* ವಿಷ್ಣುಮೂರ್ತಿ ದೈವದ ಒತ್ತೆಕೋಲ, ಮುಳ್ಳು ಗುಳಿಗ ನೇಮ
ಪುತ್ತೂರು:ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಡಿ.30ರಿಂದ ನಡೆಯುತ್ತಿದ್ದ ಭಕ್ತ, ಸಡಗರದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸ ಹಾಗೂ ಒತ್ತೆಕೋಲವು ಜ.3ರಂದು ಬೆಳಿಗ್ಗೆ ಮುಳ್ಳುಗುಳಿಗ ದೈವದ ನೇಮದೊಂದಿಗೆ ತೆರೆ ಕಂಡಿದೆ.
ಬ್ರಹ್ಮಶ್ರೀ ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವಕ್ಕೆ ಡಿ.30ರಂದು ಹೊರೆಕಾಣಿಕೆ ಹಾಗೂ ವಿಷ್ಣುಮೂರ್ತಿ ದೈವದ ಮೊಗ ಮೆರವಣಿಗೆಯೊಂದಿಗೆ ಚಾಲನೆಗೊಂಡಿತು. ಡಿ.31ರಂದು ಅರ್ಧ ಏಕಾಹ ಭಜನೆ, ಸಂಜೆ ತಂತ್ರಿಗಳ ಆಗಮನ, ನಂತರ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು ನೆರವೇರಿತು.
ಜ.1ರಂದು ಬೆಳಿಗ್ಗೆ ವಿಷ್ಣುಮೂರ್ತಿ ದೈವ ಹಾಗೂ ಗುಳಿಗ ದೈವದ ಪುನಃ ಪ್ರತಿಷ್ಠೆ, ಬ್ರಹ್ಮಲಶೋತ್ಸವಗಳು ನೆರವೇರಿತು. ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮಗಳು ನೆರವೇರಿತು. ಜ.2ರಂದು ಬೆಳಿಗ್ಗೆ ಗಣಹೋಮ, ಸಂಜೆ ದೈವಗಳ ಭಂಡಾರ ತೆಗೆದು, ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ, ಅನ್ನಸಂತರ್ಪಣೆ, ಕುಳಿಚಟ್ಟು ದೈವದ ನೇಮ, ರಸಮಂಜರಿ ಕಾರ್ಯಕ್ರಮ, ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಮಾರಿಕಳ, ಪ್ರಸಾದ ವಿತರಣೆ, ಜ.3ರಂದು ಬೆಳಿಗ್ಗೆ ಮುಳ್ಳುಗುಳಿಗ ದೈವದ ನೇಮದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ, ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿ ಅನಿಲ್ ಕುಮಾರ್ ಕಣ್ಣಾರ್ನೂಜಿಯವರು ಗೌರವ ಸಲಹೆಗಾರರಾದ ಮುರಳೀಧರ ಭಟ್ ಬಂಗಾರಡ್ಕ, ಪ್ರಸನ್ನ ಭಟ್ ಪಂಚವಟಿ, ಉದ್ಯಮಿ ಜಯಂತ ನಡುಬೈಲು, ರಘುನಾಥ ಶೆಟ್ಟಿ ಪೊನೋನಿ, ವಸಂತ ಶೆಟ್ಟಿ ಶಿಬರ, ಶೀನಪ್ಪ ಪೂಜಾರಿ ಮುಲಾರು, ರವೀಂದ್ರ ರೈ ಬಳ್ಳಮಜಲುರವರನ್ನು, ಸದಸ್ಯರಾದ ಬಾಲಕೃಷ್ಣ ರೈ ಪಂಜಳ, ಹರೀಶ ಉದಯಗಿರಿ, ರಾಮ ದಂಡ್ಯಾನಕುಕ್ಕು, ಸೀತಾರಾಮ ಗೌಡ ಅಂಬಟ, ಉಮೇಶ್ ಗೌಡ ಗುತ್ತಿನಪಾಲು, ದೈವಸ್ಥಾನದ ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಕೋಶಾಧಿಕಾರಿ ಹುಕ್ರ ಮಾಸ್ಟರ್, ಸದಸ್ಯರಾದ ಈಶ್ವರ ನಾಯ್ಕ ಅಜಲಾಡಿ ಪಾದೆ, ಸೀತಾರಾಮ ಶೆಟ್ಟಿ ಪೊನೋನಿ, ಸೇಸಪ್ಪ ಶೆಟ್ಟಿ ಪೊನೋನಿ, ಬಾಲಕೃಷ್ಣ ಶೆಟ್ಟಿ ಪಂಜಳ, ರಘುನಾಥ ಶೆಟ್ಟಿ ಪೊನೋನಿ, ಜನಪ್ರತಿನಿಧಿಗಳು, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಂಘ-ಸಂಸ್ಥೆಗಳು ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಊರ, ಪರವೂರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ರಹ್ಮಕಲಶೋತ್ಸವದ ವೈಭವವನ್ನು ಕಂಡು ಪುನೀತರಾದರು.
15 ಸಾವಿರ ಮಂದಿಗೆ ಅನ್ನದಾನ:
ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಬಗೆ ಬಗೆಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನೆರವೇರಿತು. ನಾಲ್ಕು ದಿನಗಳಲ್ಲಿ ಒಟ್ಟು ಸುಮಾರು 15,೦೦೦ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಪ್ರಸಾದದೊಂದಿಗೆ ಸೀಯಾಳ:
ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಮುಳ್ಳು ಗುಳಿಗ ದೈವದ ನೇಮ ನಡೆದು ಪ್ರಸಾದ ಸ್ವೀಕರಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದದ ಜೊತೆಗೆ ಸೀಯಾಳವನ್ನು ವಿಶೇಷವಾಗಿ ನೀಡಲಾಗಿದೆ.
ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ:
ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲ ಕಾರ್ಯಕ್ರಮದಲ್ಲಿ ಹೊರೆಕಾಣಿಕೆ, ಮೊಗ ಮೆರವಣಿಗೆ, ಬ್ರಹ್ಮಕಲಶೋತ್ಸವ, ದೈವದ ಒತ್ತೆಕೋಲ, ಅನ್ನಸಂತರ್ಪಣೆ, ಊಟ, ಉಪಾಹಾರ, ವಾಹನ ನಿಲುಗಡೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳಷ್ಟು ಅಚ್ಚುಕಟ್ಟಾಗಿ ನಡೆದುಬಂದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದೈವಸ್ಥಾನವು ಅದ್ಬುತ ರೀತಿಯಲ್ಲಿ ನಿರ್ಮಾಣಗೊಂಡಿದ್ದು ಇಂತಹ ದೈವಸ್ಥಾನಗಳು ಜಿಲ್ಲೆಯಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಇಲ್ಲಿ ಹೊಸ ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಅಲ್ಲದೆ ಕೇವಲ 60 ದಿನಗಳಲ್ಲಿ ದೈವಸ್ಥಾನ ನಿರ್ಮಾಣಗೊಂಡಿರುವ ಬಗ್ಗೆ ಅತಿಥಿ, ಅಭ್ಯಾಗತರು ಹಾಗೂ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.