- 100 ತಂಡಗಳನ್ನೊಳಗೊಂಡಂತೆ 1500 ಮಂದಿ ಕ್ರೀಡಾಪಟುಗಳು ಭಾಗವಹಿಸುವಿಕೆ.
- ಭರದಿಂದ ನಡೆಯುತ್ತಿದೆ ಕ್ರೀಡಾಂಗಣ ನಿರ್ಮಾಣ ಕಾರ‍್ಯ.
ಉಪ್ಪಿನಂಗಡಿ: ಸರ್ಕಾರಿ ಕಾಲೇಜಿನ ಇತಿಹಾಸದಲ್ಲೇ ಅದರಲ್ಲೂ ಗ್ರಾಮೀಣ ಭಾಗದ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ 2022-23 ಜನವರಿ 13ರಿಂದ 17ರ ವರೆಗೆ ನಡೆಯಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಜ. 1ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪಂದ್ಯಾಟದ ಸಲುವಾಗಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಇಡೀ ಭಾರತ ದೇಶದ ವಿವಿಧ ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸುವ ಸುಮಾರು 84 ತಂಡಗಳು ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿದ್ದು, ಒಟ್ಟು ಸುಮಾರು 100 ತಂಡಗಳ ಭಾಗೀಧಾರಿಕೆಯನ್ನು ನಿರೀಕ್ಷಿಸಲಾಗಿದೆ ಎಂದರು.
100 ತಂಡ, 1500 ಮಂದಿ ಕ್ರೀಡಾಪಟುಗಳು: 100 ತಂಡದಲ್ಲಿ 1000 ಕ್ರೀಡಾಪಟುಗಳು, 200 ಮಂದಿ ತೀರ್ಪುಗಾರರು, 300 ಮಂದಿ ಅಧಿಕಾರಿಗಳನ್ನೊಳಗೊಂಡಂತೆ ದೇಶದಾದ್ಯಂತದಿಂದ ಒಟ್ಟು ಸುಮಾರು 1500 ಮಂದಿ ಭಾಗವಹಿಸಲಿದ್ದಾರೆ. ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ವಾಸ್ತವ್ಯ, ಅಭ್ಯಾಸ, ಊಟೋಪಚಾರ ಸಹಿತ ಸಕಲ ಆತಿಥ್ಯಕ್ಕೆ ವ್ಯವಸ್ಥೆಯನ್ನು ಯೋಜಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕ್ರೀಡಾಕೂಟದಿಂದ ಈ ಊರಿಗೂ ಪ್ರಯೋಜನ ಲಭಿಸಲಿದ್ದು, ಊರವರು ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು. ಈಗಾಗಲೇ ಕ್ರೀಡಾಕೂಟದ ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಶಾಲವಾದ ಕ್ರೀಡಾಂಗಣದಲ್ಲಿ ಎಲ್ಲಾ ಬಗೆಯ ಕ್ರೀಡೆಗಳಿಗೆ ಅವಕಾಶ ಒದಗಿಸಿದಂತಾಗುತ್ತದೆ. ಮಾತ್ರವಲ್ಲದೆ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಈ ಭಾಗದಲ್ಲೂ ಯುವ ಪತ್ರಿಭೆಗಳು ಮೂಡಿ ಬರಲು ಈ ಕ್ರೀಡಾಕೂಟ ಪ್ರೇರಣೆಯಾಗಲಿದೆ. ಅದಕ್ಕಾಗಿಯೇ ಈ ಕ್ರೀಡಾಕೂಟವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ಭರದಿಂದ ನಡೆಯುತ್ತಿದೆ ಕ್ರೀಡಾಂಗಣ ನಿರ್ಮಾಣ ಕಾರ‍್ಯ: ಕಾಲೇಜು ಆವರಣದಿಂದ ನೇತ್ರಾವತಿ ನದಿ ದಡ ಪ್ರದೇಶದಲ್ಲಿ ವಿಶಾಲವಾದ ಕ್ರೀಡಾಂಗಣವನ್ನು ನಿರ್ಮಿಸುವರೇ ಕಳೆದ 2 ತಿಂಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದ್ದು, ಶೇಕಡಾ 90ರಷ್ಟು ಕಾರ್ಯಗಳು ಪೂರ್ಣಗೊಂಡಿದೆ. ಯೋಜನೆಯಂತೆ ಕ್ರೀಡಾಂಗಣ ವಿಶಾಲಗೊಂಡರೆ 400 ಮೀಟರ್ ಟ್ರಾಕ್ ನಿರ್ಮಿಸಬಹುದಾಗಿದೆ ಎಂದರು. ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರವೀಣ್ ಕುಮಾರ್ ಹಾಗೂ ಇಂಟರ್ಶಿಫ್ ಆಧರಿತ ಕಾರ್ಯನಿರ್ವಹಿಸುತ್ತಿರುವ ವಿಜೇತ್ ಜೈನ್ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶ್ರಮದಲ್ಲಿ ಕ್ರೀಡಾಂಗಣ ಅತ್ಯುತ್ತಮ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಸ್ವಾಗತ ಸಮಿತಿ ಸದಸ್ಯರಾದ ಸುದರ್ಶನ್, ಸುನಿಲ್ ಕುಮಾರ್ ದಡ್ಡು, ಜಯಂತ ಪೊರೋಳಿ, ಮಹಾಲಿಂಗೇಶ್ವರ ಭಟ್, ಗಂಗಾಧರ್, ಕೃಷ್ಣರಾಜ, ಧನಂಜಯ, ಪ್ರಸಾದ್ ಭಂಡಾರಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮಿ ಕಡೇಶಿವಾಲಯ ಉಪಸ್ಥಿತರಿದ್ದರು.