ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರ ಬಳಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿದ್ದ ಕಬ್ಬಿನ ಜ್ಯೂಸ್ ಅಂಗಡಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಆದೇಶದಂತೆ ದೇವಳದಿಂದ ಜ.2ರಂದು ತೆರವು ಮಾಡಲಾಯಿತು.
ಯೋಗೀಶ್ ಯಾನೆ ಅಮೃತ್ ಎಂಬವರಿಗೆ ಸೇರಿದ ಜ್ಯೂಸ್ ಅಂಗಡಿ ಆರಂಭದಲ್ಲಿ ದೇವಳಕ್ಕೆ ತೆರಳುವ ರಸ್ತೆ ಕಟ್ಟಡವೊಂದರಲ್ಲಿ ಬಾಡಿಗೆ ನೆಲೆಯಲ್ಲಿತ್ತು. ಕೆಲ ವರ್ಷದ ಹಿಂದೆ ಕಟ್ಟಡದ ಮಾಲಕರು ಕಟ್ಟಡ ನೆಲಸಮ ಮಾಡಿದ ಸಂದರ್ಭ ದೇವಳದ ಜಾಗದಲ್ಲಿ ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ಜ್ಯೂಸ್ ಅಂಗಡಿ ಇರಿಸಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ ಬೆಳವಣಿಗೆಯಲ್ಲಿ ದೇವಳದ ಜಾಗದಲ್ಲಿ ಅನಧಿಕೃತವಾಗಿ ಅಂಗಡಿ ನೀಡಿರುವುದಾಗಿ ದೇವಸ್ಥಾನಕ್ಕೆ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ನೀಡಿದ ಮಾಹಿತಿ ಹಕ್ಕಿನ ದೂರಿನ ಮೇರೆಗೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ದೇವಳದ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಆದೇಶ ನೀಡಿದ್ದರು.
ಈ ಕುರಿತು ಅಂಗಡಿಯ ಮಾಲಕ ಯೋಗೀಶ್ ಅವರಿಗೆ ಅಂಗಡಿ ತೆರವು ಮಾಡಲು ಸೂಚನೆ ನೀಡಲಾಗಿತ್ತು. ಈ ನಡುವೆ ಅಂಗಡಿ ತೆರವು ಮಾಡದಿದ್ದರೆ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಧಾರ್ಮಿಕ ದತ್ತಿ ಇಲಾಖೆ ಎಸಿ ಅವರು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜ.2ರಂದು ಅಂಗಡಿಯನ್ನು ತೆರವು ಮಾಡಲಾಗಿದೆ. ಅಂಗಡಿ ತೆರವು ಸಂದರ್ಭ ಅಂಗಡಿ ಮಾಲಕ ಯೋಗೀಶ್ ಯಾನೆ ಅಮೃತ್ ಮತ್ತು ಅವರ ಪತ್ನಿ, ಮಕ್ಕಳು ಉಪಸ್ಥಿತರಿದ್ದರು.
ಬದಲಿ ವ್ಯವಸ್ಥೆ:
ಸುಮಾರು 5 ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಅಮೃತ್ ಅವರು ದೇವಳದ ಬ್ರಹ್ಮರಥ ಮಂದಿರದ ಬಳಿ ಅಂಗಡಿ ನಡೆಸುತ್ತಿದ್ದರು. ಆದರೆ ಅಲ್ಲಿ ಸೂಕ್ತ ಅಲ್ಲ ಎಂದು ಹಲವು ದೂರುಗಳು ದೇವಸ್ಥಾನಕ್ಕೆ ಬಂದಿತ್ತು. ಎಂಡೋಮೆಂಟ್ ಎಸಿಯವರು ಈ ಕುರಿತು ಅಂಗಡಿ ತೆರವು ಮಾಡುವಂತೆ ದೇವಸ್ಥಾನಕ್ಕೆ ಆದೇಶ ಮಾಡಿದ್ದರು. ಈ ಕುರಿತು ಅಂಗಡಿ ತೆರವು ಮಾಡಲು ದೇವಸ್ಥಾನದಿಂದ ಸೂಚನೆಯನ್ನು ನೀಡಲಾಗಿತ್ತು. ದೇವಳದ ಸೂಚನೆಯಂತೆ ಅಮೃತ್ ಅವರು ಅಂಗಡಿ ತೆರವಿಗೆ ಒಪ್ಪಿಕೊಂಡಿದ್ದಾರೆ. ಜೊತೆಗೆ ಕಡು ಬಡತನದಲ್ಲಿರುವ ಅಮೃತ್ ಕುಟುಂಬಕ್ಕೆ ಪ್ರತ್ಯೇಕ ಅಂಗಡಿ ಕೊಡಿಸುವ ಕುರಿತು ನಾವೆಲ್ಲ ಸೇರಿಕೊಂಡು ದೇವಳದ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಬದಲಿ ಅಂಗಡಿ ವ್ಯವಸ್ಥೆಗೆ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂದು ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ತಿಳಿಸಿದ್ದಾರೆ.
ಅದೇ ರೀತಿ ಬದಲಿ ಅಂಗಡಿ ವ್ಯವಸ್ಥೆಗೆ ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿವರ ಮೂಲಕ ದೇವಳಕ್ಕೆ ಮನವಿ ಸಲ್ಲಿಸಲಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ ಸಹಿತ ಹಲವಾರು ಮಂದಿ ಅಂಗಡಿ ತೆರವಾದ ಸ್ಥಳಕ್ಕೆ ತೆರಳಿ ಬದಲಿ ವ್ಯವಸ್ಥೆಯ ಭರವಸೆ ನೀಡಿದರು. ಅಂಗಡಿ ತೆರವಿನ ಸಂದರ್ಭ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಆಮ್ ಆದ್ಮಿ ಪಕ್ಷದ ಪುರುಷೋತ್ತಮ ಕೋಲ್ಪೆ ಅವರು ಭೇಟಿ ನೀಡಿ ಅಂಗಡಿಯ ಮಾಲಕರಿಗೆ ಧೈರ್ಯ ತುಂಬಿದ್ದಾರೆ.
ನನಗೆ ನೋಟೀಸ್ ಬಂದಿತ್ತು:
ದೇವಳದ ಬಳಿ ತಾತ್ಕಾಲಿಕ ನೆಲೆಯಲ್ಲಿ ಅಂಗಡಿ ನೀಲಾಗಿತ್ತು. ಆದರೆ ಮಾಹಿತಿ ಹಕ್ಕಿನ ಮೂಲಕ ಎಂಡೋಮೆಂಟ್ ಏಸಿಗೆ ದೂರು ಅರ್ಜಿ ಹೋಗಿದೆ. ಈ ಕುರಿತು ಕುದ್ದು ಎಂಡೋಮೆಂಟ್ ಎಸಿ ಯವರು ಇತ್ತೀಚೆಗೆ ಪುತ್ತೂರಿಗೆ ಬಂದು ಪರಿಶೀಲನೆ ಮಾಡಿ, ಅಂಗಡಿ ತೆರವಿಗೆ ಆದೇಶ ನೀಡಿದ್ದಾರೆ. ಆದರೂ ಅಂಗಡಿಯವನರು ನಿರ್ಗತಿಕರೆಂದು ನಾನು ಸುಮ್ಮನಿದ್ದೆ. ಆದರೆ ಎಸಿಯವರ ಆದೇಶದಂತೆ ಅಂಗಡಿ ತೆರವು ಮಾಡಲೇ ಬೇಕಾಗಿ ಬಂದಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ತಿಳಿಸಿದ್ದಾರೆ.
ದೇವಳದ ಸೂಚನೆಯನ್ನು ಪಾಲಿಸಿದ್ದೇವೆ
ದೇವಳದ ಸೂಚನೆಯಂತೆ ಸುಮಾರು ವರ್ಷದಿಂದ ಬ್ರಹ್ಮರಥದ ಬಳಿ ವ್ಯಾಪಾರ ಮಾಡಿಕೊಂಡು ಬಂದಿರುವ ನಮಗೆ ಇದೀಗ ಅಂಗಡಿ ತೆರವು ಮಾಡುವಂತೆ ದೇವಳದಿಂದ ಸೂಚನೆ ಬಂದಾಗ ಮತ್ತು ಬದಲಿ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದಂತೆ ನಾವು ತಾತ್ಕಾಲಿಕ ಅಂಗಡಿ ತೆರವಿಗೆ ಸಹಕಾರ ನೀಡಿದ್ದೇವೆ. ಬದಲಿ ಅಂಗಡಿ ವ್ಯವಸ್ಥೆಗೆ ಭರವಸೆ ನೀಡಿದ್ದಾರೆ. ಅದರಂತೆ ನಾವು ಕಾಯುತ್ತೇವೆ.
ಯೋಗೀಶ್ ಯಾನೆ ಅಮೃತ್, ಅಂಗಡಿ ಕಳೆದು ಕೊಂಡ ಮಾಲಕ