ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ (100ವ) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಕಳೆದ ಬುಧವಾರ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎ ಗ್ಲೋರಿಯಸ್ ಸೆಂಚೂರಿ ರೆಸ್ಟ್ ಎಟ್ ದ ಫೀಟ್ ಅಫ್ ಗಾಡ್ ಎಂದು ತಾಯಿಯ ನಿಧನದ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ತಾಯಿಯ ಚಿತ್ರವನ್ನು ಶೇರ್ ಮಾಡಿರುವ ಅವರು ನನ್ನ ತಾಯಿಯಲ್ಲಿ 3 ಗುಣಗಳನ್ನು ಕಾಣುತ್ತಿದ್ದೆ. ಸಾಧ್ವಿಯ ಪಯಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನ ಎಂದು ಬಣ್ಣಿಸಿದ್ದಾರೆ. ಮೋದಿ ಸೇರಿದಂತೆ 5 ಮಂದಿ ಪುತ್ರರು ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ. ದೇಶಾದ್ಯಂತ ಹಲವು ಗಣ್ಯರು ಸೇರಿದಂತೆ ರಾಹುಲ್ ಗಾಂಧಿ, ಅಮಿತ್ ಶಾ, ರಾಜನಾಥ್ ಸಿಂಗ್ ಹೀರಾಬೆನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಗುಜರಾತ್ ಗಾಂಧಿನಗರದ ಸೆಕ್ಟರ್ 30ರ ಹಿಂದೂ ಸ್ಮಶಾನದಲ್ಲಿ ತಾಯಿ ಹೀರಾಬೆನ್‌ರವರ ಅಂತ್ಯಕ್ರಿಯೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಿದರು.