ನೆಲ್ಯಾಡಿ ಪುಚ್ಚೇರಿ ಶಾಲಾ ವಾರ್ಷಿಕೋತ್ಸವ’ ಪ್ರತಿಭಾ ಸಿಂಚನ-2022’

0

ನೆಲ್ಯಾಡಿ: 2002-03ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲಾ ಪ್ರಶಸ್ತಿ ಪುರಸ್ಕೃತ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ವಾರ್ಷಿಕೋತ್ಸವ ’ಪ್ರತಿಭಾ ಸಿಂಚನ-2022’ ಡಿ.28ರಂದು ರಾತ್ರಿ ಶಾಲಾ ರಂಗಮಂದಿರದಲ್ಲಿ ನಡೆಯಿತು.

ದೀಪ ಪ್ರಜ್ವಲನೆ ಮಾಡಿದ ಸೌತ್ ವೆಸ್ಟರ್ನ್ ರೈಲ್ವೆ ಬೆಂಗಳೂರು ಡಿವಿಜನ್‌ನ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಯೇಸುದಾಸ್ ಪಿ.ಟಿ.ಯವರು ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ವಾರ್ಷಿಕೋತ್ಸವ ಪೂರಕವಾಗಿದೆ. ಮಕ್ಕಳ ಶಿಕ್ಷಣದ ಜೊತೆಗೆ ಅವರಲ್ಲಿನ ಪ್ರತಿಭೆಯೂ ಬೆಳಕಿಗೆ ಬರಬೇಕು. ಮಕ್ಕಳು ಗುರಿ ಇಟ್ಟುಕೊಂಡು ಬೆಳೆಯಬೇಕು. ಇದಕ್ಕೆ ಪೋಷಕರು ಸಹಕರಿಸಬೇಕು ಎಂದು ಹೇಳಿದರು.‌

ಮುಖ್ಯ ಅತಿಥಿಯಾಗಿದ್ದ ರಾಮಕೃಷ್ಣ ಮಲ್ಲಾರ ಅವರು ಮಾತನಾಡಿ, ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ವಾರ್ಷಿಕೋತ್ಸವದ ವೇದಿಕೆಯಲ್ಲಿ ಸನ್ಮಾನಿಸಿರುವುದು ಈಗಿನ ಮಕ್ಕಳಿಗೆ ಮಾದರಿ, ಸ್ಪೂರ್ತಿಯಾಗಿದೆ. ಹಳ್ಳಿಯ ಶಾಲೆಗಳಲ್ಲಿನ ಶಿಕ್ಷಣವೇ ಶ್ರೇಷ್ಠವಾಗಿದೆ. ದೇಶದ ಭವಿಷ್ಯವೂ ಹಳ್ಳಿಗಳಲ್ಲಿಯೇ ಅಡಗಿದೆ. ನಾವು ಫಲಾಪೇಕ್ಷೆ ಇಲ್ಲದೇ ಮಾಡಿದ ಸೇವೆ, ಪುಣ್ಯದಿಂದಲೇ ನಮಗೆ ಕೀರ್ತಿ, ವರದಾನ ಬರಲಿದೆ ಎಂದರು. ಸಿಆರ್‌ಪಿ ಪ್ರಕಾಶ್ ಬಿ. ಮಾತನಾಡಿ, ನೆಲ್ಯಾಡಿ ಹಾಗೂ ಆಲಂಕಾರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಪುಚ್ಚೇರಿ ಶಾಲೆ ಅತ್ಯುತ್ತಮ ಶಾಲೆಯಾಗಿ ಮೂಡಿಬಂದಿದೆ. ಊರಿನ ಜನರ ಶ್ರಮದಿಂದ ವಾರ್ಷಿಕೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿ ಮಕ್ಕಳಿಗೆ ಸರಕಾರ ವಾರ್ಷಿಕ 1 ರಿಂದ 1.50 ಲಕ್ಷ ರೂ. ಖರ್ಚು ಮಾಡುತ್ತಿದೆ. ಸರಕಾರಿ ಶಾಲೆಯಲ್ಲಿ ಕಲಿಯುವುದೇ ಒಂದು ಭಾಗ್ಯ. ಮಕ್ಕಳಲ್ಲಿನ ಮೊಬೈಲ್ ವ್ಯಾಮೋಹ ಕಡಿಮೆಗೊಳಿಸಿ ಸಂಸ್ಕಾರ ನೀಡುವ ಕೆಲಸ ಆಗಬೇಕೆಂದು ಹೇಳಿದರು.

ನೆಲ್ಯಾಡಿ ಗ್ರಾ.ಪಂ.ಸದಸ್ಯ ಆನಂದ ಗೌಡ ಪಿಲವೂರು ಮಾತನಾಡಿ, ಖಾಸಗಿ ಶಾಲೆಗಳ ಅಬ್ಬರದ ಮಧ್ಯೆ ಇಂತಹ ವಾರ್ಷಿಕೋತ್ಸವ ಸರಕಾರಿ ಶಾಲೆಗಳಲ್ಲಿ ಪ್ರತಿವರ್ಷವೂ ನಡೆಯಬೇಕಾಗಿದೆ ಎಂದು ಹೇಳಿದ ಅವರು, ಸಚಿವ ಎಸ್.ಅಂಗಾರ ಅವರು ಇಲ್ಲಿನ ಶಾಲಾ ರಂಗಮಂದಿರಕ್ಕೆ ಕಳೆದ ವರ್ಷ 5 ಲಕ್ಷ ರೂ. ಹಾಗೂ ತಾ.ಪಂ.ನಿಂದ 1.5 ಲಕ್ಷ ರೂ.ಶಾಲಾ ಕಟ್ಟಡದ ದುರಸ್ತಿಗೆ ಅನುದಾನ ಬಂದಿದೆ. ಶಾಲಾ ಆವರಣಗೋಡೆಗೆ ನೆಲ್ಯಾಡಿ ಗ್ರಾ.ಪಂ.ನಿಂದ ಉದ್ಯೋಗಖಾತ್ರಿ ಯೋಜನೆಯಡಿ 3 ಲಕ್ಷ ರೂ.,ಅನುದಾನ ಸಿಕ್ಕಿದೆ. ಜನಪ್ರತಿನಿಧಿ ನೆಲೆಯಲ್ಲಿ ಶಾಲೆಯ ಅಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಮಾದೇರಿ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿಯನ್ ಪಿ.ಜೆ.ರವರು ಮಾತನಾಡಿ, 62 ವರ್ಷದ ಹಿಂದೆ ಸ್ಥಾಪನೆಗೊಂಡ ಪುಚ್ಚೇರಿ ಶಾಲೆಯಲ್ಲಿ ಈ ತನಕ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದಾರೆ. ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಜೊತೆ ಪೋಷಕರ ಜವಾಬ್ದಾರಿಯೂ ಇದೆ. ಶಾಲೆ ದೇಗುಲವಿದ್ದಂತೆ. ಶಾಲೆಯಲ್ಲಿ ಜಾತಿ, ಧರ್ಮವಿಲ್ಲ. ಎಲ್ಲರೂ ಸಮಾನರು. ಮಕ್ಕಳನ್ನು ಸನ್ಮಾರ್ಗದತ್ತ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಸನ್ಮಾನಿತರ ಪರವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ ಗೌಡ ಕುಡ್ತಾಜೆಯವರು ಮಾತನಾಡಿ, ಶಾಲೆಯಲ್ಲಿ ಊರಿನ ದೇವಾಲಯಕ್ಕಿಂತ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಒತ್ತು ನೀಡಿ ಮುಂದಿನ ದಿನಗಳಲ್ಲಿ ತಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಸಾಧಕರಾಗಿ ಹುಟ್ಟೂರಿನಲ್ಲಿ ಸನ್ಮಾನಿತರಾಗಬೇಕೆಂದು ಹೇಳಿದರು. ಇನ್ನೋರ್ವ ಸನ್ಮಾನಿತ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಯಾದವ ಪಿ.ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಅವರು ಶುಭಹಾರೈಸಿದರು. ಕೃಷಿಕ ರಾಮ ಭಟ್ ಎಸ್., ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಶ್ರೀಲತಾ ಸಿ.ಹೆಚ್., ಜಯಂತಿ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ ಪಿ., ಉಪಾಧ್ಯಕ್ಷ ಯಶವಂತ ಟಿ., ಶಾಲಾ ವಾರ್ಷಿಕೋತ್ಸವ ಸಮಿತಿ ಉಪಾಧ್ಯಕ್ಷ ಸೀತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ: ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲಾ ನಾಯಕಿ ಅಭಿಜ್ಞಾ ಪಿ.,ಇವರಿಗೆ ದತ್ತಿನಿಧಿ ವಿತರಣೆ, ಸಾರ್ವಜನಿಕರಿಗೆ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಹಶಿಕ್ಷಕಿ ಜಾಹ್ನವಿ ಐ., ಅತಿಥಿ ಶಿಕ್ಷಕಿಯರಾದ ರೋಹಿಣಿ, ಚಿತ್ರಾ, ಸುಕನ್ಯಾ ಕೆ.ಯು., ಗೌರವ ಶಿಕ್ಷಕಿ ತೀರ್ಥಕುಮಾರಿ ಬಹುಮಾನ ವಿಜೇತರ ಹೆಸರು ವಾಚಿಸಿದರು.

ಮುಖ್ಯಶಿಕ್ಷಕ ಪದ್ಮನಾಭ ಪಿ, ಸ್ವಾಗತಿಸಿ, ವರದಿ ವಾಚಿಸಿದರು. ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕೆ.ಎಂ.ವಂದಿಸಿದರು. ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿಯೂ ಆಗಿರುವ ಸಹಶಿಕ್ಷಕ ಪುರಂದರ ಗೌಡ ಡಿ.ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಸಹಭೋಜನ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಬಳಿಕ ಮರುದಿನ ಬೆಳಗ್ಗಿನ ತನಕ ವಿದ್ಯಾರ್ಥಿಗಳಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಾದೇರಿ ಮತ್ತು ಕೊಪ್ಪ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಸಿಂಚನ, ಶಾಲಾ ವಿದ್ಯಾರ್ಥಿಗಳಿಂದ ವಿನೂತನ ಶೈಲಿಯ ನೃತ್ಯಗಳು, ರೂಪಕ, ಪ್ರಹಸನ ಹಾಗೂ ಕಾರ್ಯಕ್ರಮ ವೈವಿಧ್ಯ ’ರಂಗ ಸಿಂಚನ’, ಶಾಲೆಯ ಹೆಮ್ಮೆಯ ಕಲಾವಿದರಿಂದ ಏಕಾದಶಿ ದೇವಿ ಮಹಾತ್ಮೆ’ ಯಕ್ಷ ಸಿಂಚನ’, ಪೂರ್ವ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಂದ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ’ ನೃತ್ಯ ತರಂಗ ವೈಭವ’ ಹಾಗೂ ಊರ ಕಲಾವಿದರಿಂದ ‘ಎದುರುಡು ತೆಲ್ಕೆ ಪಿರವುಡು ಕೊಲ್ಕೆ’ ಎಂಬ ತುಳುನಾಟ ‘ರಂಗ ನಿನಾದ’ ನಡೆಯಿತು.

ಗೌರವಾರ್ಪಣೆ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವಾರ್ಷಿಕೋತ್ಸವ ಸಮಾರಂಭದಲ್ಲಿ ಗೌರವಿಸಲಾಯಿತು. ಕಾಯರ್ತಡ್ಕದಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿರುವ ಯಾದವ ಪಿ.ಪುಚ್ಚೇರಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ವಿಶ್ವನಾಥ ನಾಯ್ಕ ಜೆ., ಮೂಡಬಿದಿರೆ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ ಗೌಡ ಕುಡ್ತಾಜೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿರುವ ಧರ್ಣಮ್ಮ ಪಿಲವೂರು, ಪುತ್ತೂರು ಸರಕಾರಿ ಆಸ್ಪತ್ರೆ ನರ್ಸಿಂಗ್ ಆಫೀಸರ್ ಶಿವಮ್ಮ ಹಾಗೂ 2022ನೇ ಸಾಲಿನ ದ.ಕ.ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿನಿ ಅಭಿಜ್ಞಾ ಪಿ.,ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಶಿಕ್ಷಕಿ ಜಾಹ್ನವಿ ಐ., ತೀರ್ಥಕುಮಾರಿ, ಚಿತ್ರಾ, ರೋಹಿಣಿ, ಸುಕನ್ಯಾರವರು ಸನ್ಮಾನಿತರನ್ನು ಪರಿಚಯಿಸಿದರು. ಮುಖ್ಯಶಿಕ್ಷಕಿಯಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ಶಿಕ್ಷಕಿ ಲವ್ಲಿಜೋಸ್‌ರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here