ಕ್ರೀಡೆ ಮನುಷ್ಯನ ಮಾನಸಿಕ, ದೈಹಿಕ ಬೆಳವಣಿಗೆ ತುಂಬುವ ಸಾಧನ-ಡಾ. ಧರ್ಮಪಾಲನಾಥ ಸ್ವಾಮೀಜಿ
ಉಪ್ಪಿನಂಗಡಿ: ಕ್ರೀಡೆ ಮನುಷ್ಯನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಬಲಾಢ್ಯತೆಯನ್ನು ತುಂಬುವ ಸಾಧನ. ಮಕ್ಕಳ ಬದುಕಿನ ಭವಿಷ್ಯವನ್ನು ರೂಪಿಸುವಲ್ಲಿ ಕ್ರೀಡೆಗೆ ಮಹತ್ತರವಾದ ಸ್ಥಾನ ಇದೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠ ಹಾಗೂ ಪೆರಿಯಡ್ಕ ಸರ್ವೋದಯ ಪ್ರೌಢ ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಡಿ. 29ರಂದು ಪೆರಿಯಡ್ಕ ಸರ್ವೋದಯ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಕ್ರೀಡೋತ್ಸವಗಳು ನಾಡಿಗೆ ಉತ್ತಮವಾದ ಕ್ರೀಡಾ ಪಟುಗಳನ್ನು ರೂಪಿಸಿಕೊಡುವ ಕಾರ್ಯವನ್ನು ಮಾಡುತ್ತವೆ. ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿ ಹೆಚ್ಚು ಸದೃಢತೆ ಇರುವುದರಿಂದ ಈ ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚು ಸಶಕ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯ. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತಲೂ ಭಾಗವಹಿಸುವಿಕೆ ಅತೀ ಮುಖ್ಯ. ಸೋಲು ಮತ್ತೊಂದು ಗೆಲುವಿಗೆ ಸ್ಪೂರ್ತಿಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಕ್ರೀಡಾ ಧ್ವಜವನ್ನು ಅರೋಹಣ ಮಾಡಿದ ಮಾಜಿ ಸೈನಿಕ ಹಾಗೂ ವೈಟ್‌ಲಿಪ್ಟರ್ ಕೋಚ್ ವಿಶ್ವನಾಥ ಗೌಡ ಮಾತನಾಡಿ ಮೈದಾನ ಮಕ್ಕಳ ಬದುಕನ್ನು ರೂಪಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಪ್ರಸ್ತುತ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇರುವುದರಿಂದ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಭಾರತ ಅಂತರಾಷ್ಟ್ರೀಯ ಪಂದ್ಯಾಟಗಳು, ಕ್ರೀಡಾಕೂಟಗಳಲ್ಲಿ ಪ್ರಸ್ತುತ ಹೆಚ್ಚಿನ ಸಾಧನೆ ಮಾಡುತ್ತಿದೆ. ಗ್ರಾಮೀಣ ಭಾಗದ ಮಕ್ಕಳು ಕ್ರೀಡೆಗಳಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ದೃಷ್ಟಿ ಇಡಬೇಕು. ಕ್ರೀಡಾ ಮನೋಭಾವದಿಂದ ಆಟ ಆಡಿದರೆ ನಿಮ್ಮ ಸಾಧನೆ ಉತ್ತುಂಗಕ್ಕೇರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.
ಶಾಲಾ ಪರಿವೀಕ್ಷಕರಾದ ಬಾಲಕೃಷ್ಣ ಗೌಡ, ಎಸ್‌ಡಿಎಂಸಿ. ಅಧ್ಯಕ್ಷ ರಾಮಚಂದ್ರ ಗೌಡ ಉಪಸ್ಥಿತರಿದ್ದರು. ಸರ್ವೋದಯ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಪಿ. ಸ್ವಾಗತಿಸಿ, ಶಾಲಾ ನಾಯಕಿ ಪುಣ್ಯಶ್ರೀ ಪ್ರತಿಜ್ಞಾವಿಧಿ ಭೋಧಿಸಿದರು. ನಿಶ್ಮಿತಾ ಮತ್ತು ನಿತ್ಯಾ ಕ್ರೀಡಾಜ್ಯೋತಿ ಬೆಳಗಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ವಂದಿಸಿದರು. ಶಿಕ್ಷಕರಾದ ಸವಿತಾ, ಶಕುಂತಳಾ, ರಜನಿ ಸಹಕರಿಸಿದರು. ಶಿಕ್ಷಕ ನವೀನ್ ಕೆ.ಪಿ. ಕಾರ್ಯಕ್ರಮ ನಿರೂಪಿಸಿದರು.