ಪುತ್ತೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇದರ ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣರವರು ತೆಂಗಿನ ಸಸಿಯನ್ನು ಖರೀದಿಸುವ ಮೂಲಕ “ಶಾಲಾ ಮಕ್ಕಳ ಮೆಟ್ರಿಕ್ ಮೇಳ” ಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ವಿವಿಧ ಸಾವಯವ ತರಕಾರಿ, ಹಣ್ಣುಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ತಮ್ಮ ಪುಟ್ಟ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿ ವ್ಯಾಪಾರಕ್ಕಾಗಿ ಸಿದ್ದರಾಗಿದ್ದರು. ಆಟದ ಮೈದಾನ ವಿವಿಧ ಬಣ್ಣದ ಅಂಗಡಿಗಳಿಂದ ಕಂಗೊಳಿಸುವ ಮೂಲಕ ಎಲ್ಲರ ಗಮನಸೆಳೆಯಿತು.ಮಕ್ಕಳಲ್ಲಿ ವ್ಯಾವಹಾರಿಕ ಜ್ಙಾನ ಬೆಳೆಸುವ ನಿಟ್ಟಿನಲ್ಲಿ ಈ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಮಕ್ಕಳ ಅಂಗಡಿಯ ಎಲ್ಲಾ ವಸ್ತುಗಳು ಮಾರಾಟವಾಗುವ ಮೂಲಕ ಮೆಟ್ರಕ್ ಮೇಳ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಯಿತು.ವಿದ್ಯಾರ್ಥಿಗಳು ಗಣಿತದ ಅನ್ವಯಿಕ ಜ್ಞಾನವನ್ನು ಪಡೆದುಕೊಂಡು ಸಂತಸದಾಯಕ ಕಲಿಕೆಯ ಅನುಭವವನ್ನು ಪಡೆದುಕೊಂಡರು.
ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ ಸ್ವಾಗತಿಸಿ ಮೆಟ್ರಿಕ್ ಮೇಳದ ಉದ್ದೇಶವನ್ನು ತಿಳಿಸಿದರು. ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಮಜಲು ಶುಭ ಹಾರೈಸಿದರು. ಗಣಿತ ಶಿಕ್ಷಕಿ ಅಕ್ಷತಾ ಲಾಭ ನಷ್ಟದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು. ನರಿಮೊಗರು ಕ್ಲಸ್ಟರ್ ನ ಸಿ.ಆರ್.ಪಿ. ಯ ಪರಮೇಶ್ವರಿ,ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಮಾಲತಿ ವಂದಿಸಿದರು. ಶಿಕ್ಷಕಿ ಶ ಸೌಮ್ಯ ಮತ್ತು ಲೀಲಾವತಿ ಸಹಕರಿಸಿದರು.