ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಆರೋಪ – ಉಪವಲಯ ಅರಣ್ಯಾಧಿಕಾರಿ ವಿರುದ್ಧ ವಿ.ಹಿಂ.ಪ, ಬಜರಂಗ ದಳದಿಂದ ಪ್ರತಿಭಟನೆ

0

ಭಜನೆಯಿಂದ ಆರಂಭಗೊಂಡ ಪ್ರತಿಭಟನೆ ಡಿ.ಎಫ್ .ಒ ಸ್ಥಳಕ್ಕೆ ಆಗಮಿಸುವಂತೆ ಪಟ್ಟು 

ಮಂಗಳೂರು ವಲಯದ ಎಸಿಎಫ್ ಆಗಮನ: ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅಮಾನತು-ಭರವಸೆ
ಪ್ರತಿಭಟನೆ ತಾತ್ಕಾಲಿಕ ಹಿಂತೆಗೆತ: ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ
ಅರಣ್ಯ ಇಲಾಖೆ ಕಚೇರಿ ಎದುರು ಭಜನೆ ಮೂಲಕ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಸಂಜೀವ ಪೂಜಾರಿ ಅಮಾನತಿಗೆ ಆಗ್ರಹ ಸ್ಥಳಕ್ಕೆ ಡಿ.ಎಫ್‌ಒ ಬರಲು ಪ್ರತಿಭಟನಾಕಾರರ ಪಟ್ಟು

 

ಪುತ್ತೂರು: ಭಜನೆ ಮತ್ತು ಭಜಕರ ವಿರುದ್ಧ ನಿಂದನೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಲ್ಲದೆ ಧರ್ಮನಿಂದನೆ ಮಾಡಿರುವುದಾಗಿ ಆರೋಪಿಸಿ ಕೊಯಿಲ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರ ವಿರುದ್ಧ ವಿ.ಹಿಂ.ಪ, ಬಜರಂಗದಳದ ವತಿಯಿಂದ ಪುತ್ತೂರು ಅರಣ್ಯ ಇಲಾಖೆಯ ಕಛೇರಿಯ ಎದುರು ಡಿ.21 ರಂದು ಪ್ರತಿಭಟನೆ ನಡೆಸಿ ಆಪಾದಿತ ಅಧಿಕಾರಿಯ ಅಮಾನತಿಗೆ ಆಗ್ರಹಿಸಲಾಗಿದೆ.ಭಜನೆ ಮೂಲಕ ಪ್ರತಿಭಟನೆ ಆರಂಭಗೊಂಡಿತ್ತು.

ಪ್ರತಿಭಟನಾ ಸ್ಥಳಕ್ಕೆ ಡಿಎಫ್‌ಒ ಅವರು ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಮತ್ತು ಡಿಎಫ್‌ಒ ಬದಲು ಸ್ಥಳಕ್ಕೆ ಆಗಮಿಸಿದ ಮಂಗಳೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಸಂಜೀವ ಪೂಜಾರಿಯವರ ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.ಎಸಿಎಫ್ ಅವರು ಹೇಳಿರುವಂತೆ ಸಂಜೀವ ಪೂಜಾರಿಯವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹಿಂದು ಸಂಘಟನೆಯವರು ಎಚ್ಚರಿಕೆ ನೀಡಿದ್ದಾರೆ.

ಕಾಣಿಯೂರು ಭಾಗದ ನಿವಾಸಿಯಾಗಿರುವ ಸಂಜೀವ ಪೂಜಾರಿ ಅವರು ಕೊಲದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ, ಸಾಮಾಜಿಕ ಶಾಂತಿ ಕದಡಿದ್ದಾರೆ.ಜನಸಾಮಾನ್ಯರು ಅತ್ಯಂತ ಶ್ರದ್ದೆ, ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಭಜನೆಯ ಬಗ್ಗೆ ಡಿ.20ರಂದು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ಗಳನ್ನು ಹಾಕಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ.ಈ ವ್ಯಕ್ತಿ ಹಿಂದೆಯೂ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು, ಒಬ್ಬ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದು ಇವರ ವಿರುದ್ದ ಪ್ರಕರಣ ದಾಖಲಿಸಬೇಕು ಅಲ್ಲದೆ ಕರ್ತವ್ಯದಿಂದ ವಜಾ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಿಂದು ಸಮಾಜದಿಂದಲೇ ಕ್ರಮ:
ನಮ್ಮ ಪ್ರತಿಭಟನೆಗೆ ಯಾವುದೇ ಸ್ಪಂದನೆ ದೊರೆಯದಿದ್ದರೆ ಮತ್ತು ಇಲಾಖೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾರ್ಯಕರ್ತರು ಹಾಗು ಹಿಂದೂ ಸಮಾಜ ಅವರ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಅವರು ಹೇಳಿದರು.

ಭಜನೆ ಮೂಲಕ ಪ್ರತಿಭಟನೆ:
ಆರಂಭದಲ್ಲಿ ಸಂಜೀವ ಪೂಜಾರಿ ಅವರ ವಿರುದ್ಧ ಘೋಷಣೆ ಕೂಗಲಾಯಿತು.ಬಳಿಕ ಘೋಷಣೆ ಕೂಗಿ ನಿರಂತರ ಭಜನೆ ಆರಂಭಿಸಲಾಯಿತು.ಅರಣ್ಯ ಇಲಾಖೆಯ ಕಚೇರಿಯ ಬಳಿ ನಡೆಸಿದ ಪ್ರತಿಭಟನೆಯ ವೇಳೆ ಅಧಿಕಾರಿಗಳು ಬಂದಿಲ್ಲ ಎಂದು ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡರು.ಅನೇಕ ಮಂದಿ ಪುರುಷ ಮತ್ತು ಮಹಿಳೆಯರು ಭಜನೆ ಹೇಳಿದರು.ವಿಶ್ವಹಿಂದೂ ಪರಿಷತ್ ಬಜರಂಗದಳ ದುರ್ಗಾವಾಹಿನಿಯಿಂದಲೂ ಸದಸ್ಯರು ಆಗಮಿಸಿ ಭಜನೆ ಹೇಳಿದರು.

ಸ್ಪಂದನೆ ಸಿಗದಾಗ ಗೇಟ್‌ನ ಮುಂದೆ ಪ್ರತಿಭಟನೆ:
ಪ್ರತಿಭಟನೆಗೆ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಪ್ರತಿಭಟನೆಯ ಸ್ವರೂಪ ಬದಲಾಗಿ ವಲಯ ಅರಣ್ಯ ಇಲಾಖೆಯ ಗೇಟ್‌ನ ಮುಂದೆ ಕುಳಿತು ಭಜನೆ ಮೂಲಕ ಪ್ರತಿಭಟನೆ ಮುಂದುವರಿಯಿತು.ಈ ವೇಳೆ ಸ್ಥಳಕ್ಕೆ ಡಿಎಫ್‌ಓ ಬರುವಂತೆ ಒತ್ತಾಯಿಸಲಾಯಿತು.ಅವರು ಬರುವ ತನಕ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಗೇಟ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಲಯಾರಣ್ಯಾಧಿಕಾರಿಯನ್ನು ಹಿಂದಕ್ಕೆ ಕಳುಹಿಸಿದ ಪ್ರತಿಭಟನಾಕಾರರು:
ಅರಣ್ಯ ಇಲಾಖೆಯ ಗೇಟ್ ಮುಂದೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಅವರು ಪ್ರತಿಭಟನಾಕಾರರಲ್ಲಿ, ಸಂಜೀವ ಪೂಜಾರಿ ಅವರ ವಿರುದ್ಧ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಮಂಗಳೂರಿನಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಅನ್ಯ ಕಾರಣದಿಂದ ಬರಲಾಗುತ್ತಿಲ್ಲ.ನಿಮ್ಮ ಮನವಿ ಸ್ವೀಕರಿಸಲು ತಿಳಿಸಿದ್ದಾರೆ ಎಂದು ಅವರು ಹೇಳಿದಾಗ ಆಕ್ಷೇಪಿಸಿದ ಪ್ರತಿಭಟನಾಕಾರರು ನಮಗೆ ಡಿಎಫ್‌ಓ ಸ್ಥಳಕ್ಕೆ ಬರಬೇಕು ಮತ್ತು ಈ ಕ್ಷಣದಲ್ಲೇ ಸಂಜೀವ ಪೂಜಾರಿ ಅಮಾನತು ಆಗಬೇಕೆಂದು ಪಟ್ಟು ಹಿಡಿದರು.ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ಈಗಾಗಲೇ ಸಮಯ ಮೀರಿದೆ.ಅವರನ್ನು ಅಮಾನತು ಮಾಡದೆ ನಾವು ಸ್ಥಳದಿಂದ ಕದಲುವುದಿಲ್ಲ.ಮೇಲಾಧಿಕಾರಿಗಳು ಸ್ಥಳಕ್ಕೆ ಬರಲು ಆಗುವುದಿಲ್ಲ ಎಂದಾದರೆ ನಿಮ್ಮ ಇಲಾಖೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರ್ಥವಾಗಿದೆ.ಇಲಾಖೆ ಆ ವ್ಯಕ್ತಿಯ ಪರವಾಗಿ ನಿಂತಿದೆ ಎಂದು ನಾವು ತಿಳಿದು ಕೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ನಾವು ಇಲಾಖೆ ವಿರುದ್ಧವೇ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು.ಬಳಿಕ ವಲಯ ಅರಣ್ಯಾಧಿಕಾರಿ ಅಲ್ಲಿಂದ ತೆರಳಿದರು.

ಸ್ಥಳಕ್ಕೆ ಮಂಗಳೂರು ಎಸಿಎಫ್ ಆಗಮನ:
ಕೊನೆಗೆ ಮಧ್ಯಾಹ್ನದ ವೇಳೆಗೆ ಡಿಎಫ್‌ಒ ಪರವಾಗಿ ಮಂಗಳೂರು ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರಲ್ಲಿ ಮಾತನಾಡಿದರು. ಪ್ರತಿಭಟನಾಕಾರರು, ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿ ತಂದಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಇವತ್ತಿನಿಂದಲೇ ರಜೆಯಲ್ಲಿ ಕಳುಹಿಸಬೇಕು ಮತ್ತು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ ರಾವ್, ಒಂದು ವಾರ ಸಮಯ ಕೊಡಬೇಕು.ಒಬ್ಬ ಸರಕಾರಿ ಅಧಿಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸರಕಾರಿ ಪದನಾಮ ಬಳಸಿ ಅವಹೇಳನಕಾರಿ ವಿಚಾರ ಹಾಕುವುದು ತಪ್ಪು.ಈ ಕುರಿತು ಈಗಾಗಲೇ ವಲಯ ಅರಣ್ಯಾಧಿಕಾರಿಯವರು ಅವರಿಗೆ ನೋಟೀಸ್ ಮಾಡಿದ್ದಾರೆ.ಅವರು ಎರಡು ದಿವಸದೊಳಗೆ ಉತ್ತರ ಕೊಡಬೇಕು.ಅವರ ಉತ್ತರದ ಮೇಲೆ ಎಸಿಎಫ್‌ಗೆ ವರದಿ ಕಳುಹಿಸಲಾಗುತ್ತದೆ.ಅವರ ಮೂಲಕ ಸಿಸಿಎಫ್‌ಗೆ ವರದಿ ಹೋಗಿ ಅಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಆದರೆ ಪ್ರತಿಭಟನಾಕಾರರು, ಅಷ್ಟು ಸಮಯ ಕಾಯುವ ತಾಳ್ಮೆ ನಮಗಿಲ್ಲ.ಅವರನ್ನು ಇವತ್ತೇ ಅಮಾನತು ಮಾಡಬೇಕು.ಇಲ್ಲವಾದಲ್ಲಿ ಒಂದು ವಾರ ಕಾಲಾವಕಾಶ ಕೊಡುತ್ತೇವೆ.ಆದರೆ ಈ ಕ್ಷಣದಿಂದಲೇ ಅವರನ್ನು ರಜೆಯಲ್ಲಿ ಕಳುಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಅವರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.ಅವರು ನೀಡಿದ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಹಿಂದಿನ ಪ್ರಕರಣಕ್ಕೂ ಕ್ರಮ ಕೈಗೊಂಡಿಲ್ಲ:
ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಈ ಹಿಂದೆಯೂ ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಪದವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದನ್ನು ಈ ಹಿಂದೆ ಎರಡು ಮೂರು ಭಾರಿ ದೂರು ನೀಡಿzವೆ.ಆದರೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ರಂಜಿತ್ ಮಲ್ಲಾರ್ ಅವರು ಪ್ರಸ್ತಾಪಿಸಿದರು.ಧ್ವನಿಗೂಡಿಸಿದ ಮುರಳಿಕೃಷ್ಣ ಹಸಂತಡ್ಕ ಅವರು ಸಂಜೀವ ಪೂಜಾರಿ ಅವರು ಈ ಹಿಂದೆ ಜನಪ್ರತಿನಿಧಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಗೋವಿನ ಬಗ್ಗೆ, ಕಾರ್ಯಾಲಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳು ಪದದಲ್ಲಿ ಬರೆದಿದ್ದಾರೆ. ನಾಳೆ ಇನ್ಯಾವುದೋ ವಿಚಾರಕ್ಕೂ ಬರೆಯುವ ಸಾಧ್ಯತೆ ಇದೆ.ಹಾಗಾಗಿ ಈ ಬಾರಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.

ಡಿಎಫ್‌ಒ, ಸಿಸಿಎಫ್‌ಗೆ ಕರೆ:
ಬಜರಂಗಳದ ಕರ್ನಾಟಕ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಪ್ರತಿಭಟನೆ ವೇಳೆ ನೇರವಾಗಿ ಡಿಎಫ್‌ಒ ದಿನೇಶ್ ಮತ್ತು ಸಿಸಿಎಫ್ ಪ್ರಕಾಶ್ ನಟ್ಲೇಕರ್ ಅವರಿಗೆ ಕರೆ ಮಾಡಿದರು.ಪುತ್ತೂರಿಗೆ ಆಗಮಿಸಿದ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರಿಗೆ ಈ ಕುರಿತು ವರದಿ ಕಳುಹಿಸುವಂತೆ ಅಧಿಕಾರಿಗಳು ತಿಳಿಸಿರುವುದಾಗಿ ಮುರಳೀಕೃಷ್ಣ ಅವರು ಪ್ರತಿಭಟನಾನಿರತರಿಗೆ ತಿಳಿಸಿದರು.ಪ್ರತಿಭಟನೆಯಲ್ಲಿ ಕಡಬ ವಿ.ಹಿಂ.ಪ.ನ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಶ್ರೀಧರ್ ತೆಂಕಿಲ, ಹರೀಶ್ ದೋಳ್ಪಾಡಿ, ಹಿಂದು ಜಾಗರಣ ವೇದಿಕೆಯ ಮುಖಂಡರಾದ ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ವಿಶ್ವಹಿಂದೂ ಪರಿಷತ್‌ನ ಮುಖಂಡರಾದ ಉಮೇಶ್ ಶೆಟ್ಟಿ ಸಾಯಿರಾಮ್, ಸುಳ್ಯ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಸುಳ್ಯ, ವಿಶ್ವಹಿಂದು ಪರಿಷತ್‌ನ ಜಯಂತ್, ದುರ್ಗಾವಾಹಿನಿಯ ಮೋಹಿನಿ ದಿವಾಕರ್, ಪ್ರೇಮಲತಾ ರಾವ್, ನ್ಯಾಯವಾದಿ ಮಾಧವ ಪೂಜಾರಿ, ಹಿಂದು ಸಂಘಟನೆಯ ಸಂತೋಷ್ ರೈ ಕೈಕಾರ, ಪ್ರವೀಣ್ ರೈ ತಿಂಗಳಾಡಿ, ವಿಠಲ್ ದಾಸ್, ಕೃಷ್ಣಕುಮಾರ್ ರೈ, ಕೃಷ್ಣಪ್ರಸಾದ್ ಶೆಟ್ಟಿ, ಪ್ರಮೋದ್, ತಿಲಕ್, ಪ್ರಮೋದ್ ರೈ, ಗಣೇಶ್, ಹರ್ಷಿತ್, ಯಜ್ಞೇಶ್, ತೀರ್ಥೆಶ್, ಮಹೇಶ್, ಸಂತೋಷ್ ದೋಳ, ರಕ್ಷಿತ್, ಪವನ್ ಹಳ್ಳಿ, ಕೌಶಿಕ್, ಯತೀನ್ ಕಲ್ಲೇರಿ, ರೋಹಿತ್ ಹಳ್ಳಿ, ಪ್ರದೀಪ್ ಹಳ್ಳಿ, ಲಾವಣ್ಯ, ಯಶೋದ, ಚೈತ್ರ ಸಹಿತ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳದಲ್ಲೇ ಮಧ್ಯಾಹ್ನದ ಅಡುಗೆ

ಪ್ರತಿಭಟನೆ ಸಂದರ್ಭ ಆರಂಭದಲ್ಲಿ ಮೇಲಧಿಕಾರಿಗಳು ಸ್ಥಳಕ್ಕೆ ಬಾರದೇ ಇದ್ದುದರಿಂದ ಅವರು ಬರುವ ತನಕ ಸ್ಥಳದಿಂದ ಕದಡುವುದಿಲ್ಲ ಎಂದು ಘೋಷಿಸಿದ್ದ ಪ್ರತಿಭಟನಾಕಾರರು ಪ್ರತಿಭಟನೆ ನಿರತರಿಗೆ ಮಧ್ಯಾಹ್ನದ ಊಟಕ್ಕಾಗಿ ಸ್ಥಳದಲ್ಲೇ ಅಡುಗೆ ಮಾಡಲಾಯಿತು.ಮಧ್ಯಾಹ್ನದ ಊಟದ ಬಳಿಕ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರ ಭರವಸೆಯ ಮೇರೆಗೆ ಪ್ರತಿಭಟನೆ ಹಿಂಪಡೆದ ಬಳಿಕ ಪ್ರತಿಭಟನೆನಿರತರಿಗೆ ಚಹಾ ತಿಂಡಿ ವ್ಯವಸ್ಥೆಯನ್ನೂ ಮಾಡಲಾಯಿತು.

ಸ್ಥಳದಲ್ಲಿ ಗಂಜಿ ಊಟಕ್ಕೆ ತಯಾರಿ

 ಟಯರ್, ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಪ್ರಯತ್ನ

ಪ್ರತಿಭಟನೆ ಮುಗಿದ ಬಳಿಕ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಲು ಯತ್ನಸಿದ ಘಟನೆಯೂ ನಡೆಯಿತು.ಆದರೆ ಅಲ್ಲೇ ಇದ್ದ ಪೊಲೀಸರು ಸಮಯಪ್ರಜ್ಞೆ ಮೆರೆದು ಅದನ್ನು ತಡೆದರು. ಟಯರ್‌ಗೆ ಹಿಡಿದ ಬೆಂಕಿಯನ್ನು ಪೊಲೀಸರೇ ನಂದಿಸಿದರು.ಬಳಿಕ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರ ಭಾವ ಚಿತ್ರಕ್ಕೆ ಬೆಂಕಿ ಹಚ್ಚಲು ಯತ್ನ ನಡೆಯಿತು.ಪೊಲೀಸರು ಅದನ್ನೂ ತಡೆದರು.

LEAVE A REPLY

Please enter your comment!
Please enter your name here