ಪುತ್ತೂರು: ಎರಡು ಸಾವಿರ ವರ್ಷದ ಹಿಂದೆ ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತರ ಜನನ ಸಾರುವ ಈ ಕ್ರಿಸ್ಮಸ್ ಹಬ್ಬವು ಕ್ರೈಸ್ತ ಬಾಂಧವರಿಗೆ ಸಂಭ್ರಮವನ್ನು ಆಚರಿಸಲು ಮುಖ್ಯ ವೇದಿಕೆಯಾಗಿದೆ. ನಿಜ ಜೀವನದಲ್ಲಿ ಯೇಸುಕ್ರಿಸ್ತರನ್ನು ಅರಸಿಕೊಂಡು ಹೋಗುವುದು ಮಾತ್ರವಲ್ಲದೆ ಅವರ ಆದರ್ಶಗಳನ್ನು ಕೂಡ ನಾವು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಹೋಗಬೇಕಾಗುತ್ತದೆ. ಸಹಾಯಹಸ್ತ ಚಾಚಿಕೊಂಡು ಬಂದವರಿಗೆ ಯಾರು ಸಹಾಯಹಸ್ತ ನೀಡಲು ಮುಂದೆ ಬರುತ್ತಾರೋ ಅವರೇ ಯೇಸುಕ್ರಿಸ್ತರ ನಿಜವಾದ ಭಕ್ತ ಆಗಿರುತ್ತಾನೆ ಮಾತ್ರವಲ್ಲದೆ ಕ್ರಿಸ್ಮಸ್ ಹಬ್ಬಕ್ಕೂ ಅರ್ಥ ಬರುತ್ತದೆ ಎಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಉಪಾಧ್ಯಕ್ಷರಾಗಿರುವ ವಂ|ಮ್ಯಾಕ್ಸಿಂ ನೊರೋನ್ಹಾರವರರು ಹೇಳಿದರು.
ನಾಡಿನೆಲ್ಲೆಡೆ ಕ್ರೈಸ್ತ ಬಾಂಧವರು ದ.೨೫ರಂದು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಆಯಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ದಿವ್ಯ ಬಲಿಪೂಜೆಗಳು ನಡೆಯಿತು. ಅದರಂತೆ ಬೆಳ್ಳಾರೆ ಚರ್ಚ್‌ನಲ್ಲಿ ಅವರು ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಬೈಬಲಿನ ಮೇಲೆ ಅವರು ಸಂದೇಶವನ್ನು ನುಡಿದರು. ಯೇಸುಕ್ರಿಸ್ತರು ಮಾನವನಾಗಿ ಜನಿಸುವ ಮೂಲಕ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದಾರೆ. ಕ್ರಿಸ್ಮಸ್ ಹಬ್ಬ ಏನೆಂದರೆ ದೇವರು ಮನುಷ್ಯನಾಗಿ ಮಾನವನ ಮಧ್ಯೆ ಜೀವಿಸುವುದಾಗಿದೆ. ಆದರೆ ಮನುಷ್ಯ ದೇವರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ ತನ್ನದೇ ಸ್ವಾರ್ಥದ ಮೂಲಕ ಮತ್ತು ತಪ್ಪು ಸಂಸ್ಕೃತಿ-ಸಂಸ್ಕಾರದ ಆರಾಧನೆಯನ್ನು ಮಾಡುವುದರಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದೇವರನ್ನು ಯಾವಾಗ ನಾವು ನಿಸ್ವಾರ್ಥತೆಯ ಮನೋಭಾವದ ಮೂಲಕ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ಸ್ವತಂತ್ರವಿರುವುದಿಲ್ಲ ಎಂದ ಅವರು ಯೇಸುಕ್ರಿಸ್ತರ ಜನನದ ಸಂದೇಶದಲ್ಲಿ ಏಕತೆಯಿದೆ. ಅವರು ಶಾಂತಿ, ಪ್ರೀತಿ, ಸೌಹಾರ್ದತೆ ಹಾಗೂ ಮಾನವೀಯತೆಯ ಸಾಕಾರಮೂರ್ತಿಯಾಗಿದ್ದಾರೆ. ಅಂಧಕಾರದಿಂದ ಬೆಳಕಿನೆಡೆಗೆ ನಮ್ಮ ಜೀವನ ಸಾಗಬೇಕು ಜೊತೆಗೆ ಮಾನವೀಯತೆಯ ಮನುಷ್ಯತ್ವದೆಡೆಗೆ ಕ್ರೈಸ್ತ ಬಾಂಧವರು ತಮ್ಮ ಜೀವನವನ್ನು ಸಾಗಿಸುವುದೇ ಕ್ರಿಸ್ಮಸ್ ಹಬ್ಬದ ಸಾರವಾಗಿದೆ ಎಂದು ಅವರು ಹೇಳಿದರು. ಪ್ರಧಾನ ಧರ್ಮಗುರು ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ಮಾಯಿದೆ ದೇವುಸ್ ಚರ್ಚ್:
ಮಾನವನ ಪಾಪ ಪರಿಹಾರಕ್ಕೋಸ್ಕರ ಯೇಸುಕ್ರಿಸ್ತರು ಮಾನವನ ರೂಪದಲ್ಲಿ ಗೋದಲಿಯಲ್ಲಿ ಜನಿಸಿದ್ದಾರೆ. ಯೇಸುಕ್ರಿಸ್ತರನ್ನು ನಮ್ಮ ಹೃದಯದಲ್ಲಿ ನೆಲೆಗೊಂಡಾಗ ನಮಗೆ ಆಶೀರ್ವಾದ, ಸಮಾಧಾನ ಲಭಿಸುತ್ತದೆ. ಜೊತೆಗೆ ಕ್ರಿಸ್ಮಸ್ ಹಬ್ಬವು ಲೋಕಕ್ಕೆ ಶಾಂತಿ, ಪ್ರೀತಿ, ಸೌಹಾರ್ದತೆ ಮತ್ತು ಮಾನವೀಯತೆಯನ್ನು ಸಾರುವ ಸಂಕೇತವೆನಿಸಿದೆ ಎಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಹೇಳಿದರು.
ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಅವರು ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಬೈಬಲಿನ ಮೇಲೆ ಅವರು ಸಂದೇಶವನ್ನು ನುಡಿದರು. ಪ್ರಭು ಯೇಸುಕ್ರಿಸ್ತರು ಸತ್ಯದ, ವಿಶ್ವಾಸದ, ಮಾನವತೆಯನ್ನು ಜ್ಞಾಪಿಸಿದ ಶಕ್ತಿಯಾಗಿದ್ದಾರೆ. ದೇವರು ಪ್ರತಿಯೊಂದು ಸಂದರ್ಭದಲ್ಲೂ ನಮ್ಮೊಡನೆ ಇದ್ದಾನೆ ಮತ್ತು ಆತ ನಮ್ಮನ್ನು ಕಷ್ಟಗಳಿಂದ ಪರಿಹಾರ ಕೊಡಿಸುತ್ತಾನೆ ಎಂಬ ನಂಬಿಕೆ ನಮ್ಮದಾಗಿದೆ. ದೇವರು ನಮ್ಮ ಹೃದಯದಲ್ಲಿ ನೆಲೆ ನಿಂತಾಗ ನಮಗೆ ವೈರಿಗಳು ಯಾರೂ ಇರುವುದಿಲ್ಲ. ಭೂಮಿಯಲ್ಲಿ ಜೀವಿಸುವ ಮನುಷ್ಯನು ಸಮಾಜದಲ್ಲಿ ಉತ್ತಮ ಕೈಂಕರ್ಯವನ್ನು ಮಾಡಿದಾಗ ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂದ ಅವರು ಮಾನವನ ಪಾಪವು ಯೇಸುಕ್ರಿಸ್ತರ ಜನನದ ಮೂಲಕ ಸಂಪೂರ್ಣವಾಗುತ್ತದೆ. ಆದರೆ ಯೇಸುಕ್ರಿಸ್ತರು ತನ್ನ ಜೀವಿತಾವಧಿಯಲ್ಲಿ ತೋರಿಸಿದ ದಯೆ, ಪ್ರೀತಿ ಮತ್ತು ಕರುಣೆಯ ಜೀವನವನ್ನು ಮಾನವ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಗತ್ತಿನೆಲ್ಲೆಡೆ ಮಾನವೀಯತೆಯ ಪ್ರೀತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಧರ್ಮಗುರುಗಳಾದ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಮರೀಲ್ ಚರ್ಚ್:
ಯೇಸುಕ್ರಿಸ್ತರು ಮಾನವನಾಗಿ ಜನಿಸುವ ಮೂಲಕ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದಾರೆ. ಮಾನವನ ಪಾಪವು ಯೇಸುಕ್ರಿಸ್ತರ ಜನನದ ಮೂಲಕ ಸಂಪೂರ್ಣವಾಗುತ್ತದೆ. ಆದರೆ ಯೇಸುಕ್ರಿಸ್ತರು ತನ್ನ ಜೀವಿತಾವಧಿಯಲ್ಲಿ ತೋರಿಸಿದ ದಯೆ, ಪ್ರೀತಿ ಮತ್ತು ಕರುಣೆಯ ಜೀವನವನ್ನು ಮಾನವ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಗತ್ತಿನೆಲ್ಲೆಡೆ ಮಾನವೀಯತೆಯ ಪ್ರೀತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಕಪುಚಿನ್ ಧರ್ಮಗುರು ವಂ|ಜೀವನ್ ಡಿ’ಮೆಲ್ಲೋರವರು ಸಂದೇಶ ನುಡಿದರು. ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರು ಪ್ರಧಾನ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದರು.
ಬನ್ನೂರು ಚರ್ಚ್:
ಮನುಷ್ಯನಿಗೆ ನಿಸ್ವಾರ್ಥಿ ಮಾನವನಾಗಿ ಜೀವಿಸಲು ಯೇಸುಕ್ರಿಸ್ತರು ಧರೆಗೆ ಬಂದಿರುವುದಾಗಿದೆ. ಯೇಸುಕ್ರಿಸ್ತರು ಗೋದಲಿಯಲ್ಲಿ ಹುಟ್ಟಿ ಬಡತನ ಏನೆಂಬುದನ್ನು ತೋರಿಸಿಕೊಟ್ಟವರು. ಮನುಷ್ಯನ ಮಧ್ಯೆ ಶಾಂತಿ-ಸಮಾಧಾನದ ಬೆಸುಗೆಯನ್ನು ಹೊಂದಿಸಲು ಯೇಸುಕ್ರಿಸ್ತರು ಬಂದಿರುತ್ತಾರೆ. ನಾವು ನಮ್ಮ ಸ್ವಾರ್ಥವನ್ನು ಬಿಡಬೇಕು, ನಾವೇ ಶ್ರೇಷ್ಟರು ಎಂಬ ಅಹಂಕಾರವನ್ನು ತೊಳೆದು ಹಾಕಬೇಕು. ನಾವು ಯೋಚನೆ ಮಾಡುವ ಪ್ರತಿಯೊಂದು ಚಿಂತನೆಯು, ನಾವು ಆಡುವ ಪ್ರತಿಯೊಂದು ಶಬ್ದವು, ನಾವು ತೋರಿಸುವ ನಡವಳಿಕೆಯು ಉತ್ತಮವಾಗಿದ್ದಲ್ಲಿ ದೇವರು ಖಂಡಿತಾ ಆಶೀರ್ವದಿಸುತ್ತಾನೆ. ಪ್ರಭು ಯೇಸುಕ್ರಿಸ್ತರ ಗುಣಗಳನ್ನು, ಅವರ ಆದರ್ಶಗಳನ್ನು ಯುವಸಮುದಾಯದ ಮನಸ್ಸಿನಲ್ಲಿ ಭಿತ್ತಬೇಕಾಗಿದೆ ಎಂದು ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು ಸಂದೇಶ ನುಡಿದರು. ಕಾರ್ಮೆಲಿತ್ ಸಂಸ್ಥೆಯ ಧರ್ಮಗುರು ವಂ|ಪ್ರಕಾಶ್ ರೆಬೆಲ್ಲೋ ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು.
ನಾವೆಲ್ಲಾ ದೇವರ ಮಕ್ಕಳು. ವಿವಿಧ ಧರ್ಮದವರು ಜೀವಿಸುವ ಈ ಸಮಾಜದಲ್ಲಿ ನಾವು ಜೀವಿಸುವಾಗ ಪರಸ್ಪರ ಅನ್ಯೋನ್ಯತೆಯಿಂದ ಹಾಗೂ ಗೌರವದ ಭಾವನೆಯಿಂದ ಜೀವಿಸುವುದು ಬಹಳ ಮುಖ್ಯ. ಯೇಸುಕ್ತಿಸ್ತರು ಭೂಲೋಕಕ್ಕೆ ಬಂದದ್ದು ಭೂಲೋಕದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು. ನಾವೆಲ್ಲರೂ ಶಾಂತಿ, ಸೌಹಾರ್ದತೆಯಿಂದ ಸಮಾಧಾನ ಚಿತ್ತರಾಗಿ ನಮ್ಮಲ್ಲಿನ ವೈವಿಧ್ಯತೆಗಳನ್ನು ಮರೆತು ಒಗ್ಗಟ್ಟಿನಿಂದ ಬದುಕಬೇಕೇಂಬುದು ಕ್ರಿಸ್ಮಸ್ ಹಬ್ಬ ನಮಗೆ ಸಂದೇಶ ನೀಡುತ್ತದೆ. ಹಬ್ಬಗಳು ಎಂದಿಗೂ ಹೊರಗಿನ ಆಡಂಬರದ ಹಬ್ಬವಾಗದೆ ಪ್ರತಿಯೊಬ್ಬನ ಆತ್ಮೀಕ ಜೀವನದಲ್ಲಿ ದೇವರನ್ನು ನಿಸ್ವಾರ್ಥ ಮನೋಭಾವನೆಯಿಂದ ಸ್ವೀಕರಿಸುವ ಮೂಲಕ ಯೇಸುಕ್ರಿಸ್ತರ ಜನನ ಮನುಷ್ಯತ್ವಕ್ಕೆ ಪ್ರೇರಣೆಯಾಗಲಿ. ದೇವರನ್ನು ನಾವು ಎಲ್ಲೆಡೆ ಹುಡುಕಿಕೊಂಡು ಹೋಗಬೇಕಾಗಿಲ್ಲ. ಅವರು ನಮ್ಮೊಡನೆ ಯಾವಾಗಲೂ ಮನುಷ್ಯ ರೂಪದಲ್ಲಿ ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ ಎಂದು ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ನಿರ್ದೇಶಕ ವಂ|ಆಲ್ವಿನ್ ಡಿ’ಸೋಜರವರು ಸಂದೇಶ ನುಡಿದರು. ಚರ್ಚ್ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ಆಯಾ ಚರ್ಚ್‌ಗಳ ಪಾಲನಾ ಸಮಿತಿಯ ಉಪಾಧ್ಯಕ್ಷರು,ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ, ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು, ವೇದಿ ಸೇವಕರು, ಸ್ಯಾಕ್ರಿಸ್ಟಿಯನ್, ಗಾಯನ ಮಂಡಳಿ, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕ್ರೈಸ್ತ ಭಕ್ತಾಧಿಗಳೊಂದಿಗೆ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಕೇಕ್..
-ಹಬ್ಬದ ಪ್ರಯುಕ್ತ ಕ್ರೈಸ್ತ ಬಾಂಧವರು ಸಿಹಿಯ ಪ್ರತೀಕವಾದ ಕೇಕ್ ಹಂಚಿ ಸಂಭ್ರಮದೊಂದಿಗೆ, ಒಬ್ಬರನ್ನೊಬ್ಬರು ಹಸ್ತಲಾಘವ, ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಂಡರು.
ಕ್ಯಾರಲ್ಸ್..
-ದಿವ್ಯ ಬಲಿಪೂಜೆ ಆರಂಭಕ್ಕಿಂತ ಮುನ್ನ ಆಯಾ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಭಕ್ತಿಗೀತೆ (ಕ್ಯಾರಲ್ಸ್) ಹಾಡುವ ಸಂಪ್ರದಾಯ ಮೊದಲ್ಗೊಂಡಿತು. ದಿವ್ಯ ಬಲಿಪೂಜೆ ಬಳಿಕ ಕ್ರೈಸ್ತಬಾಂಧವರು ಚರ್ಚ್‌ನಲ್ಲಿ ನಿರ್ಮಿಸಿರುವಂತಹ ಯೇಸುಕ್ರಿಸ್ತರ ಜನನ ಸಾರುವ ಗೋದಲಿಯನ್ನು ವೀಕ್ಷಿಸಿ ಸಂಭ್ರಮಪಟ್ಟರು.
ಗೋದಲಿ..
-ಕ್ರಿಸ್ಮಸ್ ಹಬ್ಬದ ಬಲಿಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸುಕ್ರಿಸ್ತರ ಜನನವನ್ನು ಸ್ವಾಗತಿಸಿದರು.
ಸಾಂತಾಕ್ಲಾಸ್..
-ಕ್ರಿಸ್ಮಸ್ ಹಬ್ಬದಂದು ಸಾಂತಾಕ್ಲಾಸ್ ಎಂಬ ಹೆಸರಿನ ಮೂಲಕ ಅವರ ವೇಷವನ್ನು ತೊಟ್ಟು ಮನೆ ಮನೆಗೆ ಹೋಗಿ ಉಡುಗೊರೆಗಳನ್ನು ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಲಾಗುತ್ತದೆ.
ನಕ್ಷತ್ರಗಳು..
-ಚರ್ಚ್‌ಗಳು ವರ್ಣಮಯ ದೀಪಗಳಿಂದ ಅಲಂಕೃತಗೊಂಡರೆ, ಅಲ್ಲಲ್ಲಿ ನೇತಾಡಿಸಿದ್ದ ವಿವಿಧ ಆಕಾರದ ಕ್ರಿಸ್ಮಸ್ ನಕ್ಷತ್ರಗಳು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಮನರಂಜನೆ..
-ಆಯಾ ಚರ್ಚ್‌ಗಳ ಆವರಣದಲ್ಲಿ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.