ಡಿ.28: ಕೆಮ್ಮಿಂಜೆ ದೇವಸ್ಥಾನದಲ್ಲಿ ನಾಗತನು ತರ್ಪಣೆ

0

* ಸಮಸ್ತ ನಾಗ ಸಂಕುಲದ ಸಂತೃಪ್ತಿಯ ಸೇವೆ ನಾಗತನು ತರ್ಪಣೆ

ಪುತ್ತೂರು:ನಾಗ ಸಾನಿಧ್ಯ ವೃದ್ಧಿಗಾಗಿ, ನಾಗದೋಷ, ಕಾಲಸರ್ಪ ದೋಷಗಳ ನಿವಾರಣೆ ಹಾಗೂ ನಾಗಾನುಗ್ರಹಕ್ಕಾಗಿ ನಾಗಸಂಕುಲದ ಅತಿ ಪ್ರೀಯವಾದ `ನಾಗತನು ತರ್ಪಣ ಸೇವೆ ಹಾಗೂ ನಾಗದರ್ಶನ ಸೇವೆ’ಯು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.28 ರಂದು ಸಂಜೆ ನಡೆಯಲಿದೆ.


ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರಿಂದ ನಡೆಯಲಿರುವುದು. ಬಹಳಷ್ಟು ಅಪರೂಪವಾಗಿ ನಡೆಯುವ ಈ ಕಾರ್ಯಕ್ರಮಕ್ಕಾಗಿ ದೇವಸ್ಥಾನದ ಸಮೀಪದ ಗದ್ದೆಯಲ್ಲಿ ಬೃಹದಾಕಾರದ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಸಂಜೆ 6.30 ರಿಂದ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 5000ಕ್ಕೂ ಅಧಿಕ ಮಂದಿ ಭಕ್ತರು ಸೇರುವ ನಿರೀಕ್ಷೆಯಿದೆ.

ಏನಿದು ನಾಗತನು ತರ್ಪಣೆ?
ನಾಗತನು ತರ್ಪಣ ಸೇವೆಯಲ್ಲಿ ವಿಶೇಷವಾಗಿ ಆಶ್ಲೇಷ ಬಲಿ ಪೂಜೆಗೆ ರಚಿಸಲಾಗುವ ಮಂಡಲದ ಮಾದರಿಯ ಬೃಹತ್ ಮಂಡಲವನ್ನು ರಚಿಸಲಾಗುತ್ತದೆ. ಸುಮಾರು 60 ಅಡಿ ಉದ್ದ 20 ಅಡಿ ಅಗಲದ ಹಾಗೂ 40 ಕೆಜಿಗೂ ಅಧಿಕ ಪಂಚವರ್ಣದ ಹುಡಿಯನ್ನು ಬಳಸಿ, ನುರಿತ ಋತ್ವುಜರಿಂದ ಬೃಹತ್ ಮಂಡಲವನ್ನು ರಚಿಸಲಾಗುವುದು. ಯೋಗೀಶ ಕಲ್ಲೂರಾಯ ಹಾಗೂ ವೆಂಕಟಕೃಷ್ಣ ಕಲ್ಲೂರಾಯವರು ಮಂಡಲ ರಚನೆಯ ಮುಂಚೂಣಿಯಲ್ಲಿದ್ದಾರೆ. ಸರ್ಪವನ್ನೇ ಹೋಲುವ ಈ ಬೃಹತ್ ಮಂಡಲದ ಹೊರಾವರಣದಲ್ಲಿ ನೇರಳೆಮರ ಮುಂತಾದ ಮರದ ಬಲಿಯ ಎಲೆಗಳನ್ನು ಹರಡಲಾಗುತ್ತದೆ. ಕೆಂಪು ಮತ್ತು ಹಳದಿ ವರ್ಣದ ಗೊಂಡೆ ಹೂಗಳು ಹಾಗೂ ಮಲ್ಲಿಗೆ ಹಾರಗಳಿಂದ ಸಿಂಗರಿಸಲಾಗುತ್ತದೆ.

ಅನ್ನಕ್ಕೆ ಅರಶಿಣದ ಹುಡಿ ಬೆರೆಸಿ ತಯಾರಿಸಿದ ಮೋದಕದಂತಿರುವ ಮುದ್ದೆಗಳನ್ನು ತಯಾರಿಸಿ ಮಂಡಲದ ಮೇಲ್ಭಾಗದಲ್ಲಿ ತುಪ್ಪದಲ್ಲಿ ಕರಿದ ಒಂದು ಅಪ್ಪವನ್ನಿರಿಸಿ ಮಂಡಲದ ಮಧ್ಯೆ 85ಮಂದಿ ನಾಗಗಳಿಗೂ ಒಂದೊಂದು ಮುದ್ದೆಯನ್ನು ಆಹಾರವಾಗಿ ನೀಡಲಾಗುತ್ತದೆ. ಈ ಮುದ್ದೆಗಳ ಮೇಲೆ ಉರಿಯುವ ಕೋಲುಬತ್ತಿಯನ್ನಿಡಲಾಗುತ್ತದೆ.

ಬಲಿ ಮಂಡಲದ ಒಂಭತ್ತು ಭಾಗಗಳಲ್ಲಿ ತೆಂಗಿನ ಎಳೆಯ ಗರಿಗಳಿಂದ ತಯಾರಿಸಿರುವ ಚಿಕ್ಕ ಮಂಟಪಗಳನ್ನಿರಿಸಿ ಅದರಲ್ಲಿ ಬಲಿ ಸಾಮಗ್ರಿಗಳನ್ನು ತುಂಬಿಸುತ್ತಾರೆ. ಮೇಲ್ಭಾಗದಲ್ಲಿ ಕುಂಬಳಕಾಯಿಯ ಮೇಲೆ ದೀಪ ಉರಿಸಿಡಲಾಗುತ್ತದೆ. ಬಲಿಮಂಡಲದ ಸುತ್ತಲೂ ಸಹಸ್ರಾರು ಹಣತೆಗಳಲ್ಲಿ ಉರಿಯುವ ದೀಪಗಳು ಪೂರ್ಣವಾಗಿ ಭಕ್ತಿಯ ವಾತಾವರಣದಲ್ಲಿ ಸೇರಿದವರನ್ನು ತನ್ಮಯಗೊಳಿಸುತ್ತದೆ. ನಂತರ ತಂತ್ರಿಗಳು ಪೂರ್ಣವಾಗಿ ನಾಗದೇವತೆಯನ್ನು ಆವಾಹಿಸಿಕೊಳ್ಳುತ್ತಾರೆ. ನಾಗದೇವತೆ ಆವೇಶಿತಗೊಂಡ ತಂತ್ರಿಗಳು ಕೈಯಲ್ಲಿ ಹಿಡಿದ ಜೋಡಿ ಹಿಂಗಾರವನ್ನು ಮಧುರಾಮೃತದ ಪಾತ್ರೆಯಲ್ಲಿ ಅದ್ದಿ ಹೊರಗೆಳೆದು ಧಾರಾಕಾರವಾಗಿ ಅದನ್ನು ಮಂಡಲದ ಮಧ್ಯೆ ತರ್ಪಣವಾಗಿ ನೀಡಲಾಗುತ್ತದೆ. ನೂರಾರು ಲೀಟರ್ ಪ್ರಮಾಣದ ಮಧುರಾಮೃತ ತರ್ಪಣದ ಮೂಲಕ ನದಿಯಾಗಿ ಹರಿದು ನಾಗಗಳಿಗೆ ತನು(ತಂಪು) ನೀಡಲಾಗುತ್ತದೆ.

ನಾಗಾರಾಧನೆಯ ವಿಧಿಯ ಮೂಲಕ ನಿಸರ್ಗದಲ್ಲಿರುವ ಕೋಟಿಗಟ್ಟಲೆ ಸೂಕ್ಷ್ಮ ಜೀವಿಗಳಿಗೆ ಆಹಾರ ನೀಡಿ ಸಂತೃಪ್ತಿಗೊಳಿಸುವುದು ನಾಗತನು ತರ್ಪಣ ಸೇವೆಯ ಹಿಂದಿರುವ ಉದ್ದೇಶವಾಗಿದೆ. ಸಂತಾನವಿಲ್ಲದವರು ಮತ್ತು ಮದುವೆಯಾಗವರು ನಾಗದೋಷ ನಿವಾರಣೆಗೆ ದೂರದ ಊರುಗಳಿಂದಲೂ ನಾಗತನು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲಾ ವಿಭಾಗಳಲ್ಲಿಯೂ ಸರ್ಪ ಸಂಕುಲಕ್ಕೆ ಸಂತೃಪ್ತಿಗೊಳಿಸುವುದು, ಬಿಸಿಲಿನ ತಾಪದಿಂದ ಕಂಗೆಟ್ಟ ನಾಗದೇವರಿಗೆ ತಂಪು ನೀಡಲು ನಡೆಸುವ ಧಾರ್ಮಿಕ ವಿಧಿಯೇ ಬಂಧು ನಾಗತನು ಕಾರ್ಯಕ್ರಮದ ಹಿನ್ನೆಲೆಯಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here