ಕಾರವಾರ: ದುಡ್ಡೇ ದೊಡ್ಡಪ್ಪ ಅನ್ನುವವರಿಗೆ ನಮ್ಮಲ್ಲೇನು ಕೊರತೆ ಇಲ್ಲ ಕೆಲವರು ಕಠಿಣ ಪರಿಶ್ರಮದಿಂದ ದುಡಿದು ಹಣಗಳಿಸಿದರೆ ಅಥವಾ ಸಂಪಾದಿಸಿದರೆ ಇನ್ನೂ ಕೆಲವರು ದಿಡೀರ್ ಶ್ರೀಮಂತಿಕೆಯ ಕನಸು ಕಟ್ಟಿ ಹಣಕ್ಕಾಗಿ ಏನೇನೊ ಮಾಡುತ್ತಾರೆ. ಹೀಗೆಯೇ ಫಾಸ್ಟ್ ಮನಿಗಾಗಿ ನಿಧಿ ಶೋಧನೆಗೆ ಹೊರಟು ಜೈಲು ಸೇರಿದವರ ಸ್ಟೋರಿಯೊಂದು ಇಲ್ಲಿದೆ…
ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೋಳೂರು ಗ್ರಾಮದ ಸರಕಾರಿ ಅರಣ್ಯ ಪ್ರದೇಶದಲ್ಲಿ ಪ್ರತಿ ನಿತ್ಯ ಕಲ್ಲೊಂದಕ್ಕೆ ಪೂಜೆ ಮಾಡಿ ನಿಧಿಗಾಗಿ ಬಾವಿ ತೋಡುತಿದ್ದ ಕಾರವಾರ ಶಿರವಾಡ ಮೂಲದ ಹಿದಾಯತ್ ಅಬ್ದುಲ್ ಘನಿ (43) ರುಸ್ತುಮ್ ರಝಾಕ್ ಸಾಬ್ (53) ಹರ್ಷದ್ ಅಲಿ ಹೈದರ್ (21) ಸಫ್ರಝ್ ಹಬೀಬುಲ್ಲ(25) ಎಂಬವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸಿದ್ದು ಈಗ ಕಂಬಿ ಎಣಿಸುತ್ತಿದ್ದಾರೆ.
ಇವರ ಪೈಕಿ ರಝಾಕ್ ಎಂಬಾತನ ಮೈಮೇಲೆ ಶಿರಶಿಯ ಮಾರಿಕಾಂಬೆ ಬರುವುದಲ್ಲದೆ , ಕನಸಿನಲ್ಲಿಯೂ ಬಂದು ಅರಣ್ಯದ ಈ ಜಾಗದಲ್ಲಿ ಬಾವಿ ತೋಡಲು ಸೂಚಿಸಿದ್ದಳಂತೆ.ಇಲ್ಲಿ ನಾನು ನೆಲೆಸಿದ್ದೇನೆ , ನಿರ್ದಿಷ್ಟ ಆಳಕ್ಕೆ ಬಾವಿ ತೋಡಿ ಅಲ್ಲಿ ಬರುವ ನೀರನ್ನು ನನ್ನ ಮೈಮೇಲೆ ಸಿಂಪಡಿಸು ಆ ಬಳಿಕ ಇದೊಂದು ಪುಣ್ಯ ಕ್ಷೇತ್ರವಾಗುತ್ತದೆ ಎಂದು ದೇವಿ ಹೇಳಿದ್ದಳೆಂದು ಎಂದು ತನಿಕೆಯ ವೇಳೆ ಈ ಖದೀಮರು ಬಾಯ್ಬಿಟ್ಟಿದ್ದಾರೆ.
ಈ ರೀತಿಯ ಕಟ್ಟು ಕಥೆ ಹೆಣೆದು ಅಲ್ಲಿರುವ ಬಂಡೆಯೊಂದಕ್ಕೆ ಪೂಜೆ ಸಲ್ಲಿಸುತ್ತಾ ಕಳೆದ ಒಂದು ವಾರದಿಂದ ಈ ಖದೀಮರು ಸುಮಾರು 10 ರಿಂದ 20 ಅಡಿ ಆಳದ ಬಾವಿ ತೋಡಿದ್ದರು.ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ! ಪ್ರಶಾಂತ್ ಕುಮಾರ್ ಕೆ.ಸಿ ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ್ , ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಎಲ್ಲಾ ಆರೋಪಿಗಳನ್ನು ಬಂದಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಬಾವಿ ತೋಡಿದ ಹಿನ್ನೆಲೆ ಆರೋಪಿಗಳ ವಿರುದ್ದ 1963 ರ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಎಲ್ಲಾ ಆರೋಪಿಗಳು ಜೈಲು ಕಂಬಿ ಎಣಿಸುವಂತಾಗಿದೆ.