ಕೊಂಬೆಟ್ಟಿನಲ್ಲಿ ಸ.ಪ.ಪೂ ಕಾಲೇಜಿನಲ್ಲಿ ಪಾರಂಪರಿಕ ಕಟ್ಟಡ ನಿರ್ಮಾಣದ ಭರವಸೆ:ಕಾಲೇಜು ವಾರ್ಷಿಕೋತ್ಸವದಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ದೆವಸ್ಥಾನಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೆ ಮಹತ್ವ ವಿದ್ಯಾದೇಗುಲಕ್ಕಿದೆ. ಈ ನಿಟ್ಟಿನಲ್ಲಿ ವಿದ್ಯಾದೇಗುಲಕ್ಕೂ ಅನುದಾನ ನೀಡಿದೆ. ಕಳೆದ 4 ವರ್ಷಗಳಲ್ಲಿ ಕೇವಲ ಕಾಲೇಜುಗಳಿಗೆ ರೂ. 55 ಕೋಟಿ ಅನುದಾನ ವಿನಿಯೋಗಿಸಲಾಗಿದ್ದು, ಮುಂದೆ ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಕೊಂಬೆಟ್ಟಿನಲ್ಲಿ ಪಾರಂಪರಿಕ ಕಟ್ಟಡ ನಿರ್ಮಾಣ ಮಾಡುವುದಾಗಿ ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದರು.


ಕೊಂಬೆಟ್ಟು ಸ.ಪ.ಪೂ ಕಾಲೇಜಿನಲ್ಲಿ ಡಿ.24 ರಂದು ನಡೆದ ವಾರ್ಷಿಕೋತ್ಸವದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ನೂತನ ಶೌಚಾಲಯವನ್ನು ಅವರು ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಶಿಷ್ಯರು ಒಂದಾಗಿದ್ದಾಗ ಇತಿಹಾಸ ನಿರ್ಮಾಣ ಆಗುತ್ತದೆ. ಅದು ಕೊಂಬೆಟ್ಟಿನಲ್ಲಿ ಮಾಡಿ ತೋರಿಸಿದ್ದಾರೆ. ಅದೇ ರೀತಿ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಸಾಧಕರಾಗಬೇಕು. ಮನೆಯ ಸೌಲಭ್ಯ ಹೆಚ್ಚಿದಂತೆ ಶಾಲಾ ಸೌಲಭ್ಯಗಳ ಬೇಡಿಕೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಅದಕ್ಕೂ ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಕಲಿತವರು ಸಂಸ್ಕಾರವಂತರಾಗುತ್ತಾರೆ ಎಂದ ಅವರು ಈಗಾಗಲೇ ರೂ. 55 ಕೋಟಿ ಕಾಲೇಜುಗಳಿಗೆ, ರೂ. 25 ಕೋಟಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ, ರೂ. 3  ಕೋಟಿ ಅಂಗನವಾಡಿಗಳಿಗೆ, ರೂ. 6 ಕೋಟಿ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ವಿನಿಯೋಗಿಸಲಾಗಿದೆ. ಮುಂದೆ ನಿಮ್ಮ ಅಶೀರ್ವಾದ ಇದ್ದರೆ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಾರಂಪರಿಕ ಕಟ್ಟಡ ಕಟ್ಟುವ ಭರವಸೆ ನೀಡಿದ ಅವರು ಕೆಪಿಎಸ್ ಸ್ಕೂಲ್ ಇಲ್ಲಿಗೂ ತರುವ ಚಿಂತನೆ ವ್ಯಕ್ತಪಡಿಸಿದರು.


ರಜಾ ಅವಧಿಯಲ್ಲಿ ಕಾಲೇಜು ವಿಭಾಗದ ಜೀರ್ಣೋದ್ಧಾರ:
ಕೊಂಬೆಟ್ಟು ಸರಕಾರ ಪದವಿ ಪೂರ್ವ ಕಾಲೇಜಿನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷರಾಗಿರುವ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ 106 ವರ್ಷದ ಇತಿಹಾಸವುಳ್ಳ ಪಾರಂಪರಿಕ ಕಟ್ಟಡ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಸಂಜೀವ ಮಠಂದೂರು ಅವರು ಶಾಸಕರಾದ ಬಳಿಕ ಸಂಸ್ಥೆಗೆ ಅಚ್ಚೇದಿನ್ ಬಂದಿದೆ. ಹೈಸ್ಕೂಲ್ ಮತ್ತು ಕಾಲೇಜಿಗೆ ರೂ. 2 ಕೋಟಿ ಅನುದಾನ ಬಂದಿದೆ. ರೂ. 16.5 ಲಕ್ಷದಲ್ಲಿ ಶಾಲೆಯ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಮುಂದೆ ರೂ. 30 ಲಕ್ಷ ವೆಚ್ಚದಲ್ಲಿ ಮೈದಾನಕ್ಕೆ ಶೀಟ್ ಹಾಕುವ ಮತ್ತು ನೆಲಹಾಸು ಹಾಕುವ ವಿಚಾರವನ್ನು ಶಾಸಕರ ಮುಂದಿಟ್ಟ ಅವರು ಈಗಾಗಲೇ ಪ್ರೌಢಶಾಲಾ ವಿಭಾಗದಲ್ಲಿ ಜೀರ್ಣೋದ್ಧಾರ ಕಾರ್ಯ ಮುಗಿದಿದೆ. ಮುಂದೆ ಕಾಲೇಜು ವಿಭಾಗದಲ್ಲೂ ಜೀರ್ಣೋದ್ಧಾರ ಕಾರ್ಯ ಮಾಡಲಿದ್ದೇವೆ ಎಂದರು. ಸಂಸ್ಥೆಯ ಪ್ರಾಂಶುಪಾಲ ಧರಣಪ್ಪ ಗೌಡ ವಾರ್ಷಿಕ ವರದಿ ವಾಚಿಸಿದರು.

ಗೌರವ:
ಶಾಲೆಗೆ ಶುದ್ದನೀರಿನ ಆಕ್ವಗಾರ್ಡ್‌ನ್ನು ಕೊಡುಗೆಯಾಗಿ ನೀಡಿದ ಶಿಕ್ಷಕ ಕೋಟಿಯಪ್ಪ ಪೂಜಾರಿ, ವಿವಿಧ ಸವಲತ್ತು ನೀಡಿದ ದಾನಿ ಸ್ನೇಹ ಟೆಕ್ಸ್‌ಟೈಲ್ಸ್‌ನ ಮಾಲಕ ಸತೀಶ್, ಶಾಲೆಗೆ ಕಂಪ್ಯೂಟರ್ ಮತ್ತು ಕ್ರೀಡೋತ್ಸವಕ್ಕೆ ಸಹಕರಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಅಧ್ಯಕ್ಷ ಪ್ರಶಾಂತ್ ನಾಯಕ್, ಗಿರಿಧರ ಎಂಟರ್‌ಪ್ರೈಸಸ್‌ನ ಮಾಲಕ ಗಿರಿಧರ್ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು. ಇದೇ ಸಂದರ್ಭದಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕೀಡಾಕೂಟದ ಬಹುಮಾನ ವಿತರಣೆ ಮಾಡಲಾಯಿತು.

ಉಪನ್ಯಾಕರಾದ ಈಶ್ಚರ ಭಟ್, ಉಮಾಮಹೇಶ್ವರ, ಮನಮೋಹನ, ಜಯಪ್ರಕಾಶ್ ಅತಿಥಿಗಳನ್ನು ಗೌರವಿಸಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಉಪ ಪ್ರಾಂಶುಪಾಲ ವಸಂತ ಮೂಲ್ಯ ಪಿ ವಂದಿಸಿದರು. ಉಪನ್ಯಾಸಕರಾದ ಕಾತ್ಯಾಯಿನಿ, ಉಮಾಮಹೇಶ್ವರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here