ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ಕಟ್ಟಡದ ಸಭಾಂಗಣ ಉದ್ಘಾಟನೆ ಮತ್ತು ಬೆಳ್ಳಿಹಬ್ಬ ಡಿ.29ರಂದು ಬೆಳಿಗ್ಗೆ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಿ.ಮಹಾಬಲ ಶೆಟ್ಟಿ, ಉಪಾಧ್ಯಕ್ಷ ವೆಂಕಪ್ಪ ನಾಯ್ಕ, ಕಾರ್ಯದರ್ಶಿ ಅನುರಾಧಾ ಹೆಚ್. ಹಾಗೂ ನಿರ್ದೇಶಕರು ಮತ್ತು ಕಡಬ ಶಿಬಿರ ಕಚೇರಿ ವಿಸ್ತರಣಾಧಿಕಾರಿ ಯಮುನಾ ಅವರು ತಿಳಿಸಿದ್ದಾರೆ.
1993ರಲ್ಲಿ ಸ್ಥಾಪನೆ:
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘವು 5-7-1993ರಂದು ದ.ಕ.ಸಹಕಾರಿ ಹಾಲು ಒಕ್ಕೂಟದ ಸಹಕಾರದೊಂದಿಗೆ ನೆಲ್ಯಾಡಿ, ಕೊಣಾಲು, ಕೌಕ್ರಾಡಿ ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಒಳಗೊಂಡಂತೆ ಸ್ಥಾಪನೆಗೊಂಡಿತು. ಎನ್.ವಿ.ವ್ಯಾಸ ನೆಕ್ಕರ್ಲ ಇದರ ಸ್ಥಾಪಕಾಧ್ಯಕ್ಷರು. ಪ್ರಾರಂಭದಲ್ಲಿ 79 ಲೀ. ಹಾಲು ಸಂಗ್ರಹ ಆಗುತಿತ್ತು. ಈಗ ದಿನವಹೀ 1600 ರಿಂದ 1700 ಲೀ.ಹಾಲು ಸಂಗ್ರಹಣೆ ಆಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸಂಘದಲ್ಲಿ ದಿನವಹೀ 2400 ಲೀ.ಹಾಲು ಸಂಗ್ರಹಣೆ ಆಗುತಿತ್ತು. 1996ರಲ್ಲಿ 10 ಸೆಂಟ್ಸ್ ಸ್ವಂತ ನಿವೇಶನವನ್ನು ಪಡೆದು 1.75 ಲಕ್ಷ ರೂ.ವೆಚ್ಚದಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. 2003ರಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡಲಾಯಿತು. ಸತತ 14 ವರ್ಷ ಎನ್.ವಿ.ವ್ಯಾಸರವರು ಸಂಘವನ್ನು ಮುನ್ನಡೆಸಿದರು. 2007-08ನೇ ಸಾಲಿನಲ್ಲಿ ಡಿ.ಮಹಾಬಲ ಶೆಟ್ಟಿಯವರು ಅಧ್ಯಕ್ಷರಾಗಿ, 2009-10ರಲ್ಲಿ ಹರಿಪ್ರಸಾದ್ರವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆ ನಂತರದ ವರ್ಷ ಡಿ.ಮಹಾಬಲ ಶೆಟ್ಟಿಯವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ 3 ಸಾವಿರ ಲೀ.ಸಾಮರ್ಥ್ಯದ ಶೀತಲೀಕರಣ ಘಟಕ ಅಳವಡಿಸಿಕೊಳ್ಳಲಾಯಿತು. ಕಳೆದ ಜುಲೈ ತಿಂಗಳಿನಲ್ಲಿ 5 ಸಾವಿರ ಲೀ.ಸಾಮರ್ಥ್ಯದ ಶೀತಲೀಕರಣ ಅಳವಡಿಸಲಾಗಿದೆ. ಸಂಘದ ವಠಾರದಲ್ಲಿ ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ, ಸಂಘದ ಸದಸ್ಯರಿಗೆ ಹಾಸನ ಪಶು ಆಹಾರ ಘಟಕ, ಕುಶಾಲನಗರ ಜಾನುವಾರು ಸಂವರ್ಧನ ಕೇಂದ್ರ, ಮೈಸೂರು ಆಲನಹಳ್ಳಿಯ ಕೆಎಂಎಫ್ ತರಬೇತಿ ಕೇಂದ್ರಕ್ಕೆ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು. ಸಂಘವು ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ಈ ಸಂದರ್ಭದಲ್ಲಿ ವಿಸ್ತೃತ ಕಟ್ಟಡದ ಸಭಾಂಗಣವೂ ನಿರ್ಮಾಣಗೊಳಿಸಲಾಗಿದೆ.
ಉದ್ಘಾಟನೆ:
ದ.ಕ.ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿಯವರು ವಿಸ್ತೃತ ಕಟ್ಟಡದ ಸಭಾಂಗಣ ಉದ್ಘಾಟಿಸಲಿದ್ದಾರೆ. ದ.ಕ.ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ನಿರ್ದೇಶಕರಾದ ನಿರಂಜನ್ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್ ಕೆ., ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ಬಿಎಂಸಿ ಉಪವ್ಯವಸ್ಥಾಪಕ ಡಾ.ಕೇಶವ ಸುಳಿ, ಕಡಬ ಶಿಬಿರ ಕಚೇರಿ ಪಶುವೈದ್ಯಾಧಿಕಾರಿ ಡಾ.ಸಚಿನ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಸ್ಥಾಪಕಾಧ್ಯಕ್ಷ ಎನ್.ವಿ.ವ್ಯಾಸ ನೆಕ್ಕರ್ಲ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.