ತಾ.ಯುವಜನ ಒಕ್ಕೂಟದಿಂದ ವಿವೇಕಾನಂದ ಜಯಂತಿ, ಯುವ ಸಪ್ತಾಹ, ತಾಲೂಕು ಯುವ ಪ್ರಶಸ್ತಿ ಪ್ರದಾನ

0

ಪುತ್ತೂರು: ತಾಲೂಕು ಪಂಚಾಯತ್ ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ, ಯುವ ಸಪ್ತಾಹ, ವಿವೇಕ ರಥ-ಯುವ ಪಥ ಹಾಗೂ ತಾಲೂಕು ಯುವ ಪ್ರಶಸ್ತಿ ಪ್ರದಾನ ಸಮಾರಂಭವು ಜ.14ರಂದು ನೆಹರು ನಗರದ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು.

ವಿಷ್ಣು ಯುವಕ ಮಂಡಲ ಮಜ್ಜಾರಡ್ಕ, ವಿಕ್ರಂ ಯುವಕ ಮಂಡಲ ಶಾಂತಿಗೋಡು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ನವೋದಯ ಮಹಿಳಾ ಮಂಡಲ ಬನ್ನೂರು, ಸ್ಪೂರ್ತಿ ಮಹಿಳಾ ಮಂಡಲ ಹಾಗೂ ವೈಯಕ್ತಿಕ ವಿಭಾಗದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಮನು ಕುಮಾರ್, ಕ್ರೀಡೆಯಲ್ಲಿ ನಿಶ್ಚಲ್ ಕೆ.ಜೆ., ಯುವ ಜನತೆಯಲ್ಲಿ ಹರಿಪ್ರಸಾದ್, ಧಾರ್ಮಿಕದಲ್ಲಿ ಮನ್ಮಥ ಶೆಟ್ಟಿ, ಕ್ರೀಡೆಯಲ್ಲಿ ಧನ್ವಿ ಜೆ.ರೈ, ಸಾಹಿತ್ಯದಲ್ಲಿ ಅಪೂರ್ವ ಕಾರಂತ್ ಹಾಗೂ ಸಂಘಟನೆಯಲ್ಲಿ ರಾಜೇಶ್ ಮಯೂರರವರಿಗೆ 2021-22ನೇ ಸಾಲಿನ ತಾಲೂಕು ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯುವ ಜನತೆಯನ್ನು ದೇಶವನ್ನು ಪ್ರೀತಿಸುವ, ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸರಕಾರ ಯುವಕ ಮಂಡಲಗಳು ವಿವಿಧ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಸ್ವಾಮಿ ವಿವೇಕಾನಂದರವರೇ ಯುವ ಜನತೆಗೆ ಪ್ರೇರಣೆ. ವಿಮರ್ಷೆ, ಪರಾಮರ್ಷೆ ಮಾಡುವ ಸತ್ಯಾಸತ್ಯ ತಿಳಿಯುವ ಶಕ್ತಿ ವಿವೇಕಾನಂದರಲ್ಲಿತ್ತು. ವಿವೇಕಾನಂದರ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಎದುರಿಸಿ ಗುರಿ ಮುಟ್ಟುವ ಸಾಧನೆ ಯುವಕರ‍ದ್ದಾಗಬೇಕು. ಯುವ ಸಪ್ತಾಹದ ಮೂಲಕ ವಿವೇಕಾನಂದರ ಆದರ್ಶಗಳನ್ನು ತಿಳಿಸುವ, ದುಶ್ಚಟ ಮುಕ್ತ ಸಮಾಜ ನಿರ್ಮಾಣ, ಸಮಾಜ ದ್ರೋಹಿ ಕೆಲಸಗಳಲ್ಲಿ ಭಾಗಿಯಾದವರ ತಿದ್ದುವ ಕಾರ್ಯ ಯುವ ಜನತೆಯದ್ದಾಗಬೇಕು. ಯುವಕ ಮಂಡಲ, ವಿದ್ಯಾರ್ಥಿ ಸಂಘಟನೆಗಳು ಒಂದೇ ಉದ್ದೇಶಕ್ಕೆ ಸೀಮಿತವಾಗಿರದೇ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಯುವ ಸಂಸ್ಥೆಗಳು ಕೆಲಸ ಮಾಡಬೇಕು ಎಂದರು.

ಯುವ ಸಂದೇಶ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ ಮಾತನಾಡಿ, ಯುವ ಸಮುದಾಯ ಆನಂದದ ಕಡೆಗೆ ಹೋಗುತ್ತಿಲ್ಲ. ಸುಖದ ಕಡೆಗೆ ಹೋಗುತ್ತಿದೆ. ಕವನ ಓದುವುದರಿಂದ ಆನಂದ ಲಭಿಸುತ್ತಿದೆ. ನಿಂತ ನೀರಲ್ಲಿ ಕ್ರೀಮಿ ಕೀಟಗಳು ಹುಟ್ಟಿಕೊಳ್ಳುವಂತೆ ಕೆಲಸವಿಲ್ಲದ ಮನುಷ್ಯನಲ್ಲಿಯೂ ಅನ್ಯಾಯ, ಅತ್ಯಾಚಾರಗಳು ಹುಟ್ಟಿಕೊಳ್ಳುತ್ತದೆ ಎಂದು ವಿವೇಕಾನಂದರು ತಿಳಿಸಿದ್ದರು. ಹೀಗಾಗಿ ಕೆಲಸ ಮಾಡಬೇಕು. ಕೆಲಸ ಮಾಡಿ ಚೈತನ್ಯವನ್ನು ಕಳೆದುಕೊಳ್ಳಬಾರದು. ಸರಕಾರಿ, ಕಂಪನಿ ಉದ್ಯೋಗವೇ ಮುಖ್ಯವಲ್ಲ. ಅದನ್ನು ಬಿಟ್ಟು ಪ್ರಯತ್ನಗಳನ್ನು ಮಾಡಬೇಕು. ಯುವ ಜನತೆ ಓದಿನ ಕಡೆಗೆ ಬರಬೇಕು. ಬದುಕು ಮದುವೆಯಲ್ಲಿ ಮಾತ್ರವಲ್ಲ ಪ್ರೀತಿಯ ಸೋಲಿಗಾಗಿ ಹೆಚ್ಚಿನ ಯುವಜನತೆ ಸಾಯುತ್ತಿದ್ದಾರೆ. ಕ್ಷಣಿಕ ಸುಖದ ಆಸೆಗಾಗಿ ಬಲಿಯಾಗಬೇಡಿ ಎಂದು ತಿಳಿಸಿದರು.

ವಿವೇಕಾನಂದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಕೆ.ಎಂ ಕೃಷ್ಣ ಭಟ್ ಮಾತನಾಡಿ, ಯುವ ಜನತೆಯಲ್ಲಿ ಅದ್ಬುತ ಶಕ್ತಿಯಿದೆ. ಅವರ ಜೀವನದ ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ ಎನ್ನುವುದು ಪ್ರಶಸ್ತಿ ಪಡೆದವರಲ್ಲಿ ಅರಿವಾಗುತ್ತಿದೆ. ನಾವು ಸಾಧನೆಯ ಪಥದಲ್ಲಿ ಸಾಗಬೇಕು. ಅವರ ಸಾಧನೆ ಮುಖ್ಯವಾಗಿದೆ. ಸಾಧನೆಯ ಪಥದ ಜೊತೆಗೆ ಪತನದ ನೋಟವೂ ಕಂಡು ಬರುತ್ತಿದ್ದು ಇದನ್ನು ಅರ್ಥವಮಾಡಿಕೊಂಡು ಯುವ ಜನತೆಗೆ ಮಾರ್ಗದರ್ಶನ ಮಾಡಬೇಕು. ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಯುವ ಜಾಗೃತಿ ಮೂಡಿಸಿ, ದುಶ್ಚಟ ಮುಕ್ತ ಸಮಾಜ ನಿರ್ಮಿಸುವ ಯುವ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡು ಜಾಗೃತಿಗೆ ಉತ್ತಮ ಸಹಕಾರ ದೊರೆತಿದೆ. ವಿವೇಕಾನಂದರ ಜೀವನ ಚರಿತ್ರೆಯನ್ನು ತಿಳಿದುಕೊಂಡರೆ ದೇಶದ ಇತಿಹಾಸವನ್ನು ತಿಳಿದುಕೊಂಡಂತೆ. ಇದಕ್ಕಾಗಿ ವಿವೇಕ ರಥ, ಯುವ ಪಥ ಧ್ಯೇಯದಲ್ಲಿ ಹಮ್ಮಿಕೊಂಡ ರಥ ಯಾತ್ರೆಗೆ ಉತ್ತಮ ಬೆಂಬಲ ಸಹಕಾರ ದೊರೆತಿದೆ. ಕೆಲವು ಕಡೆ ಯುವಕ, ಸಂಘಟನೆಯಲ್ಲಿ ಕೊರತೆ ಕಾಣುತ್ತಿದೆ. ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ನಮ್ಮ ಅಭಿವೃದ್ಧಿಯ ಜೊತೆಗೆ ಊರಿನ ಅಭಿವೃದ್ಧಿಯೂ ಸಾಧ್ಯ. ವ್ಯಕ್ತಿಗೆ ವೇದಿಕೆ ದೊರೆತಾಗ ಸಾಧನೆ ಮಾಡಲು ಸಾಧ್ಯವಿದೆ. ಯುವಕ, ಯುವತಿ ಮಂಡಲದ ಮೂಲಕ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ವೇದಿಕೆ ಒದಗಿಸಲಾಗುತ್ತಿದೆ ಎಂದರು.


ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಮಾತನಾಡಿ, ತಾಲೂಕಿನಲ್ಲಿ ಸುಮಾರು ಅರುವತ್ತು ಯುವಕ, ಯುವತಿ ಮಂಡಲ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಉತ್ತಮ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು. ಸಮಾಜ ಸೇವೆಗೆ ವೇದಿಕೆ ಮುಖ್ಯವಲ್ಲ. ಯುವಕ, ಯುವತಿ ಮಂಡಲಗಳು ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ಅವರವರ ಕ್ಷೇತ್ರದಲ್ಲಿ ಉತ್ತಮ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ತಾಲೂಕಿನ ಯುವಕ, ಯುವತಿ ಮಂಡಲಗಳು ನಡೆಸುವ ಕಾರ್ಯಕ್ರಮಗಳಿಗೆ ಯುವಜನ ಒಕ್ಕೂಟದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಮಾತನಾಡಿ, ಯುವಕರು ಸಂಘಟಿತರಾದಾಗ ದಾರಿ ತಪ್ಪುವುದು ಕಡಿಮೆಯಾಗುತ್ತದೆ. ಸಂಸ್ಕೃತಿ ಉಳಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಯ ಜೊತೆಗೆ ಉತ್ತಮ ಕಾರ್ಯಕ್ರಮ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ದೇಶದ ಮೂಲ ಪರಂಪರೆಯ ಉಳಿಸುವ ಕಾರ್ಯವಾಗಬೇಕು. ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುವ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಸುದ್ದಿ ಬಿಡುಗಡೆಯ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಮೀದ್ ಸಾಜ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಕರಿಸಿದ ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು, ಸಂಪ್ಯ ಅಕ್ಷಯ ಕಾಲೇಜುಗಳಿಗೆ ಗೌರವಿಸಲಾಯಿತು.

ವಿವೇಕ ರಥಕ್ಕೆ ಸ್ವಾಗತ:

ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ‘ವಿವೇಕ ರಥ-ಯುವ ಪಥ’ ರಥ ಯಾತ್ರೆಗೆ ಕಬಕದಲ್ಲಿ ಸ್ವಾಗತಿಸಲಾಯತು. ಮಂಗಳೂರಿನಿಂದ ಬಂದ ರಥ ಯಾತ್ರೆಗೆ ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಪುಷ್ಪಾರ್ಚನೆ ಮಾಡಿ ರಥವನ್ನು ಸ್ವಾಗತಿಸಿದರು. ಬಳಿಕ ಮುಖ್ಯ ರಸ್ತೆಯ ಮೂಲಕ ಸಾಗಿ ಕಾರ್ಯಕ್ರಮ ನಡೆಯುವ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದ ಬಳಿಗೆ ಆಗಮಿಸಿತು. ನಂತರ ನಗರದಲ್ಲಿ ಸಂಚರಿಸಿ, ಉಪ್ಪಿನಂಗಡಿಗೆ ತೆರಳಿತು.


LEAVE A REPLY

Please enter your comment!
Please enter your name here