ಉಪ್ಪಿನಂಗಡಿ: ಇಲ್ಲಿನ ಪೇಟೆಯ ಅಂಗಡಿ, ಹೋಟೆಲ್ಗಳಿಗೆ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಜಂಟಿ ದಾಳಿ ನಡೆಸಿದ್ದು, ಷರತ್ತು, ನಿಯಮ ಉಲ್ಲಂಘಿಸಿ ವ್ಯಾಪಾರ, ವಹಿವಾಟು ನಡೆಸುವುದನ್ನು ಪತ್ತೆ ಹಚ್ಚಿ 15 ಪ್ರಕರಣ ದಾಖಲು ಮಾಡಿಕೊಂಡು ದಂಡ ವಸೂಲಿ ಮಾಡಿದೆ.
ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈಯವರು ಉಪ್ಪಿನಂಗಡಿಯಲ್ಲಿರುವ ಹೋಟೇಲ್ ಮತ್ತು ಅಂಗಡಿಗಳಿಗೆ ದಾಳಿ ನಡೆಸಿದ್ದು, ಹೋಟೇಲ್ನಲ್ಲಿ ಸ್ವಚ್ಛತೆ ಇಲ್ಲದೆ ಮತ್ತು ಆಹಾರ ತಯಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮವನ್ನು ಉಲ್ಲಂಘಿಸಿರುವುದು ಮತ್ತು ಬೇಕರಿಗಳಲ್ಲಿ ಕಲಬೆರಕೆ ಮಿಶ್ರಣ ಮಾಡುವುದನ್ನು ಪತ್ತೆ ಹಚ್ಚಿ ಒಟ್ಟು 15 ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ರವರು ಅಂಗಡಿ ಮತ್ತು ಹೋಟೆಲ್ಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಪತ್ತೆ ಹಚ್ಚಿ ಒಟ್ಟು 5 ಪ್ರಕರಣ ದಾಖಲಿಸಿ ದಂಡ ವಿಧಿಸಿದರು.
ಚಿಲ್ಲರೆಯಾಗಿ ಸಿಗರೇಟು ಮಾರುವಂತಿಲ್ಲ-ಡಾ. ದೀಪಕ್ ರೈ: ಪೇಟೆಯ ಅಂಗಡಿಗಳಲ್ಲಿ ನಿಯಮ ಪ್ರಕಾರ ಸಿಗರೇಟುಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡುವಂತಿಲ್ಲ. ಚಿಲ್ಲರೆ ಮಾರಾಟ ಮಾಡುವುದರಿಂದಾಗಿ ಮಕ್ಕಳಲ್ಲಿ ಧೂಮಪಾನ ಸೇವನೆ ಅಧಿಕವಾಗಿರುತ್ತದೆ. ಮಾರುತಿ, ಗುಟ್ಕಾ ಮೊದಲಾದ ತಂಬಾಕು ಪದಾರ್ಥಗಳನ್ನು ಅಂಗಡಿ ಮುಂದೆ ಡಿಸ್ಪ್ಲೆ ಮಾಡುವಂತಿಲ್ಲ ಮತ್ತು ಮಕ್ಕಳಿಗೆ ಕಾಣುವಂತೆ ಇಡುವಂತಿಲ್ಲ. ಇದೆಲ್ಲವೂ ವ್ಯಾಪಾರದ ನಿಯಮ ಉಲ್ಲಂಘನೆ ಆಗುತ್ತದೆ. ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ರೈ ಪ್ರತಿಕ್ರಿಯಿಸಿದ್ದಾರೆ.