ಪುತ್ತೂರು: ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡ ಮತ್ತು ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ಡಿ.31 ರಂದು ನಸುಕಿನ ಜಾವ ನಡೆದಿದೆ. ಮಂಗಳೂರು, ಪುತ್ತೂರು, ಸುಳ್ಯ ಅಗ್ನಿಶಾಮಕದಳ ಮತ್ತು ರೈಲ್ವೇ ಇಲಾಖೆಯ ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಅನಿಲ ಸೋರಿಕೆ ತಡೆಯಲಾಗಿದೆ.
ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಅನಿಲ ಸಾಗಾಟ ಮಾಡುತ್ತಿದ್ದ ಗೂಡ್ಸ್ ರೈಲನ್ನು ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ರಾತ್ರಿ ಗಂಟೆ 2.30ರ ಸುಮಾರಿಗೆ ಕ್ರಾಸಿಂಗ್ಗಾಗಿ ನಿಲ್ಲಿಸಲಾಗಿತ್ತು. ಪೈಲೆಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ವ್ಯಾಗನ್ಗಳ ಪೈಕಿ ನಾಲ್ಕನೇ ಟ್ಯಾಂಕ್ನಿಂದ ಅನಿಲ ಸೋರಿಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ರೈಲ್ವೇ ನಿಲ್ದಾಣದಿಂದ ಪುತ್ತೂರು ಅಗ್ನಿಶಾಮಕದಳಕ್ಕೆ ಬಂದ ಕರೆಯಂತೆ ರಾತ್ರೋ ರಾತ್ರಿ ನೆಟ್ಟಣಕ್ಕೆ ತೆರಳಿದ ಸಿಬ್ಬಂದಿಗಳು ಯಾವುದೇ ಅನಾಹುತ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಕಾರ್ಯಾಚರಣೆ ನಡೆಸಿದರು. ಇದೇ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು, ಸುಳ್ಯದಿಂದಲೂ ಹೆಚ್ಚುವರಿ ಅಗ್ನಿಶಾಮಕ ವಾಹನ ತರಿಸಲಾಯಿತು. ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ರವರ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬ್ಬಂದಿಗಳಾದ ಮಂಜುನಾಥ್, ಗೃಹರಕ್ಷಕದಳದ ಮಂಜುನಾಥ್ ಸಹಿತ ಸುಳ್ಯದ ಅಗ್ನಿಶಾಮಕದಳದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಂಬಂಧಿಸಿದ ಕಂಪನಿಯವರು ಸ್ಥಳಕ್ಕೆ ಆಗಮಿಸಿ ಅನಿಲ ಸೋರಿಕೆಯಾಗದಂತೆ ಸೂಕ್ತ ಕ್ರಮಕೈಗೊಂಡರು. ಮಧ್ಯಾಹ್ನದ ವೇಳೆಗೆ ರೈಲು ಮಹಾರಾಷ್ಟ್ರದತ್ತ ಪ್ರಯಾಣ ಬೆಳೆಸಿದೆ ಎಂದು ವರದಿಯಾಗಿದೆ.