್ರೇಮ್


ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಅಸುಪಾಸಿನ ಕ್ರೈಸ್ತ ದೇವಾಲಯಗಳು, ವಿದ್ಯಾಸಂಸ್ಥೆಗಳು ಮತ್ತು ಕಾನ್ವೆಂಟ್‌ಗಳ ಆಶ್ರಯದಲ್ಲಿ ನೆಲ್ಯಾಡಿಯಲ್ಲಿ ಡಿ.18ರಂದು ಸಂಯುಕ್ತ ಕ್ರಿಸ್ಮಸ್ ಆಚರಿಸಲಾಯಿತು.


ಸಂಜೆ ನೆಲ್ಯಾಡಿ ಬಸ್‌ನಿಲ್ದಾಣದಿಂದ ಗಾಂಧಿಮೈದಾನದ ತನಕ ಮೆರವಣಿಗೆ ನಡೆಯಿತು. ಬಳಿಕ ನೆಲ್ಯಾಡಿ ಗಾಂಧಿಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕೊಟ್ಟಯಂ ಡಯೋಸಿಸ್‌ನ ಆಕ್ಸಿಲರಿ ಬಿಷಪ್ ಆಫ್ ದಿ ಆರ್ಚ್ ಗೀವರ್ಗೀಸ್ ಮಾರ್ ಅಫ್ರೇಮ್‌ರವರು ದೀಪ ಪ್ರಜ್ವಲನೆ ಮಾಡಿದರು. ನಂತರ ಕ್ರಿಸ್ಮಸ್ ಸಂದೇಶ ನೀಡಿದ ಅವರು, ಯೇಸು ಕ್ರಿಸ್ತರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಸ್ನೇಹ, ಐಕ್ಯತೆಯಿಂದ ಕೂಡಿದ ಜೀವನ ನಿತ್ಯ, ನೂತನವಾಗಿರಲೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕ್ರಿಶ್ಚಿಯನ್ ಡೆವಲಪ್‌ಮೆಂಟ್ ಕೌನ್ಸಿಲ್ ಅಧ್ಯಕ್ಷ ಜೆ. ಕೆನಡಿ ಶಾಂತಕುಮಾರ್‌ರವರು ಮಾತನಾಡಿ, ಕ್ರೈಸ್ತ ಸಮುದಾಯ ರಾಷ್ಟ್ರಪ್ರೇಮಿ ಸಮುದಾಯವಾಗಿದ್ದು ಈ ಸಮುದಾಯದ ಸಂಪೂರ್ಣ ರಕ್ಷಣೆ ಸರಕಾದ ಕರ್ತವ್ಯವಾಗಿದೆ. ಸರಕಾರದ ಸವಲತ್ತು ಪಡೆದುಕೊಳ್ಳುವಲ್ಲಿ ಕ್ರೈಸ್ತ ಸಮುದಾಯ ವಿಫಲವಾಗುತ್ತಿದೆ. ಕ್ರೈಸ್ತ ಸಮುದಾಯದ ಕಲ್ಯಾಣಕ್ಕೆ ಸರಕಾರ ವರ್ಷದಲ್ಲಿ ಕೋಟ್ಯಾಂತರ ರೂ., ಅನುದಾನ ನೀಡುತ್ತಿದೆ. ಇದರ ಬಗ್ಗೆ ಯಾರಿಗೂ ಅರಿವು ಇಲ್ಲ. ಕ್ರೈಸ್ತ ಸಮುದಾಯಕ್ಕೆ ನ್ಯಾಯಬದ್ಧವಾಗಿ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಈ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ಅಧ್ಯಕ್ಷ ಫಾ.ಸಿಬಿ ಪನಚಿಕ್ಕಲ್‌ರವರು ಮಾತನಾಡಿ, ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಸಂಯುಕ್ತ ಕ್ರಿಸ್ಮಸ್ ಅದ್ದೂರಿಯಾಗಿ ನಡೆದಿಲ್ಲ. ಆದರೆ ಈ ಸಲ ಕ್ರಿಸ್ಮಸ್ ಆಚರಣಾ ಸಮಿತಿ ರಚಿಸಿಕೊಂಡು ಅದ್ದೂರಿಯಾಗಿ ಆಚರಿಸಲಾಗಿದೆ. ಇದಕ್ಕೆ ನೆಲ್ಯಾಡಿ ಅಸುಪಾಸಿನ ಕ್ರೈಸ್ತ ದೈವಾಲಯಗಳು, ವಿದ್ಯಾಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ ಎಂದರು.


ಸನ್ಮಾನ:
ಕ್ರಿಸ್ಮಸ್ ಸಂದೇಶ ನೀಡಿದ ಬಿಷಪ್ ಗೀವರ್ಗೀಸ್ ಮಾರ್ ಅಫ್ರೇಮ್ ಹಾಗೂ ಮುಖ್ಯ ಅತಿಥಿ ಜೆ. ಕೆನಡಿ ಶಾಂತಕುಮಾರ್‌ರವರನ್ನು ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಮೀಸಲಾತಿಗಾಗಿ ಮನವಿ:
ಕ್ರೈಸ್ತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಈ ಸಂದರ್ಭದಲ್ಲಿ ಜೆ.ಕೆನಡಿ ಶಾಂತಕುಮಾರ್‌ರವರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಮನವಿ ಮಾಡಲಾಯಿತು. ಸಮಿತಿ ಉಪಾಧ್ಯಕ್ಷ ಫಾ.ನಿತಿನ್ ಮ್ಯಾಥ್ಯು, ಖಜಾಂಜಿ ಜಿನೋಯ್ ಎ.ಜಾರ್ಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. . ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ಜನರಲ್ ಕನ್ವೀನರ್ ಫಾ.ತೋಮಸ್ ಬಿಜಿಲಿ ಒಐಸಿ ಸ್ವಾಗತಿಸಿದರು. ಕಾರ್ಯದರ್ಶಿ ಮನೋಜ್ ವರ್ಗೀಸ್ ವರದಿ ಮಂಡಿಸಿದರು. ವಿನ್ಸೆಂಟ್ ಮಿನೇಜಸ್ ನೆಲ್ಯಾಡಿ, ರೇಖಾ ಶಿರಾಡಿ, ಟೀನಾ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್ ಸೇರಿದಂತೆ ನೆಲ್ಯಾಡಿ ಅಸುಪಾಸಿನ ಕ್ರೈಸ್ತ ದೇವಾಲಯಗಳ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅದ್ದೂರಿ ಮೆರವಣಿಗೆ:
ಸಭಾ ಕಾರ್ಯಕ್ರಮಕ್ಕೆ ಮೊದಲು ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಗಾಂಧಿಮೈದಾನದ ತನಕ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ನೆಲ್ಯಾಡಿ ಅಸುಪಾಸಿನ ಸುಮಾರು ೨೨ ಚರ್ಚ್‌ಗಳ ಸದಸ್ಯರು ವಿವಿಧ ಬಣ್ಣ ಬಣ್ಣದ ಬಟ್ಟೆಗಳೊಂದಿಗೆ ಕಂಗೊಳಿಸಿದರು. ಯೇಸು ಕ್ರಿಸ್ತರ ಜನನ, ಮರಣದ ಸಂದೇಶ ಸಾರುವ ವಿವಿಧ ಸ್ಥಬ್ದ ಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿವೆ. ಸಭಾ ಕಾರ್ಯಕ್ರಮದ ಬಳಿಕ ನೆಲ್ಯಾಡಿ ಅಸುಪಾಸಿನ ವಿವಿಧ ಕ್ರೈಸ್ತದೇವಾಲಯಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here