ತಾ.ಪಂ.ಕಚೇರಿ ಲೆಟರ್ ಹೆಡ್, ಸೀಲ್, ಇಒ ಸಹಿ ದುರುಪಯೋಗ ಆರೋಪ ; ಬೆರಳಚ್ಚುಗಾರ ಸಿಬ್ಬಂದಿ ವಿರುದ್ಧ ಇಒ ಪೊಲೀಸ್ ದೂರು-ಪ್ರಕರಣ ದಾಖಲು

0

ಪುತ್ತೂರು: ತಾಲೂಕು ಪಂಚಾಯತ್ ಕಛೇರಿಯ ಲೆಟರ್‌ಹೆಡ್, ಸೀಲ್ ಮತ್ತು ಸಹಿಯನ್ನು ದುರುಪಯೋಗಪಡಿಸಿ ನಂಬಿಕೆ ದ್ರೋಹ ಎಸಗಿರುವುದಲ್ಲದೆ ತನ್ನ ಸೇವಾ ಅನುಕೂಲತೆಗಾಗಿ ಸರ್ಕಾರದ ಜವಾಬ್ದಾರಿಯುತ ಕೆಲಸದ ವಿರುದ್ಧವಾಗಿ ಮೋಸದಿಂದ ದುರ್ಲಾಭ ಪಡೆಯಲು ಪ್ರಯತ್ನಿಸಿರುವುದಾಗಿ ಆರೋಪಿಸಿ ತಾಲೂಕು ಪಂಚಾಯತ್ ಕಛೇರಿಯ ಬೆರಳಚ್ಚುಗಾರ ಕೆ.ಶಿವಾನಂದ ಎಂಬವರ ಮೇಲೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿಯವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಕೆ.ಶಿವಾನಂದರವರು ನಿಯೋಜನೆ ಮೇರೆಗೆ ಬೆರಳಚ್ಚುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಛೇರಿಯ ಪತ್ರ ವ್ಯವಹಾರ ರವಾನೆ ಸಹಾಯಕರಾಗಿಯೂ ಅವರೇ ನಿರ್ವಹಿಸುವುದಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಪಿಟೀಷನ್ ಒಂದರಲ್ಲಿ ಜೂ.25ರಂದು ತೀರ್ಪಾಗಿದ್ದು ಸದ್ರಿ ತೀರ್ಪಿನಲ್ಲಿ ಥರ್ಡ್ ರೆಸ್ಪೋಂಡೆಂಟ್, ಎಕ್ಸಿಕ್ಯುಟಿವ್ ಆಫೀಸರ್ ತಾ.ಪಂ. ಪುತ್ತೂರು ಹ್ಯಾಸ್ ಅಗ್ರೀಡ್ ಟು ರೆಗ್ಯುಲರೈಝ್ ದಿ ಸರ್ವಿಸ್ ಅಫ್ ದಿ ಪಿಟಿಷನರ್.‌ ದಿ ಥರ್ಡ್ ರೆಸ್ಪೋಂಡೆಂಟ್ ಹ್ಯಾಸ್ ಗಿವನ್ ಕನ್ಸೆಂಟ್ ಬೈ ಎ ಲೆಟರ್ ಡೇಟೆಡ್ 16-06-2022 ಎಡ್ರೆಸ್‌ಡ್ ಟು ಶ್ರೀ ಎ.ಕೆ.ವಸಂತ್ ಎಂದು ಉಲ್ಲೇಖಿಸಿದ್ದು ತನ್ನ ಗಮನಕ್ಕೆ ಬಂದಿದೆ. ಆದರೆ ಈ ರೀತಿಯಲ್ಲಿ ಯಾವುದೇ ಪತ್ರ ವ್ಯವಹಾರ ನಡೆದಿರುವುದಿಲ್ಲ. ಕಚೇರಿ ರವಾನೆ ವಹಿಯನ್ನು ಪರಿಶೀಲಿಸಿದಾಗ ಸದ್ರಿ ದಿನಾಂಕದಂದು ದ.ಕ.ಜಿ.ಪ.ಪ್ಯಾನಲ್ ವಕೀಲರಾದ ಎ.ಕೆ.ವಸಂತ ಮತ್ತು ಶಿವಾನಂದರ ಖಾಸಗಿ ವಕೀಲರಾದ ಕೆ.ಗೋವಿಂದರಾಜ್‌ರವರಿಗೂ ಪತ್ರ ರವಾನೆಯಾಗಿರುತ್ತದೆ. ತಾ.ಪಂ.ಕಚೇರಿಯಿಂದ ಅಧಿಕೃತವಾಗಿ ಯಾವುದೇ ಪತ್ರ ವ್ಯವಹಾರ ನಡೆದಲ್ಲಿ ಅಥವಾ ಅಧಿಕೃತವಾಗಿ ರವಾನೆಯಾಗಿದ್ದಲ್ಲಿ ವ್ಯವಸ್ಥಾಪಕರ ಗಮನಕ್ಕೆ ಬಂದಿರಬೇಕು ಮತ್ತು ಕಚೇರಿ ಪ್ರತಿ ಕಡತದಲ್ಲಿ ಇರಬೇಕು. ಆದರೆ ಈ ದಿನಾಂಕದ ಪತ್ರಗಳ ಪ್ರತಿಗಳು ವ್ಯವಸ್ಥಾಪಕರ ಗಮನಕ್ಕೂ ಬಾರದೆ, ಕಚೇರಿಯಲ್ಲಿ ಕಡತದಲ್ಲಿಯೂ ಇರುವುದಿಲ್ಲ. ಶಿವಾನಂದರು ನನ್ನ ಗಮನಕ್ಕೆ ಬಾರದೆ ಕಚೇರಿಯ ಲೆಟರ್ ಹೆಡ್, ರಬ್ಬರ್ ಸ್ಟಾಂಪ್ ರವಾನೆ ವಹಿ ಮತ್ತು ನನ್ನ ಸಹಿಯನ್ನು ತನ್ನ ವೈಯಕ್ತಿಕ ಹಾಗೂ ಸ್ವಹಿತಾಸಕ್ತಿ ಉದ್ದೇಶಕ್ಕೆ ಬಳಸಿ ಕಚೇರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿರುವುದು ಕಂಡು ಬರುತ್ತಿದೆ. ಅಲ್ಲದೆ ಅವರು ನಂಬಿಕೆ ದ್ರೋಹ ಎಸಗಿದ್ದು ತನ್ನ ಸೇವಾ ಅನುಕೂಲತೆಗಾಗಿ ಸರ್ಕಾರದ ಜವಾಬ್ದಾರಿಯುತ ಕೆಲಸದ ವಿರುದ್ಧವಾಗಿ ಮೋಸದಿಂದ ದುರ್ಲಾಭ ಪಡೆಯಲು ಪ್ರಯತ್ನಿಸಿರುತ್ತಾರೆ ಎಂದು ನವೀನ್ ಭಂಡಾರಿಯವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಶಿವಾನಂದರ ವಿರುದ್ಧ 406,465,468,471,420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ

‘ನನ್ನ ಮೇಲೆ ಸುಳ್ಳು ಆಪಾದನೆ’

ಆರೋಪದ ಕುರಿತು ಪ್ರತಿಕ್ರಿಯಿಸಿರುವ ಕೆ.ಶಿವಾನಂದ ಅವರು ‘ನಾನು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರ ಲೆಟರ್ ಹೆಡ್, ಸೀಲ್ ಮತ್ತು ಸಹಿಯನ್ನು ದುರುಪಯೋಗಪಡಿಸಿಲ್ಲ. ನನ್ನ ಮೇಲೆ ಸುಮ್ಮನೆ ಆಪಾದನೆ ಮಾಡಲಾಗಿದೆ.ಪ್ರ ಕರಣವೊಂದಕ್ಕೆ ಸಂಬಂಧಿಸಿ ಇಒ ಅವರೇ ನನಗೆ ಪತ್ರ ನೀಡಿದ್ದು’ ಎಂದು ಸ್ಪಷ್ಟನೆ ನೀಡಿದ್ದಾರೆ. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರತಿಕ್ರಿಯೆಗಾಗಿ ಸಂಪರ್ಕಕ್ಕೆ ಲಭ್ಯರಾಗಿಲ್ಲ.

LEAVE A REPLY

Please enter your comment!
Please enter your name here