ನೆಲ್ಲಿಕಟ್ಟೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಸ್ವಂತ ಕಟ್ಟಡ :`ಒಕ್ಕಲಿಗ ಸ್ವಸಹಾಯ ಸೌಧ’ದಲ್ಲಿ ನೂತನ ಕಛೇರಿ ಉದ್ಘಾಟನೆ

0

ಸಂಘ ಅಭಿವೃದ್ಧಿ ಪಥದಲ್ಲಿ ಸಾಗಲು ಮಹಾಲಿಂಗೇಶ್ವರನ ಸಾನಿಧ್ಯ ಕಾರಣ -ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ

ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಲು ಒಕ್ಕೂಟ ಸಹಕಾರವಾಗಲಿ-ಸಂಜೀವ ಮಠಂದೂರು
ಹಲವು ಕಾರ್ಯಕ್ರಮದಿಂದ ಒಕ್ಕಲಿಗರ ಅಸ್ತಿತ್ವ ಕಾಣುವಂತಾಗಿದೆ – ಡಾ.ರೇಣುಕಾಪ್ರಸಾದ್ ಕೆ.ವಿ
ಕರ್ನಾಟಕದಲ್ಲೇ ಸಮುದಾಯಕ್ಕೊಂದು ಸಂಘ ಇರುವುದು ಪುತ್ತೂರಿನಲ್ಲಿ – ಮನೋಹರ್ ಡಿ.ವಿ
ಸಮಾಜದ ಶಕ್ತಿಯನ್ನು ತೋರಿಸುವ ಉದ್ದೇಶದಿಂದ ಸಂಘಟನೆ ಅಗತ್ಯ – ಪಿ.ಸಿ.ಜಯರಾಮ್
ಸ್ವಸಹಾಯ ಸಂಘದಿಂದ ಮಾತ್ರ ಪ್ರತಿ ಮನೆ ಸಂಪರ್ಕ – ವಿಶ್ವನಾಥ ಗೌಡ ಕೆಯ್ಯೂರು
ಸಂಘ ಇವತ್ತು ದೊಡ್ಡ ಮಟ್ಟದಲ್ಲಿ ಬೆಳೆದಿದೆ-ಚಿದಾನಂದ ಬೈಲಾಡಿ
ಒಕ್ಕಲಿಗ ಸ್ವಸಹಾಯ ಸಂಘದ ಮೂಲಕ ಸಂಘಟನೆ – ಎ.ವಿ.ನಾರಾಯಣ

ಪುತ್ತೂರು: ಒಕ್ಕಲಿಗರ ಸಂಘದ ಎಲ್ಲಾ ಚಟುವಟಿಕೆಗಳು ಪ್ರಾರಂಭವಾದದ್ದು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ. ಹಾಗಾಗಿ ಒಕ್ಕಲಿಗ ಸಂಘ ಅಭಿವೃದ್ದಿ ಪಥ ಕಾಣಲು ಕಾರಣೀಭೂತವಾಗಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.

ಅವರು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ೨೦೧೪ರಲ್ಲಿ ಆರಂಭಗೊಂಡ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್, ಪುತ್ತೂರು ಇದರ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಸ್ವಂತ ಕಟ್ಟಡ ‘ಒಕ್ಕಲಿಗ ಸ್ವ ಸಹಾಯ ಸೌಧ’ದಲ್ಲಿನ ಕಚೇರಿಯನ್ನು ಜ.೧ರಂದು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನೊಂದವರು, ದೀನ ದಲಿತರು, ಕೃಷಿಯಲ್ಲಿ ಹಿಂದಿರುವವರು, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಒಕ್ಕಲಿಗ ಸ್ವಸಹಾಯ ಸಂಘ ಇವತ್ತು ೮,೩೦೦ ಸದಸ್ಯರನ್ನು ಹೊಂದಿರುವುದಲ್ಲದೆ ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಸಂತೋಷ ತಂದಿದೆ. ಈ ಟ್ರಸ್ಟ್ ಮುಂದಿನ ದಿನಗಳಲ್ಲಿ ಉತ್ತರೋತ್ತರ ಅಭಿವೃದ್ಧಿಯ ಪಥವನ್ನು ಕಾಣಬೇಕು ಎಂದರು.

ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಲು ಒಕ್ಕೂಟ ಸಹಕಾರವಾಗಲಿ:
ಒಕ್ಕಲಿಗ ಸ್ವ ಸಹಾಯ ಸೌಧದಲ್ಲಿನ ವಿವಾಹ ವೇದಿಕೆಯ ಕಚೇರಿಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಇವತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬದಲಾವಣೆ ಕಾಣುತ್ತಿದ್ದೆವೆ. ಇಡೀ ಸಮಾಜವನ್ನು ಮತ್ತೆ ಒಂದು ಗೂಡಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸ್ವಸಹಾಯ ಸಂಘದ ಅವಶ್ಯತಕೆ ಇದೆ ಎಂದು ಎ.ವಿ.ನಾರಾಯಣರವರು ಕಂಡು ಕೊಂಡು ಸಂಘ ಸ್ಥಾಪಿಸಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೆ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಸಮಾಜದ ಒಗ್ಗಟ್ಟು ಒಳಿತನ್ನು ಕೂಡ ಕಾಪಾಡುವ ಮತ್ತು ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಲು ಒಕ್ಕೂಟ ಸಹಕಾರವಾಗಲಿ. ಅದರ ಜೊತೆಯಲ್ಲಿ ಸಮಾಜದ ನೊಂದ, ಶೋಷಿತ ಜನರಿಗೂ ಸಹಾಯವನ್ನು ಈ ಸಂಘ ಮಾಡಿರುವುದು ಶ್ಲಾಘನೀಯ. ಇದನ್ನು ಮುಂದುವರಿಸುವ ಕೆಲಸ ಆಗಲಿ ಮತ್ತು ವಧುವರರ ವೇದಿಕೆ ವಿಚಾರದಲ್ಲೂ ಸಂಪ್ರದಾಯ ವಿಚಾರದಲ್ಲಿ ಉತ್ತಮ ಸಂಪ್ರದಾಯ ಮೂಡಿ ಬರಲಿ ಎಂದರು.

ಹಲವು ಕಾರ್ಯಕ್ರಮದಿಂದ ಒಕ್ಕಲಿಗರ ಅಸ್ತಿತ್ವ ಕಾಣುವಂತಾಗಿದೆ:
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ಒಕ್ಕಲಿಗ ಸ್ವ ಸಹಾಯ ಸಂಘದ ಕಚೇರಿಯ ಅಧ್ಯಕ್ಷರ ಕೊಠಡಿ ಉದ್ಘಾಟಿಸಿ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಸಹಾಯ, ಗ್ರಾಮ ದತ್ತು ತೆಗೆದು ಮಾದರಿ ಗ್ರಾಮಕ್ಕೆ ಸಹಕಾರ ಮಾಡುವ ಮೂಲಕ ಒಕ್ಕಲಿಗರ ಮೂಲ ಉದ್ದೆಶ ಈಡೇರಿದೆ.

ಇದರಿಂದಾಗಿ ಇವತ್ತು ಒಕ್ಕಲಿಗರ ಅಸ್ತಿತ್ವ ಕಾಣುವಂತಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ, ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ನಿರ್ಮಾಣಗೊಂಡಿರುವುದು ಒಕ್ಕಲಿಗರ ಅಸ್ತಿತ್ವವನ್ನು ಗಟ್ಟಿ ಮಾಡಿದೆ. ನೂತನ ಕಚೇರಿಯ ಮೂಲಕ ಸಂಘದ ಒಟ್ಟು ಸಮಾಜ ಸೇವೆ, ಸಂಘಟನೆ ಉತ್ತಮ ರೀತಿಯಲ್ಲಿ ನಡೆಯಲಿ ಎಂದರು.

ಕರ್ನಾಟಕದಲ್ಲೇ ಸಮುದಾಯಕ್ಕೊಂದು ಸಂಘ ಇರುವುದು ಪುತ್ತೂರಿನಲ್ಲಿ:
ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ.ಅವರು ಮಾತನಾಡಿ, ಸಂಘವು ಸ್ವಾಭಿಮಾನದ ಪ್ರತೀಕವಾಗಿ ಸ್ವಂತ ಕಟ್ಟಡವನ್ನು ಪ್ರಾರಂಭಿಸಿರುವುದು ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಈ ಎಲ್ಲಾ ಕಾರ್ಯಗಳಿಗೆ ಸಮುದಾಯದ ಹಿರಿಯರ ಪ್ರೋತ್ಸಾಹ, ಸದಸ್ಯರೆಲ್ಲರ ಕಾರ್ಯಚಟುವಟಿಕೆ ಕಾರಣ ಎಂದರು. ಈಗಾಗಲೇ ಸುಮಾರು ೮೨೦ ಸ್ವಸಹಾಯ ಸಂಘ, ೮,೫೦೦ ಸದಸ್ಯರಿದ್ದಾರೆ. ಸಂಘದ ಕಾರ್ಯಚಟುವಟಿಕೆಯಲ್ಲಿ ಸಾಕಷ್ಟು ನೋವುಗಳನ್ನು ಕಂಡಿದ್ದೆವೆ. ಆದರೆ ಎಲ್ಲದಲ್ಲೂ ಯಶಸ್ವಿ ಕಂಡಿದ್ದೆವೆ. ಸಂಘ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಅವರು ಕಾರಣ. ಇದರ ಜೊತೆಗೆ ತೆರಿಗೆ ಮುಕ್ತವಾಗಿಸಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಸಹಕಾರವು ಇದೆ. ಕರ್ನಾಟಕದಲ್ಲಿ ಸಮುದಾಯಕ್ಕೊಂದು ಸಂಘ ಇರುವುದು ಪುತ್ತೂರಿನಲ್ಲಿ ಮಾತ್ರ ಎಂದರು.

ಸಮಾಜದ ಶಕ್ತಿಯನ್ನು ತೋರಿಸುವ ಉದ್ದೆಶದಿಂದ ಸಂಘಟನೆ ಅಗತ್ಯ:
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ಅಧ್ಯಕ್ಷ ಪಿ.ಸಿ.ಜಯರಾಮ್‌ರವರು ಮಾತನಾಡಿ, ಸಮಾಜದ ಶಕ್ತಿ ಪ್ರದರ್ಶನಕ್ಕೆ ಸಂಘಟನೆಗಳು ಅನಿವಾರ್ಯವಾಗಿ ಆಗಬೇಕಾಗಿದೆ. ಪುತ್ತೂರು, ವಿಟ್ಲ, ಸುಳ್ಯ, ಬೆಳ್ತಂಗಡಿಯಲ್ಲಿ ಒಕ್ಕಲಿಗರು ಬಹು ಸಂಖ್ಯಾತರಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನವಾದ ಮಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ಜನ ಸಂಖ್ಯೆ ಕಡಿಮೆ ಇದೆ. ಭೈರವೈಕ್ಯ ಶ್ರೀ ಆದಿಚುಂಚನಗಿರಿಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿ, ಈಗಿನ ಪೀಠಾಧಿಪತಿ ಶ್ರೀ ಡಾ| ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರ ಸಾಂಗಾತ್ಯದಿಂದ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಸುಳ್ಯದಲ್ಲಿ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಗ್ರಾಮ ವಾಸ್ತವ್ಯ ಸಂಘಟನೆಗೆ ಹೆಚ್ಚು ಸಹಕಾರಿಯಾಗಿದೆ. ಪುತ್ತೂರಿನ ಒಕ್ಕಲಿಗ ಗೌಡ ಸಂಘವು ಸುಳ್ಯ ಒಕ್ಕಲಿಗ ಗೌಡ ಸಂಘಕ್ಕೆ ಪ್ರೇರಣೆಯಾಗಿದೆ. ಧರ್ಮಸ್ಥಳ, ನವೋದಯ, ಒಡಿಯೂರು ಸ್ವಸಹಾಯ ಸಂಘ ಮತ್ತು ಸ್ತ್ರಿಶಕ್ತಿ ಯೋಜನೆಗಳೂ ತಮ್ಮದೇ ಕಾರ್ಯವ್ಯಾಪ್ತಿಯಲ್ಲಿ ನಡೆಯುತ್ತಿವೆ. ಪುತ್ತೂರಿನಲ್ಲಿ ಒಕ್ಕಲಿಗ ಸ್ವಸಹಾಯ ಸಂಘವು ಸಮುದಾಯದ ಸಂಘಟನೆಯ ಕಲ್ಪನೆಯನ್ನು ಇಟ್ಟುಕೊಂಡು ಇತರ ಸಮಾಜವನ್ನು ಬೆಳೆಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದರು.

ಸ್ವಸಹಾಯ ಸಂಘದಿಂದ ಮಾತ್ರ ಪ್ರತಿ ಮನೆ ಸಂಪರ್ಕ:
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರುರವರು ಮಾತನಾಡಿ, ಒಕ್ಕಲಿಗ ಸಮುದಾಯದ ಪ್ರತಿ ಮನೆಯನ್ನು ಸಂಪರ್ಕ ಮಾಡುವ ಶಕ್ತಿ ಇರುವುದು ಒಕ್ಕಲಿಗ ಸ್ವ ಸಹಾಯ ಸಂಘದಿಂದ ಮಾತ್ರ. ಸ್ವಸಹಾಯ ಸಂಘದ ಮೂಲಕ ಸಮಾಜಮುಖಿ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹೇಳಿ ಹಾರೈಸಿದರು.

ಸಂಘದ ಮೂಲಕ ಉಚಿತ ಸಾಮೂಹಿಕ ವಿವಾಹಕ್ಕೆ ೫ ಜೋಡಿಗೆ ಅವಕಾಶ
: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ, ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರಂಭವಾದ ಯಾವುದೇ ಸಂಸ್ಥೆಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತವೆ ಎಂಬುದಕ್ಕೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಒಂದು ನಿದರ್ಶನವಾಗಿದೆ. ಸಂಘವು ೨೦೦೨ರಲ್ಲಿ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲೇ ಆರಂಭಗೊಂಡು ಈಗ ೮ ಶಾಖೆಗಳನ್ನು ಹೊಂದಿ ಸ್ವಂತ ಕಟ್ಟಡವನ್ನು ಹೊಂದಿದೆ. ಅದೇ ರೀತಿ ಸ್ವಸಹಾಯ ಸಂಘವು ಕೂಡಾ ಅದೇ ಕಟ್ಟಡದಲ್ಲಿ ಪ್ರಾರಂಭಗೊಂಡು ಇವತ್ತು ಸ್ವಂತ ಕಟ್ಟಡದಲ್ಲಿ ಕಾರ್ಯಕ್ರಮ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು. ಸಂಘ ಪ್ರಾರಂಭಿಸುವಾಗ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣರವರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಆಗಿನ ಕಾಲದಲ್ಲಿ ಅದು ಕಷ್ಟ ಸಾಧ್ಯವಾಗಿತ್ತು. ಆದರೆ ಅದನ್ನು ಮೆಟ್ಟಿ ನಿಂತು ಇವತ್ತು ದೊಡ್ಡ ಮಟ್ಟದಲ್ಲಿ ಸಂಘವನ್ನು ಬೆಳೆಸಿದ್ದಾರೆ ಎಂದು ಹೇಳಿದರು. ಇಲ್ಲಿ ಆರಂಭಗೊಂಡಿರುವ ವಿವಾಹ ವೇದಿಕೆಯ ಮೂಲಕ ಕಂಕಣಭಾಗ್ಯ ಕೂಡಿಬರುವ ೫ ಮಂದಿಗೆ ಅವರು ಬಯಸಿದ್ದಲ್ಲಿ ಸಂಘದ ಮೂಲಕ ಉಚಿತ ಸಾಮೂಹಿಕ ವಿವಾಹಕ್ಕೆ ಅವರನ್ನು ಆಯ್ಕೆ ಮಾಡಲಾಗುವುದು ಎಂದು ಚಿದಾನಂದ ಬೈಲಾಡಿ ಹೇಳಿದರು.

ಒಕ್ಕಲಿಗ ಸ್ವಸಹಾಯ ಸಂಘದ ಮೂಲಕ ಸಂಘಟನೆ :
ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಅವರು ಮಾತನಾಡಿ, ನಮ್ಮ ಸಮುದಾಯ ಗಟ್ಟಿಯಾಗಿದೆ. ಆದರೂ ಸೇರುವವರ ಸಂಖ್ಯೆ ಕಡಿಮೆ. ಒಕ್ಕಲಿಗ ಸ್ವಸಹಾಯ ಸಂಘದ ಮೂಲಕ ಸಂಘಟನೆ ಬಲಪಡಿಸಲು ಹಾಗೂ ಸಾಮಾಜಿಕ ಸೇವೆಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ರಚನೆ ಮಾಡಲಾಯಿತು. ಇವತ್ತು ಸ್ವಸಹಾಯ ಟ್ರಸ್ಟ್‌ನ ಅಡಿಯಲ್ಲಿ ಒಕ್ಕಲಿಗ ಸ್ವಸಹಾಯ ಸಂಘಗಳು ಪುತ್ತೂರು, ಕಡಬ ತಾಲೂಕು ಹಾಗೂ ವಿಟ್ಲ ವ್ಯಾಪ್ತಿಯಲ್ಲಿ ಇವೆ. ಒಟ್ಟು ೪೨ ಒಕ್ಕೂಟಗಳಿದ್ದು ೧೫ ಸಿಬ್ಬಂದಿಗಳಿದ್ದಾರೆ. ೭ ವಲಯದಲ್ಲಿ ೮೨೮ ಗುಂಪು, ೮೩೦೦ ಸದಸ್ಯರನ್ನು ಹೊಂದಿದ್ದು, ಸುಮಾರು ರೂ. ೨.೬೪ ಕೋಟಿ ರೂ., ಉಳಿತಾಯ ಹೊಂದಿದೆ. ಇಲ್ಲಿನ ತನಕ ಸುಮಾರು ೯೦ ಮಂದಿ ಫಲಾನುಭವಿಗಳಿಗೆ, ಕಷ್ಟದಲ್ಲಿರುವವರಿಗೆ ಸಂಘದ ಮೂಲಕ ಸಹಾಯ ಮಾಡಲಾಗಿದೆ ಎಂದರು.

ಪ್ರೋತ್ಸಾಹ ಧನ, ಗುರುತಿಸುವಿಕೆ:
ಕುಂಬ್ರ, ಉಪ್ಪಿನಂಗಡಿ, ವಿಟ್ಲ ವಲಯದ ಒಕ್ಕಲಿಗ ಸ್ವ ಸಹಾಯ ಸಂಘದ ಒಕ್ಕೂಟಗಳ ವಲಯ ಅಧ್ಯಕ್ಷರನ್ನು ಗುರುತಿಸಲಾಯಿತು. ಉತ್ತಮ ಸೇವೆ ನೀಡಿದ ಪ್ರೇರಕರಾದ ನಮಿತಾ, ಶ್ರೀಕಾಂತ್, ಕಚೇರಿ ವ್ಯವಸ್ಥಾಪಕ ಗಿರಿಧರ್ ಅಂಬೆಕಲ್ಲು, ಮೇಲ್ವಿಚಾರಕ ವಿಜಯಕುಮಾರ್, ಸುಮಲತಾ, ಪ್ರತಿಭಾ, ಸುಜಾತ, ಜಿನಿತ್, ಪರಮೇಶ್ವರ, ಲಲಿತ, ಮೋಹಿನಿ, ದೇವರಾಜ್, ಗಣೇಶ್, ಚಿತ್ರಕಲಾರವರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಸಲಹಾ ಸಮಿತಿ, ಟ್ರಸ್ಟಿಗಳಿಗೆ ಗೌರವ:
ಸಂಘದ ಸಲಹಾ ಸಮಿತಿ ಸದಸ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಪದ್ಮಯ್ಯ ಗೌಡ ಬನ್ನೂರು, ವೆಂಕಪ್ಪ ಗೌಡ ಕೆಯ್ಯೂರು, ಲಿಂಗಪ್ಪ ಗೌಡ ಶಾಂತಿದಡ್ಡ, ಜಿನ್ನಪ್ಪ ಗೌಡ ಮಳುವೇಲು, ಆಡಳಿತ ಮಂಡಳಿಯ ಅಧ್ಯಕ್ಷ ಡಿ.ವಿ ಮನೋಹರ್, ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಕಾರ್ಯದರ್ಶಿ ದಿವ್ಯಪ್ರಸಾದ್, ಖಜಾಂಜಿ ಎ.ವಿ.ನಾರಾಯಣ, ನಿರ್ದೇಶಕರಾದ ಸುರೇಂದ್ರ ಗೌಡ ಬಾರ್ತಿಕುಮೇರು, ವಿಶ್ವನಾಥ ಗೌಡ ಇಡಾಲ, ಸರೋಜಿನಿ ಜಯಪ್ರಕಾಶ್, ಯು.ಪಿ.ರಾಮಕೃಷ್ಣ, ಆನಂದ ಗೌಡ ಮೂವಪ್ಪು, ಮಧು ನರಿಯೂರು, ವಸಂತ ಗೌಡ ವೀರಮಂಗಲ, ಶ್ರೀಧರ ಗೌಡ ಕಣಜಾಲುರವರನ್ನು ಗೌರವಿಸಲಾಯಿತು. ನೂತನ ಕಟ್ಟಡಕ್ಕೆ ದೇಣಿಗೆ ನೀಡಿದ ಉದ್ಯಮಿ ಚೆನ್ನಪ್ಪ ಗೌಡ ಕೋಲಾಡಿ, ವಿವಾಹ ವೇದಿಕೆ ಸಂಯೋಜಕ ಸುರೇಶ್ ರೇಂಜರ್, ಹರೀಶ್ಚಂದ್ರರವರನ್ನು ಗೌರವಿಸಲಾಯಿತು.

ಜೇನು ಸಲಕರಣೆ ವಿತರಣೆ:
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಹಾಗೂ ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಇತ್ತೀಚೆಗೆ ೫ ದಿನಗಳ ಜೇನು ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಇದರ ಫಲಾನುಭವಿಗಳಿಗೆ ಜೇನು ತೆಗೆಯುವ ಯಂತ್ರವನ್ನು ಜನಾರ್ದನ ಮತ್ತು ಚಂದ್ರಶೇಖರ್‌ರವರಿಗೆ ಶಾಸಕರ ಮೂಲಕ ವಿತರಿಸಲಾಯಿತು.

ಒಕ್ಕಲಿಗ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಒಕ್ಕಲಿಗ ಮಹಿಳಾ ಗೌಡ ಸಂಘದ ಗೌರವಾಧ್ಯಕ್ಷೆ ಮತ್ತು ನಗರಸಭೆ ಸದಸ್ಯೆ ಗೌರಿ ಬನ್ನೂರು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್, ಟ್ರಸ್ಟಿನ ಮೆನೇಜರ್ ಗಿರಿಧರ್ ಅಂಬೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರೋಜಿನಿ ಜಯಪ್ರಕಾಶ್, ವಿಶ್ವನಾಥ ಇಡಾಲ, ವೆಂಕಪ್ಪ ಗೌಡ ಕೆಯ್ಯೂರು, ಜಿನ್ನಪ್ಪ ಗೌಡ ಮಳವೇಲು, ಪದ್ಮಯ್ಯ ಗೌಡ ಬನ್ನೂರು, ಸುರೇಂದ್ರ ಗೌಡ, ವಿಜಯ ಕುಮಾರ್, ನಾಗಪ್ಪ ಗೌಡ ಬೊಮ್ಮೆಟ್ಟಿ, ಶ್ರೀಕಾಂತ್, ಪ್ರತಿಭಾ, ಜಿನಿತ್, ದೇವರಾಜ್ ಅತಿಥಿಗಳನ್ನು ಗೌರವಿಸಿದರು. ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಸ್ವಾಗತಿಸಿ, ಮೇಲ್ವಿಚಾರಕ ವಿಜಯಕುಮಾರ್ ವಂದಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಡಿ.೩೧ರಂದು ರಾತ್ರಿ ದುರ್ಗಾಪೂಜೆ, ವಾಸ್ತು ಹೋಮಾದಿಗಳು ನಡೆಯಿತು. ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ರಾಜೇಶ್ ಭಟ್ ಅವರು ಸತ್ಯನಾರಾಯಣ ಪೂಜೆ ನೆರವೇರಿಸಿದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ದಂಪತಿ ಸತ್ಯನಾರಾಯಣ ವೃತಾಚರಣೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿಟ್ಲ ಗೌಡ ಸೇವಾ ಸಂಘದ ಪದಾಧಿಕಾರಿಗಳ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಾಗ ಲಭಿಸಲು ಮಹಾಲಿಂಗೇಶ್ವರ ದೇವರ ಪ್ರೇರಣೆ

ಸ್ವ ಸಹಾಯ ಟ್ರಸ್ಟ್‌ನ ಕಾರ್ಯಚಟುವಟಿಕೆಗಳಿಗೆ ಮತ್ತು ಹಲವು ಯೋಜನೆಗೆ ಸಂಬಂಧಿಸಿ ಸ್ವಂತ ಜಾಗವನ್ನು ಖರೀದಿಸುವ ಕುರಿತು ಮಹಾಲಿಂಗೇಶ್ವರ ದೇವರ ಮುಂದೆ ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ವೆಂಕಪ್ಪ ಗೌಡರವರು ವಲೇರಿಯನ್ ಪಾಯಸ್‌ರವರ ಈ ಕಟ್ಟಡವನ್ನು ತೋರಿಸಿದರು. ಆ ಬಳಿಕ ಅವರ ಮನೆಯವರಿಂದ ದೇವರ ಪ್ರೇರಣೆಯಂತೆ ಅತೀ ಕಡಿಮೆ ಮತ್ತು ಉತ್ತಮ ಬೆಲೆಗೆ ಜಾಗವನ್ನು ಖರೀದಿ ಮಾಡಲಾಯಿತು. ಟ್ರಸ್ಟ್ ಮೂಲಕ ನಡೆಯುವ ಸೇವಾ ಚಟುವಟಿಕೆಗಳನ್ನು ಗಮನಿಸಿ ಸಿಸಿಲಾ ಪಾಯಸ್‌ರವರು ದಿ. ವಲೇರಿಯನ್ ಪಾಯಸ್‌ರವರ ಹೆಸರಿನಲ್ಲಿ ರೂ.೧ ಲಕ್ಷವನ್ನು ಟ್ರಸ್ಟ್‌ಗೆ ನೀಡಿದ್ದಾರೆ. ಇದೆಲ್ಲಾ ಮಹಾಲಿಂಗೇಶ್ವರ ದೇವರ ಆಶೀರ್ವಾದವಾಗಿದೆ. ಮುಂದೆ ಈ ಕಟ್ಟಡವು ನಮ್ಮ ಚಟುವಟಿಕೆಗೆ ಕಡಿಮೆ ಆಗಬಹುದು. ಒಟ್ಟಿನಲ್ಲಿ ಸಮಾಜದ ಜನರನ್ನು ಒಟ್ಟುಗೂಡಿಸುವುದು ನಮ್ಮ ಕಾರ್ಯ.

LEAVE A REPLY

Please enter your comment!
Please enter your name here