ಪುತ್ತೂರು:ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಪುತ್ತೂರು ಇವುಗಳ ಆಶ್ರಯದಲ್ಲಿ ರೈತ ದಿನಾಚರಣೆ ಹಾಗೂ ಸಂವಾದ, ಮಾಹಿತಿ ಹಾಗೂ ಸನ್ಮಾನ ಕಾರ್ಯಕ್ರಮಗಳು ಡಿ.23 ರಂದು ದರ್ಬೆ ಕೃಷಿ ಇಲಾಖಾ ಸಹಾಯಕ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಡಮಜಲು ಸುಭಾಷ್ ರೈ ಮಾತನಾಡಿ, ಕೃಷಿ ಎನ್ನುವುದು ರಿಲೇ ಓಟದ ತರವಿರಬೇಕು. ನಮ್ಮ ನಂತರ ಮಕ್ಕಳು ಕೃಷಿ ಮಾಡಬೇಕು. ಇದಕ್ಕಾಗಿ ಮಕ್ಕಳನ್ನು ಕೃಷಿಗೆ ಪೂರಕವಾಗಿ ಬೆಳೆಸಬೇಕು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕೃಷಿಯಲ್ಲಿ ತೊಡಗಿಶಿಕೊಳ್ಳಬೇಕು. ಆಗ ಕೃಷಿಕ ದೇಶದ ಬೆನ್ನೆಲುಬು ಆಗಲಿದ್ದಾರೆ. ನಮ್ಮ ಬದುಕನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಕೃಷಿಯಲ್ಲಿ ಅತೀ ನಿರೀಕ್ಷೆ ಶಾಂತಿಗೆ ಭಂಗ ಉಂಟುಮಾಡುತ್ತದೆ. ಪ್ರಕೃತಿಯ ಜೊತೆ ಹೊಂದಿಕೊಳ್ಳವುದಲ್ಲದೆ ಕೃಷಿಯಲ್ಲಿ ಕೌಶಲ್ಯವನ್ನು ತೋರಿಸಿಕೊಳ್ಳಬೇಕು ಎಂದು ಹೇಳಿದ ಅವರು ಪರಿಜ್ಞಾನ, ಪರಿಶ್ರಮ, ಪರಿಪೂರ್ಣ ನಿರ್ವಹಣೆ, ಪ್ರೀತಿಯ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು ಎಂಬ ಕೃಷಿಯಲ್ಲಿ ಪಂಚಸೂತ್ರಗಳನ್ನು ಅಳವಡಿಕೊಂಡಾಗ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ಸೇವಾ ಭಾರತಿ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಎ.ಪಿ ಸದಾಶಿವ ಮಾತನಾಡಿ, ಕೃಷಿಕನಿಗೂ ರೈತರಿಗೂ ವ್ಯತ್ಯಾಸವಿದೆ. ಅಧಿಕ ಸಂಪಾದನೆಯಿಂದಾಗಿ ಕೃಷಿ ಇಂದು ಉದ್ಯಮವಾಗಿ ಪರಿವರ್ತನೆಗೊಂಡಿದೆ. ಇದಕ್ಕಾಗಿ ಪರಿಸರ ನಾವಾಗುತ್ತಿದೆ. ಕೃಷಿಯ ಹೆಸರಿನಲ್ಲಿ ವಿಸ್ತಾರ ಆಗಿ ಮೂಲಾಧಾರ ಕಡಿಮೆಯಾಗುತ್ತದೆ. ವಿಜ್ಞಾನ ವಿರುದ್ಧವಾಗಿ ಕೃಷಿ ನಡೆಯುತ್ತಿದ್ದು ವಿನಾಶಗಳನ್ನು ಎದುರಿಸುತ್ತಿದೆ. ಸಾವಯವ ಗೊಬ್ಬರಗಳ ಬದಲು ಅಧಿಕ ಇಳುವರಿಗಾಗಿ ರಾಸಾಯನಿಕ ಅತ್ಯಧಿಕ ಬಳಸುವುದರಿಂದ ನಾನಾ ರೋಗಗಳು ಕಾಣುತ್ತಿದ್ದು ಜಂಕ್ ಫುಡ್ ಶರೀರಕ್ಕೆ ಅಪಾಯದಂತೆ ರಾಸಾಯನಿಕ ಗೊಬ್ಬರಗಳು ಭೂಮಿಗೆ ಅಪಾಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ, ಕಳೆದ ಬಾರಿ ಹಡಿಲು ಗದ್ದೆ ಬೇಸಾಯಕ್ಕೆ ಪ್ರೋತ್ಸಾಹ ನೀಡಿರುವುದಲ್ಲದೆ ಪ್ರೋತ್ಸಾಹಧನವನ್ನು ನೀಡಿರುವುದರಿಂದ ಸುಮಾರು 120 ಎಕರೆ ಹಡೀಲು ಗದ್ದೆಯಲ್ಲಿ ಬೇಸಾಯವಾಗಿದೆ. ಮುಂದಿನ ಫೆಬ್ರವರಿಯಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ದೊಡ್ಡ ಮಟ್ಟದ ರೈತ ಮೇಳ ಆಯೋಜಿಸುವ ಯೋಜನೆಯಿದೆ. ಇದರಲ್ಲಿ ತಾಲೂಕಿನ ಎಲ್ಲಾ ರೈತರು ಭಾಗವಹಿಸಬೇಕು ಎಂದರು. ಕೃಷಿಕರಿಗಾಗಿ ಸರಕಾರ ಕೃಷಿಕ ಸಮಾಜವನ್ನು ಸ್ಥಾಪಿಸಿದೆ. ಕೃಷಿಕ ಸಮಾಜಕ್ಕೆ ಜಮೀನು ಮಂಜೂರಾಗಿದ್ದು ಅದರಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ರೈತರಿಗಾಗಿ ತಾಲೂಕು ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು ರೈತರಿಗಾಗಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಳಾಗುವುದು ಎಂದು ಹೇಳಿದರು.
ಸನ್ಮಾನ:
ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ, ಭತ್ತದ ಕೃಷಿ ಹಾಗೂ ನಾಟಿ ವೈದ್ಯ ಜಾನಕಿ ನೂಜಿಬಾಳ್ತಿಲ, ತರಕಾರಿ ಕೃಷಿಕ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗೌಡ ವಳಗುಡ್ಡೆ, ಭತ್ತದ ಕೃಷಿಕೆ ರೇವತಿ ಬಲ್ನಾಡುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ತೋಟಗಾರಿಕಾ ಇಲಾಖೆಯ ಶಿವಪ್ರಕಾಶ್ ಹಾಗೂ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬಂದಿ ಪ್ರವೀಣಾ ಪ್ರಾರ್ಥಿಸಿದರು. ಕೃಷಿಕ ಸಮಾಜದ ಸದಸ್ಯ ಮೂಲಚಂದ್ರ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಯಶಸ್ ಮಂಜುನಾಥ ವಂದಿಸಿದರು. ಸಿಬಂದಿ ವಂದನಾ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು. ಕೃಷಿಕ ಸಮಾಜದ ಸದಸ್ಯರಾದ ದೇವಣ್ಣ ರೈ, ಬಾಲಕೃಷ್ಣ ಗೌಡ ಕಳಮೆಮಜಲು, ಸುಕುಮಾರ್, ದಿವ್ಯಪ್ರಸಾದ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು.
ಮಾಹಿತಿ ಕಾರ್ಯಾಗಾರ:
ರೈತ ದಿನಾಚರಣೆ ಕಾರ್ಯಕ್ರಮದ ಪ್ರಾರಂಭದಲ್ಲಿ ರೈತರಗಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ಪ್ರಗತಿಪರ ಜೇನು ಕೃಷಿಕ ರಾಧಾಕೃಷ್ಣ ಕೋಡಿ ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಶಿವಪ್ರಕಾಶ್ ತೋಟಗಾರಿಕಾ ಬೆಳೆಗಳ ಮಾಹಿತಿ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.