ಕೋಲ್ಪೆಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಸಂಪನ್ನ

0

ಬ್ರಹ್ಮಕಲಶದ ದೃಶ್ಯ ನೋಡಿದರೆ ಜೀವನ ಪಾವನ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ

ಸಮಸ್ಯೆಯನ್ನು ನೀಗಿಸುವ ಪ್ರಯತ್ನಗಳು ನಮ್ಮಿಂದಲೇ ಆಗಬೇಕು: ಡಾ| ಕಲ್ಲಡ್ಕ ಪ್ರಭಾಕರ ಭಟ್

ಎಲ್ಲರಿಗೂ ನೆಮ್ಮದಿಯ ಜೀವನ ಸಿಗುವಂತಾಗಬೇಕು: ಶೇಖರ ನಾರಾವಿ

ವಿಟ್ಲ: ದೇಶ ಭಕ್ತಿ ನಮ್ಮಲ್ಲಿರಬೇಕು. ಇದೊಂದು ಸುಂದರ ತಾಣವಾಗಿ ಮಾರ್ಪಾಟಾಗಿದೆ. ಕ್ಷೇತ್ರಕ್ಕಾಗಿ ದುಡಿದ ಊರವರನ್ನು ಅಭಿನಂದಿಸಬೇಕಾದ ಕಾಲಘಟ್ಟವಿದು. ಬ್ರಹ್ಮಕಲಶದ ದೃಶ್ಯ ನೋಡಿದರೆ ಜೀವನ ಪಾವನವಾಗುತ್ತದೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರು ಹೇಳಿದರು.


ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.೮ರಂದು ನಡೆದ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಈ ದೇಶಕ್ಕೆ ಇಂದು ಸೇನಾನಿಗಳ ಅವಶ್ಯಕತೆಯಿದೆ. ಸೇನಾನಿಗಳನ್ನು ದೇಶಕ್ಕೆ ಕೊಡುವ ಕೆಲಸ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಆಗಬೇಕಿದೆ. ನಮ್ಮನ್ನು ಅಸುರರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಆತಂಕದ ವಾತಾವರಣ ಇದೀಗ ನಿರ್ಮಾಣವಾಗಿದೆ. ನಮ್ಮ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಧರ್ಮ, ಸಂಸ್ಕ್ರತಿಗೆ ಮಾರಕವಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿರಬೇಕು. ಸ್ವಾರ್ಥ ಮುಕ್ತ ಬದುಕನ್ನು ಸಾಗಿಸಿದ ಧೀಮಂತ ಕಶಿ ವಿಶ್ವನಾಥರು. ಊರಿನ ಕೀರ್ತಿಯನ್ನು ಉಳಿಸುವ ಪ್ರಯತ್ನ ನಿಮ್ಮೆಲ್ಲರಿಂದ ಆಗಲಿ ಎಂದು ಶುಭ ಹಾರೈಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕರವರು ಧಾರ್ಮಿಕ ಉಪನ್ಯಾಸ ನೀಡಿ ಸಮಸ್ಯೆಯನ್ನು ನೀಗಿಸುವ ಪ್ರಯತ್ನಗಳು ನಮ್ಮಿಂದಲೇ ಆಗಬೇಕು. ಕಶಿ ವಿಶ್ವನಾಥರು ಮಹಾನ್ ಸಂಘಟಕ, ಸಾಮರಸ್ಯ, ಸಮನ್ವಯದ ಕಾರ್ಯವನ್ನು ಅವರು ಮಾಡಿದ್ದಾರೆ. ಪರಸ್ಪರ ಅನ್ಯೋನ್ಯತೆ ತರುವ ಕೆಲಸವನ್ನು ದೇವಾಲಯಗಳು ಮಾಡುತ್ತವೆ. ಹಿಂದುತ್ವದ ಕಾರ್ಯಕ್ಕೆ ಪೂರಕವಾದ ಸಹಕಾರ ನೀಡುವ ಕೆಲಸವಾಗಬೇಕಿದೆ. ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಕಾಲಘಟ್ಟವಿದು. ತುಷ್ಟೀಕರಣದ ನೀತಿಯಿಂದ ದೇಶ ವಿಭಜನೆಯತ್ತ ಸಾಗಿದೆ. ಹಿಂದುಗಳಿಗೆ ಹಿಂದೂಗಳೆ ವಿರೋಧಿಗಳು. ಅರ್ಥಮಾಡಿಕೊಂಡು ಬದುಕುವ ಚಿಂತನೆ ನಮ್ಮಲ್ಲಿರಬೇಕು. ಮಾದರಿಯಾಗಿರುವ ಈ ಗ್ರಾಮ ಎಚ್ಚೆತ್ತುಕೊಳ್ಳಬೇಕಾಗಿದೆ. ನಾವು ಕೋಮುವಾದಿಗಳಲ್ಲ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ನಾವು ನಮ್ಮೊಳಗಿನ ಭೇದಗಳನ್ನು ಬಿಟ್ಟು ಸಂಘಟಿತರಾಗಬೇಕಿದೆ ಎಂದರು. ಆಂಗ್ಲ ಭಾಷೆಯ ವ್ಯಾಮೋಹದಿಂದ ನಮ್ಮ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ಕನ್ನಡ ಶಾಲೆಯನ್ನು ಉಳಿಸುವ ಪ್ರಯತ್ನವಾಗಬೇಕು. ಸುಸಂಸ್ಕೃತರಾಗಿ ಬಾಳಿ ಬದುಕುವ ಜೀವನ ನಮ್ಮದಾಗಲಿ. ನಮ್ಮ ಜೀವನ ನಡೆಯುವುದು ಪಾಪ ಪುಣ್ಯದಲ್ಲಿ. ಭಾಷೆ, ಸಂಸ್ಕೃತಿ, ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು ಡಾ. ಪ್ರಭಾಕರ ಭಟ್ ತಿಳಿಸಿದರು.

ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ನಾರಾವಿರವರು ಮಾತನಾಡಿ ದೇವಾಲಯವನ್ನು ಕಂಡರೆ ಗ್ರಾಮದ ಅಭಿವೃದ್ಧಿ ತಿಳಿಯುತ್ತದೆ. ಆದರ್ಶ ಗ್ರಾಮವನ್ನಾಗಿ ಮಾಡಿರುವ ಕೀರ್ತಿ ದಿ. ಕಶಿ ವಿಶ್ವನಾಥರವರಿಗೆ ಸಲ್ಲಬೇಕು. ದೇವಸ್ಥಾನಗಳು ಶೈಕ್ಷಣಿಕ, ಸಾಂಸ್ಕೃತಿಕವಾಗಿ ತೊಡಗಿಕೊಳ್ಳಬೇಕು. ಎಲ್ಲರಿಗೂ ನೆಮ್ಮದಿಯ ಜೀವನ ಸಿಗುವಂತಾಗಬೇಕು ಎಂದರು.

ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದ ಹಲವರನ್ನು ಗೌರವಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ, ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆ, ದಿಗ್ವಿಜಯ ಗ್ರೂಪ್ ಆಫ್ ಕಂಪೆನೀಸ್ ನ ಚೆಯರ್ ಮ್ಯಾನ್ ದಿನಕರ ಭಟ್ ಮಾವೆ, ಕಮಲಕೃಷ್ಣ ಭಟ್ ಕೂಡೂರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರ ಪತ್ನಿ ಮೋನಿಷಾ ಶೆಟ್ಟಿ, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್.ಮುಕ್ಕುಡ ರವರ ಪತ್ನಿ ಆಶಾ ಸುರೇಶ್ ಕೆ.ಎಸ್.ಮುಕ್ಕುಡ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಹಾಗೂ ಅವರ ಪತ್ನಿ ಮೋನಿಷಾ ಶೆಟ್ಟಿರವರು ಸ್ವಾಮೀಜಿಗೆ ಫಲಪುಷ್ಪ ನೀಡಿ ಗೌರವಿಸಿದರು.

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಪುಲ್ಲ ಚಂದ್ರ ಪಿ.ಜಿ.ಕೋಲ್ಪೆರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರಾಧ್ಯ ಸೂರ್ಯ ಪ್ರಾರ್ಥಿಸಿದರು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ವೇದಿಕೆಯಲ್ಲಿ ಸ್ವಾಮೀಜಿ ಯವರಿಂದ ಗೌರವ ಸ್ವೀಕರಿಸಿದವರ ಪರಿಚರ ಹೇಳಿ, ವಂದಿಸಿದರು. ಪ್ರದೀಪ್ ಸೂರ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸಾಗಿದೆ
ಜ.೩ರಂದು ಆರಂಭಗೊಂಡ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.೮ರಂದು ಸಂಪನ್ನಗೊಂಡಿದೆ. ಊರ ಪರವೂರ ಸಾವಿರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ದೇವರ ದರುಶನ ಪಡೆದು ಪುನೀತರಾದರು. ಈ ಒಂದು ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶದಲ್ಲಿ ಹಲವರ ನಿಸ್ವಾರ್ಥ ಸೇವೆಯಿದೆ. ಹಲವರು ರಾತ್ರಿ ಹಗಲೆನ್ನದೆ ಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದಾರೆ. ವಿವಿಧ ರೀತಿಯಲ್ಲಿ ಸಹಕಾರ ಮಾಡಿದ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ನಾವೂ ಆಭಾರಿಯಾಗಿzವೆ.
ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು
ಅಧ್ಯಕ್ಷರು , ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ

ಹಲವರ ಬೆಲೆಕಟ್ಟಲಾಗದ ತ್ಯಾಗದ ಸೇವೆಯಿಂದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ
ಸಂಘಟನೆಯ ಮೂಲಕ ಗ್ರಾಮದ ಉತ್ತರೋತ್ತರ ಅಭಿವೃದ್ದಿಯಾಗಲಿ. ನಮ್ಮ ಕ್ಷೇತ್ರದ ಅಭಿವೃದ್ದಿಯಲ್ಲಿ ಎಲ್ಲರೂ ಸಹಕರಿಸಿದ್ದಾರೆ. ಹಲವರ ಬೆಲೆಕಟ್ಟಲಾಗದ ತ್ಯಾಗದ ಸೇವೆ ಇಲ್ಲಿ ನಡೆದಿದೆ. ಅದರಿಂದಾಗಿಯೇ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದೆ. ಸಂಸ್ಕಾರ ಕೊಡುವ ಕೆಲಸಗಳು ಕ್ಷೇತ್ರದಿಂದ ನಿರಂತರವಾಗಿ ಆಗಲಿದೆ. ಎಲ್ಲಾ ಅಭಿವೃದ್ದಿ ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಿದವರಿಗೆ ನಾವು ಋಣಿಯಾಗಿದ್ದೆವೆ. ಇಡ್ಕಿದು ಗ್ರಾಮವನ್ನು ಪರಮವೈಭವಕ್ಕೆ ಕೊಂಡುಹೋಗಲು ಎಲ್ಲರ ಸಹಕಾರ ಅಗತ್ಯ.
ಸುರೇಶ್ ಕೆ.ಎಸ್.ಮುಕ್ಕುಡ ಆಡಳಿತ ಮೊಕ್ತೇಸರರು

LEAVE A REPLY

Please enter your comment!
Please enter your name here