ಕುಡಿಪಾಡಿ ಶಾಲಾ ಮಕ್ಕಳಿಗೆ `ಪ್ರೇರಣಾ’ ಉಚಿತ ಶೈಕ್ಷಣಿಕ ಪ್ರವಾಸ

0

ರೂ.1.34 ಲಕ್ಷ ವೆಚ್ಚ | 4ನೇ ವರ್ಷ ಪ್ರವಾಸ | ದಾನಿಗಳಿಂದ ನೆರವು

ಪುತ್ತೂರು: ಸರಕಾರಿ ಶಾಲೆಯ ಎಲ್ಲಾ 115  ಮಕ್ಕಳಿಗೆ ಉಚಿತ ಶೈಕ್ಷಣಿಕ ಪ್ರವಾಸ, ಶೈಕ್ಷಣಿಕ ಪ್ರವಾಸಕ್ಕೆ ವ್ಯಯಿಸಬೇಕಾದ ಅಂದಾಜು ಮೊತ್ತ ರೂ.1.34 ಲಕ್ಷ. ಇಷ್ಟೆಲ್ಲಾ ಹಣವನ್ನು ಶಿಕ್ಷಣ ಇಲಾಖೆಯು ವ್ಯಯಿಸುತ್ತಿಲ್ಲ ಅಥವಾ ಮಕ್ಕಳ ಪಾಲಕರು ವ್ಯಯಿಸುತ್ತಿಲ್ಲ. ಸರಕಾರಿ ಶಾಲೆಯ ಮಕ್ಕಳ ಆರ್ಥಿಕತೆಯನ್ನು ಗಮನಿಸಿ ಮತ್ತು ಯಾವುದೇ ಬೇಧ-ಭಾವವಿಲ್ಲದೆ ಎಲ್ಲಾ ಮಕ್ಕಳು ಶೈಕ್ಷಣಿಕ ಪ್ರವಾಸದ ರೋಚಕ ಕ್ಷಣಗಳನ್ನು ಅನುಭವಿಸಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಯ ಶಿಕ್ಷಕ ವೃಂದ, ಈ ಬಗ್ಗೆ ದಾನಿಗಳೊಂದಿಗೆ ಚರ್ಚಿಸಿ ದಾನಿಗಳ ಧನಾತ್ಮಕ ಚಿಂತನೆ ಹಾಗೂ ಪ್ರೋತ್ಸಾಹದಿಂದ ದಾನಿಗಳಿಂದ ಸಂಗ್ರಹಿಸಿದ ಮೊತ್ತದಿಂದಲೇ ನಾಲ್ಕನೇ ವರ್ಷವೂ ಪ್ರೇರಣಾ ಹೆಸರಿನಲ್ಲಿ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಂಡದ್ದು ಸಾರ್ವಜನಿಕ ವಲಯದಲ್ಲಿ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಡಿಪಾಡಿ ಇಲ್ಲಿನ 115 ಮಕ್ಕಳಿಗೆ ದಾನಿಗಳ ಸಹಕಾರದಿಂದ ಒಂದು ದಿನದ ಉಚಿತ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗಿತ್ತು. ಒಂದರಿಂದ 4 ನೇ ತರಗತಿ ಮಕ್ಕಳಿಗೆ ಮಂಗಳೂರಿಗೆ, 5 ರಿಂದ 8ರ ತರಗತಿ ವಿದ್ಯಾರ್ಥಿಗಳಿಗೆ ಮೈಸೂರಿಗೆ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಶೈಕ್ಷಣಿಕ ಪ್ರವಾಸಕ್ಕೆ ಉತ್ಸಾಹದಿಂದ ಹೊರಟು ನಿಂತ ಮಕ್ಕಳನ್ನು ಮಕ್ಕಳ ಹೆತ್ತವರು ಆನಂದಭಾಷ್ಪದೊಂದಿಗೆ ಬೀಳ್ಕೊಡುವ ದೃಶ್ಯವು ಸಾರ್ವಜನಿಕರನ್ನು ಮತ್ತು ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರನ್ನು ಮತ್ತಷ್ಟು ಪುಳಕಿತರನ್ನಾಗಿ ಮಾಡಿತ್ತು.


ರೂ.1.34 ಲಕ್ಷ ವೆಚ್ಚ:
1925 ರಲ್ಲಿ ಸ್ಥಾಪನೆಯಾಗಿ ಶತಮಾನೋತ್ತರದ ಅಂಚಿನಲ್ಲಿರುವ ಕುಡಿಪಾಡಿ ಸರಕಾರಿ ಶಾಲೆಯು ಎರಡು ವರ್ಷಕ್ಕೊಮ್ಮೆ ಪ್ರತಿಭಾ ಪುರಸ್ಕಾರ ಹಾಗೂ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಶಾಲೆಯು ಹಮ್ಮಿಕೊಂಡ ಶೈಕ್ಷಣಿಕ ಪ್ರವಾಸಕ್ಕೆ ಕೆಲವೇ ಮಕ್ಕಳು ಹಾಜರಾಗುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಆಸಕ್ತಿ ಇದ್ದರೂ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿತ್ತು. ಶಾಲೆಯ ಎಲ್ಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ಬರುವಂತಾಗಬೇಕು ಮತ್ತು ಎಲ್ಲಾ ಮಕ್ಕಳಂತೆ ಆರ್ಥಿಕವಾಗಿ ಹಿಂದುಳಿದ ಮಕ್ಕಳೂ ಕೂಡ ಪ್ರವಾಸದ ಅನುಭವವನ್ನು ಇತರ ಮಕ್ಕಳೊಂದಿಗೆ ಸಂತಸದಿಂದ ಅನುಭವಿಸಬೇಕು ಎನ್ನುವ ನಿಟ್ಟಿನಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ(ಪಿ.ಟಿ) ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರ ಮುತುವರ್ಜಿಯಿಂದ ಶಾಲಾ ಶಿಕ್ಷಕರ ತಂಡ ಈ ವರ್ಷ ರೂ.1.34 ಲಕ್ಷ ಮೊತ್ತದ ದಾನಿಗಳ ಹಾಗೂ ಶಿಕ್ಷಕರ/ಪೋಷಕರ ನೆರವಿನೊಂದಿಗೆ ಶಾಲೆಯ ಎಲ್ಲಾ 115 ಮಕ್ಕಳೂ ಶೈಕ್ಷಣಿಕ ಪ್ರವಾಸದ ಆನಂದದ ಸವಿಯುಂಡಿದ್ದಾರೆ. ಶಾಲಾ ಮಕ್ಕಳು ಮಾತ್ರವಲ್ಲದೆ ಶಾಲೆಯ ೮ ಮಂದಿ ಶಿಕ್ಷಕರು ಪ್ರವಾಸದಲ್ಲಿ ಭಾಗಿಗಳಾಗಿದ್ದಾರೆ.


`ಪ್ರೇರಣೆ’ಯ ದ್ಯೋತಕವೆನಿಸಿದ ಶಾಲೆ:
ಗ್ರಾಮೀಣ ಪ್ರದೇಶವಾದ ಕುಡಿಪಾಡಿ ಶಾಲೆಯಲ್ಲಿ ಪ್ರಸಕ್ತ 115 ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡುತ್ತಿದ್ದು, ದಾನಿಗಳ ಸಹಾಯದಿಂದ ಎಲ್ಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಪ್ರವಾಸವನ್ನು 2018 ಲ್ಲಿಯೇ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನಲ್ಲಿ ಯಾವುದೇ ಶಾಲೆಯು ಮಾಡದಂತಹ ವಿನೂತನ ಕಾರ್ಯಕ್ರಮ ಇದಾಗಿದ್ದು ಈ ವಿನೂತನ ಕಾರ್ಯಕ್ರಮಕ್ಕೆ ಪ್ರಥಮ ವರ್ಷ ಸುಮಾರು ರೂ.1 ಲಕ್ಷ 25 ಸಾವಿರ ವೆಚ್ಚದಲ್ಲಿ ಪ್ರವಾಸವನ್ನು ಹಮ್ಮಿಕೊಳ್ಳುವ ಮೂಲಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರು ನಾಂದಿ ಹಾಡಿದ್ದರು. ದಾನಿಗಳ ನೆರವಿನೊಂದಿಗೆ ಸತತ ಮೂರು ವರ್ಷ ಹಮ್ಮಿಕೊಂಡ ಶಾಲಾ ಪ್ರವಾಸ ಯಶಸ್ವಿ ಕಂಡಿದ್ದು ಇದೀಗ ನಾಲ್ಕನೇ ವರ್ಷ ಮಕ್ಕಳಿಗೆ ಉಚಿತ ಪ್ರವಾಸವನ್ನು ಹಮ್ಮಿಕೊಳ್ಳುವ ಮೂಲಕ ಶಾಲೆಯು ಮಾದರಿಯೆನಿಸಿದೆ. ಇತರ ಶಾಲೆಗಳೂ ಕೂಡ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು, ತಾಲೂಕಿನ ಇತರ ಸರಕಾರಿ ಶಾಲೆಗಳಿಗೆ `ಪ್ರೇರಣೆ’ಯ ದ್ಯೋತಕವಾಗಿದೆ.


ಮೈಸೂರು ಪ್ರವಾಸದಲ್ಲಿ ನನಗೆ ತುಂಬಾ ಇಷ್ಟವಾದ ಸ್ಥಳ ಎಂದರೆ ಸ್ನೋ ಸಿಟಿ ಹಾಗೂ ಜೆಆರ್‌ಎಸ್ ಪಾರ್ಕ್. ನಾನು ಈ ಎರಡು ದಿನದ ಪ್ರವಾಸದಲ್ಲಿ ತುಂಬಾನೇ ಖುಶಿ ಪಟ್ಟೆ. ಇನ್ನೊಮ್ಮೆ ಹೋಗಬೇಕೆನಿಸುತ್ತದೆ. ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಪಿ.ಟಿ ಸ್ಟ್ಯಾನಿ ಪ್ರವೀಣ್ ಸರ್ ಹಾಗೂ ನನ್ನ ಎಲ್ಲಾ ನೆಚ್ಚಿನ ಶಿಕ್ಷಕ ವೃಂದದವರಿಗೆ ನನ್ನ ಹೃದಯಾಳದ ಧನ್ಯವಾದಗಳು. ಹಾಗೂ ಈ ಉಚಿತ ಪ್ರವಾಸಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೂ ಕೃತಜ್ಞತೆಗಳು. ಇಂತಹ ಉಚಿತ ಶೈಕ್ಷಣಿಕ ಪ್ರವಾಸವು ನನಗೆ ಮುಂದಿನ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಸಿಗಲು ಸಾಧ್ಯವಿಲ್ಲ. ಆದರೆ ನನಗೆ ಇದು ಇಲ್ಲಿನ ಕೊನೆಯ ಪ್ರವಾಸ ಎನ್ನುವುದಕ್ಕೆ ಸ್ವಲ್ಪ ಬೇಸರ ಅಷ್ಟೇ.
-ತೃಪ್ತಿ 8ನೇ ತರಗತಿ ವಿದ್ಯಾರ್ಥಿನಿ, ಕುಡಿಪಾಡಿ ಶಾಲೆ


ಹ್ಯಾಟ್ಸಪ್ ಪಿಟಿ ಸರ್. ತಮ್ಮ ಅವಿರತ ಶ್ರಮದಿಂದ ಶಾಲೆಯ ಎಲ್ಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಶೈಕ್ಷಣಿಕ ಪ್ರವಾಸದ ಸ್ಥಳಗಳ ಇಂಚಿಂಚು ಮಾಹಿತಿಗಳನ್ನು ಆಗಾಗ ನೀಡಿ, ಕ್ಲಪ್ತ ಸಮಯಕ್ಕೆ ಮಕ್ಕಳನ್ನು ಅವರವರ ಮನೆಗೆ ತಲುಪಿಸಿದ ನೀವು ನಿಜಕ್ಕೂ ಅಭಿನಂದನಾರ್ಹರು. ಏನೇ ಇರಲಿ, ನಿಮ್ಮಂತಹ ಪುಣ್ಯಾತ್ಮರನ್ನು ಶಿಕ್ಷಕರಾಗಿ ನಮ್ಮೂರಿಗೆ ದೊರೆತದ್ದು ಪುಣ್ಯ. ಭಗವಂತನು ತಮಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
-ಹಂಝ, ವಿದ್ಯಾರ್ಥಿನಿ ನಾಫಿಯಾರವರ ತಂದೆ, ಕುಡಿಪಾಡಿ ಶಾಲೆ

LEAVE A REPLY

Please enter your comment!
Please enter your name here